ಗುರುವಾರ , ಜೂನ್ 24, 2021
27 °C
ಬನಿಹಾಲ್‌ ಸ್ಫೋಟ

ಜಮ್ಮು–ಶ್ರೀನಗರ ಹೆದ್ದಾರಿ ಕಾರ್‌ ಸ್ಫೋಟ: ಬಂಧಿತ ಉಗ್ರರಲ್ಲಿ ಪಿಎಚ್‌.ಡಿ ಪದವೀಧರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಶ್ರೀನಗರ: ಸಿಆರ್‌ಪಿಎಫ್‌ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನಗಳು ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ತೆರಳುವಾಗ ಸಂಭವಿಸಿದ್ದ ಕಾರು ಸ್ಫೋಟದ ಸಂಬಂಧ ಪೊಲೀಸರು ಆರು ಉಗ್ರರನ್ನು ಬಂಧಿಸಿದ್ದಾರೆ. ಇವರಲ್ಲಿ ಒಬ್ಬ ಉಗ್ರ ಪಿಎಚ್‌.ಡಿ ಪದವೀಧರ ಎಂದು ಪೊಲೀಸರು ಹೇಳಿದ್ದಾರೆ. 

ಮಾರ್ಚ್‌ 30ರಂದು ಬನಿಹಾಲ್‌ನಲ್ಲಿ ಆತ್ಮಾಹುತಿ ಕಾರ್‌ ಸ್ಫೋಟ ವಿಫಲಗೊಂಡಿತ್ತು. ಜೈಷ್‌–ಎ–ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗಳು ಜಂಟಿಯಾಗಿ ಕಾರು ಬಾಂಬ್‌ ಸ್ಫೋಟಕ್ಕೆ ಯೋಜನೆ ರೂಪಿಸಿದ್ದವು ಎಂದು ಜಮ್ಮು ಮತ್ತು ಕಾಶ್ಮೀರದ ಐಜಿಪಿ ಎಂ.ಕೆ.ಸಿನ್ಹಾ ಸೋಮವಾರ ಹೇಳಿದ್ದಾರೆ. 

ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಜವಾಹರ್‌ ಸುರಂಗ ಮಾರ್ಗದ ಸಮೀಪ ಸಿಆರ್‌ಪಿಎಫ್‌ ಸಿಬ್ಬಂದಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಇದೇ ಸಮಯದಲ್ಲಿ ಹುಂಡೈ ಕಂಪನಿಯ ಸ್ಯಾಂಟ್ರೊ ಕಾರು ಸ್ಫೋಟಗೊಂಡಿತ್ತು. ಭದ್ರತಾ ಪಡೆಯ ಕೆಲವು ವಾಹನಗಳನ್ನು ಹಿಂದೆಟ್ಟು ನುಗ್ಗಿದ್ದ ಕಾರು ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆ ಕಡಿಮೆ ಇದ್ದ ಕಾರಣ, ಸಿಆರ್‌ಪಿಎಫ್‌ ಪಡೆಗೆ ಯಾವುದೇ ಹಾನಿ ಸಂಭವಿಸಿರಲಿಲ್ಲ. ಆದರೆ, ಕಾರು ಸಂಪೂರ್ಣ ಛಿದ್ರಗೊಂಡಿತ್ತು. ಇದು ಭದ್ರತೆಯಲ್ಲಿ ಉಂಟಾದ ಲೋಪ ಎಂದು ಪರಿಗಣಿಸಿ ತನಿಖೆ ಕೈಗೊಳ್ಳಲಾಗಿತ್ತು. 

‘ಪ್ರಕರಣವನ್ನು ಬಹುತೇಕ ಭೇದಿಸಿದ್ದೇವೆ ಹಾಗೂ ಈವರೆಗೂ ಆರು ಜನರನ್ನು ಬಂಧಿಸಿದ್ದೇವೆ. ವಿಫಲಗೊಂಡ ದಾಳಿಯ ಯೋಜನೆ ರೂಪಿಸಿದ್ದವರು ಜೈಷ್‌ ಮತ್ತು ಹಿಜ್ಬುಲ್‌ ಸಂಘಟನೆಗಳ ಉಗ್ರರು. ಪಾಕಿಸ್ತಾನದ ಉಗ್ರ ಮುನ್ನಾ ಬಿಹಾರಿ ನೇತೃತ್ವದಲ್ಲಿ ದಾಳಿಯ ಯೋಜನೆ ರೂಪಿಸಲಾಗಿತ್ತು’ ಎಂದು ಹೇಳಿದ್ದಾರೆ. 

ನಿಷೇಧಿತ ಜಮ್ಮತ್‌–ಎ–ಇಸ್ಲಾಮಿ ಸಂಘಟನೆಯ ವಿದ್ಯಾರ್ಥಿ ಘಟಕದ ಸದಸ್ಯನಾಗಿರುವ ಹಿಲಾಲ್‌ ಅಹ್ಮದ್‌ ಪಿಎಚ್‌.ಡಿ ಪದವೀಧರನಾಗಿದ್ದಾನೆ. 'ವಿದ್ಯಾರ್ಥಿಗಳಲ್ಲಿ ಆತಂಕ’ ವಿಷಯದ ಕುರಿತು ಸಂಶೋಧನೆ ಕೈಗೊಂಡಿದ್ದ ಹಿಲಾಲ್‌ನನ್ನು ಪಂಜಾಬ್‌ ಬಠಿಂಡಾದ ಸೆಂಟ್ರಲ್‌ ಯೂನಿವರ್ಸಿಟಿಯಲ್ಲಿ ಬಂಧಿಸಲಾಗಿದೆ.

‘ಹಲವು ರೀತಿಯ ಪರೀಕ್ಷೆಗಳ ಬಳಿಕ ಯುವಕರನ್ನು ಜಮೈತ್‌–ಉಲ್‌–ತಲ್ಬಾ ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತಿದೆ. ಅಲ್ಲಿ ಅವರಿಗೆ ತೀವ್ರವಾದ ಧಾರ್ಮಿಕ ಮನೋಭಾವವನ್ನು ಬೆಳೆಸಲಾಗುತ್ತದೆ ಹಾಗೂ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಹಲವು ಕಾರ್ಯಗಳಲ್ಲಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಐಜಿಪಿ ಸಿನ್ಹಾ ತಿಳಿಸಿದ್ದಾರೆ. 

ಕಳೆದ ತಿಂಗಳು ಹೆದ್ದಾರಿಯಲ್ಲಿ ನಡೆದಿದ್ದ ಸ್ಫೋಟ, ಫೆಬ್ರುವರಿ 14ರಂದು ನಡೆದ ಪುಲ್ವಾಮಾ ದಾಳಿಯ ನೆನಪು ಮರುಕಳಿಸಿತ್ತು. ಬನಿಹಾಲ್‌ನ ಕಾರ್‌ ಸ್ಫೋಟಕ್ಕೂ ಪುಲ್ವಾಮಾ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು. ಪುಲ್ವಾಮಾದಲ್ಲಿನ ಆತ್ಮಾಹುತಿ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದರು.

ಉಳಿದ ಐವರು ಬಂಧಿತರು, ಶೋಪಿಯಾನ್‌ನ ವಾಸೀಂ ಅಲಿಯಾಸ್‌ ‘ಡಾಕ್ಟರ್‌’, ಉಮರ್‌ ಶಫಿ, ಅಕಿಬ್‌ ಶಾ ಹಾಗೂ ಪುಲ್ವಾಮಾದ ಶಾಹಿದ್‌ ವಾನಿ ಅಲಿಯಾಸ್‌ ‘ವಾಟ್ಸನ್‌’ ಮತ್ತು ಓವೈಸ್ ಆಮಿನ್‌. 

ಬಿಬಿಎ ವಿದ್ಯಾರ್ಥಿಯಾಗಿರುವ ಓವೈಸ್‌ ಆಮಿನ್‌ ಯೋಜಿತ ದಾಳಿಗೆ ಬಳಸಲಾದ ಸ್ಯಾಂಟ್ರೊ ಕಾರಿನ ಚಾಲನೆ ಮಾಡುತ್ತಿದ್ದ. ಕಾರು ಸ್ಫೋಟಗೊಳ್ಳುತ್ತಿದ್ದಂತೆ ಹೊರಗೆ ಜಿಗಿದು, ಸಮೀಪದ ಹಳ್ಳಿಯ ಕಡೆಗೆ ಓಡಿದ್ದ. ಆತನನ್ನು ಬನಿಹಾಲ್‌ನಲ್ಲಿ ಏಪ್ರಿಲ್‌ 1ರಂದು ಬಂಧಿಸಲಾಗಿತ್ತು.

ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯೊಂದಿಗೆ 2018ರಿಂದ ಉಗ್ರ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗಿಯಾಗಿರುವ ರಾಯೀಸ್‌ ಖಾನ್‌ ಹೇಳಿದಂತೆ ಉಮರ್‌ ಶಫಿ, ಅಕಿಬ್‌ ಶಾ ಹಾಗೂ ಆಮಿನ್‌ ಕಾರ್ಯನಿರ್ವಹಿಸುತ್ತಿದ್ದರು. ಉಮರ್‌ ಶಫಿ ಶ್ರೀನಗರದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. 

ಕಾರ್‌ನಲ್ಲಿ ಎಲ್‌ಪಿಜಿ: ದಾಳಿಗೆ ಬಳಸಲಾದ ಸ್ಯಾಂಟ್ರೊ ಕಾರಿನಲ್ಲಿ ಎರಡು ಭಿನ್ನ ಗಾತ್ರದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಳವಡಿಸಲಾಗಿತ್ತು. ಕಾರಿನಲ್ಲಿ ‍ಪೆಟ್ರೋಲ್‌, ಇಂಧನ ಸಂಗ್ರಹಿಸುವ ಕ್ಯಾನ್‌, ಜಿಲಾಟಿನ್‌ ಕಡ್ಡಿಗಳು, ಯೂರಿಯಾ ಮತ್ತು ಸಲ್ಫರ್‌ ಹಾಗೂ ಸುಧಾರಿತ ಸ್ಫೋಟಕ ಸಿದ್ಧಪಡಿಸಲು ಬಳಸು ವಸ್ತುಗಳನ್ನು ಸಂಗ್ರಹಿಸಲಾಗಿತ್ತು. 

ಕಾರಿನ ಮಾಲೀಕ ಮತ್ತು ದಾಳಿಯ ಹಿಂದಿರುವ ಮಾಸ್ಟರ್‌ಮೈಂಡ್‌ ಇನ್ನಷ್ಟೇ ಪತ್ತೆಯಾಗಬೇಕಿದೆ. ಜಿಲಾಟಿನ್ ಕಡ್ಡಿಗಳನ್ನು ತಂದಿರುವ ಮೂಲಗಳ ಬಗೆಗೂ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು