ಭಾನುವಾರ, ಆಗಸ್ಟ್ 18, 2019
25 °C

ಬೀದಿಗಿಳಿದರೇಕೆ ವೈದ್ಯರು | ಕೊಲ್ಕತ್ತಾದಲ್ಲಿ ಅಂದು ಏನಾಯ್ತು? ಮುಂದೇನಾಗುತ್ತೆ?

Published:
Updated:

‘ಸೇವ್ ಡಾಕ್ಟರ್ಸ್‌.. ಸೇವ್ ಡಾಕ್ಟರ್ಸ್‌... #ಸೇವ್‌ಡಾಕ್ಟರ್ಸ್‌....(#SaveTheDoctors)' ಎಂಬ ಕೂಗು ‘ದೀದಿ’ ನಾಡು ಪಶ್ಚಿಮ ಬಂಗಾಳದ ಕೋಲ್ಕತ್ತದಿಂದ ಆರಂಭವಾಗಿ ಈಗ ಇಡೀ ದೇಶದೆಲ್ಲೆಡೆ ಒಕ್ಕೊರಲ, ಗಟ್ಟಿ ಧ್ವನಿಯಾಗಿ ಪ್ರತಿಧ್ವನಿಸುತ್ತಿದೆ.  

ಇದನ್ನೂ ಓದಿ: ಮಮತಾ ಮನವಿ- ಬೇಡಿಕೆ ಈಡೇರಿಸುತ್ತೇವೆ, ಕೆಲಸಕ್ಕೆ ಬನ್ನಿ

ಕೋಲ್ಕತ್ತದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಘಟನೆಗೆ ದೇಶ ವ್ಯಾಪಿ ಪ್ರತಿಭಟನೆ ವ್ಯಕ್ತವಾಗಿದೆ. ಕೋಲ್ಕತ್ತಾದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ವೃತ್ತಿನಿರತ ವೈದ್ಯರಿಗೆ ಭದ್ರತೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ವೈದ್ಯರು ಆಗ್ರಹಿಸಿದ್ದಾರೆ. 

ಇದನ್ನೂ ಓದಿ: ಕರ್ನಾಟಕ | ಮೂರು ವರ್ಷದಲ್ಲಿ 127 ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ

ಅತ್ತ ಪ್ರತಿಭಟನೆ ನಿಲ್ಲಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿದ್ದ ಎಚ್ಚರಿಕೆ ಸಂದೇಶಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಮಮತಾ ಬ್ಯಾನರ್ಜಿ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ವೈದ್ಯರ ಮೇಲಿನ ಹಲ್ಲೆ ಘಟನೆಗೂ ಕೆಲ ದಿನ ಮುಂಚೆ ನಡೆದ ರಾಜಕೀಯ ವೈಷ್ಯಮ್ಯದ ಕಾರ್ಯಕರ್ತರ ಹತ್ಯೆ ಘಟನೆಗಳು ಪಶ್ಚಿಮ ಬಂಗಾಳದಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಿಸಿವೆ. ಪರಿಸ್ಥಿತಿ ನಿಭಾಯಿಸಲು ಮಮತಾ ಬ್ಯಾನರ್ಜಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಇದನ್ನೂ ಓದಿ: ವೈದ್ಯರ ಮೇಲೆ ಸಂಸದ ಅನಂತಕುಮಾರ್‌ ಹೆಗಡೆ ಹಲ್ಲೆ ವಿವಾದ (7-1-17ರಂದು ಪ್ರಕಟವಾಗಿದ್ದ ಸುದ್ದಿ)

* ಮಾಹಿತಿಯೊಂದರ ಪ್ರಕಾರ, ಎಐಐಎಂಎಸ್‌ನಲ್ಲಿ ಎರಡು ವರ್ಷದಲ್ಲಿ (2013–2014) ವೈದ್ಯರು ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ 32 ಹಲ್ಲೆ ಪ್ರಕರಣ ನಡೆದಿವೆ.

* ಶುಶ್ರೂಷಕಿಯರ ಮೇಲೆ ನಡೆಸಿದ ಹಲ್ಲೆ ಪ್ರಕರಣ –16, ಗ್ರೂಪ್‌ ಸಿ ನೌಕರರ ಮೇಲೆ ನಡೆದ ಪ್ರಕರಣ –9, ವೈದ್ಯರ ಮೇಲೆ ನಡೆದ ಪ್ರಕರಣ –8.

ಇದನ್ನೂ ಓದಿ: ವೈದ್ಯರ ಮುಷ್ಕರ: ದೆಹಲಿ, ಹೈದರಾಬಾದ್‌ನಲ್ಲೂ ಚಿಕಿತ್ಸೆ ಇಲ್ಲದೇ ರೋಗಿಗಳ ಪರದಾಟ 

ವೈದ್ಯರ ಮೇಲಿನ ಹಲ್ಲೆ ಘಟನೆ ಹೇಗಾಯ್ತು? ಯಾಕಾಯ್ತು? ಮುಂದೇನಾಯ್ತು? ಎಂಬುದರ ಕುರಿತು ಒಂದು ಅವಲೋಕನ ಇಲ್ಲಿದೆ.

ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯಲು ಏನು ಕಾರಣ?

ಚಿಕಿತ್ಸೆ ಫಲಕಾರಿಯಾಗದೆ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಮಂಗಳವಾರ(ಜೂನ್‌ 11) 70 ವರ್ಷ ವಯಸ್ಸಿನ ರೋಗಿಯೊಬ್ಬರು ಮೃತಪಟ್ಟಿದ್ದರು. ಸಾವಿಗೆ ವೈದ್ಯರ ನಿರ್ಲಕ್ಷ್ಯ ಆರೋಪ ಹೊರಿಸಿ ಮೃತರ ಕುಟುಂಬದವರು ಇಬ್ಬರು ಕಿರಿಯ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. 

ಇದನ್ನೂ ಓದಿ: 17ರಂದು ದೇಶವ್ಯಾಪಿ ವೈದ್ಯರ ಮುಷ್ಕರ

ಹಲ್ಲೆ ಘಟನೆ ಏನೆಲ್ಲಾ ತಿರುವುಗಳನ್ನು ಪಡೆದುಕೊಂಡಿತು?

* ಘಟನೆ ನಡೆದ ತಕ್ಷಣಕ್ಕೆ ಹಲ್ಲೆಯನ್ನು ಖಂಡಿಸಿ ವೈದ್ಯರು ನಡೆಸಿದ ಪ್ರತಿಭಟನೆಯಲ್ಲಿ ಆಸ್ಪತ್ರೆಯ ಎಲ್ಲಾ ಹೊರ ಹೋಗಿ ಸೇವೆಯನ್ನು 9 ರಿಂದ 9ರ ವರಗೆ ಸ್ಥಗಿತಗೊಳಿಸಲಾಗಿತ್ತು.

* ವೈದ್ಯರು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದರು.

* ಪ್ರತಿಭಟನಾನಿರತ ವೈದ್ಯರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸಿದ ಮನವೊಲಿಕೆ ಪ್ರಯತ್ನ, ಶಿಸ್ತು ಕ್ರಮದ ಎಚ್ಚರಿಕೆಯೂ ಫಲಿಸಲಿಲ್ಲ. 

* ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯಿತು. ಮಮತಾ ಬ್ಯಾನರ್ಜಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.

* ಘಟನೆ ಕುರಿತಂತೆ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ, ಸಿಪಿಎಂ ಮಧ್ಯೆ ಪರಸ್ಪರ ಆರೋಪ ಪ್ರತ್ಯಾರೋಪಳು ನಡೆದವು.

* ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ವೈದ್ಯರು ಪ್ರತಿಭಟನೆಗಿಳಿದಿದ್ದರಿಂದ ಸೂಕ್ತ ಸೇವೆ ಲಭ್ಯವಾಗದೆ ರೋಗಿಗಳು ಪರದಾಡುವಂತಾಯಿತು


ಕಂದನನ್ನು ಹೊತ್ತು ಪರದಾಡಿದ ತಾಯಿ

* ರೋಗಿಗಳನ್ನು ಆಸ್ಪತ್ರೆಗೆ ಕರೆತಂದ ಸಂಬಂಧಿಕರೇ ಸ್ಟ್ರಚರ್‌ಗಳನ್ನು ಹಿಡಿದು ತೆರಳುವ ಹಾಗೂ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಹಲವೆಡೆ ನಿರ್ಮಾಣವಾಯಿತು.

* ದೇಶಾದಾದ್ಯಂತ ಸರ್ಕಾರಿ ವೈದ್ಯರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವಂತೆ ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆಯಾಗಿದೆ.

* ಭದ್ರತೆ ವಿಷಯವಾಗಿ ಸುಕ್ತ ಕಾನೂನು ರಚಿಸುವಂತೆ ಸರ್ಕಾರಗಳಿಗೆ ಸೂಚಿಸಬೇಕು ಎಂದು ಪಿಐಎಲ್‌ನಲ್ಲಿ ಮನವಿ ಮಾಡಲಾಗಿದೆ.

ಪಶ್ಚಿಮ ಬಂಗಾಳ ಸರ್ಕಾರ ಹೇಳುವುದೇನು?

ಘಟನೆಯ ಹಿಂದೆ ಬಿಜೆಪಿ ಮತ್ತು ಸಿಪಿಎಂನ ಕೈವಾಡವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ರಾಜಕೀಯ ಪಕ್ಷಗಳು ಮುಷ್ಕರಕ್ಕೆ ಪ್ರಚೋದನೆ ನೀಡುತ್ತಿವೆ ಎಂದು ಸರ್ಕಾರ ಆರೋಪಿಸಿತು.

* ಈ ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿತು. ಅವರಿಗೆ ಜಾಮೀನು ಸಹ ನೀಡಿಲ್ಲ.

* ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯವಹಿಸಿದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ವೈದ್ಯರ ಮನವೊಲಿಕೆಗೆ ದೀದಿ ಮಾಡಿದ್ದೇನು?

ಘಟನೆ ಬಳಿಕ ವೈದ್ಯರು ಭದ್ರತೆ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆಗಿಳಿದರು. ಸಿಎಂ ಮಮತಾ ಬ್ಯಾನರ್ಜಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಭೇಟಿ ಮಾಡಿ, ಪ್ರತಿಭಟನಾ ನಿರತ ಕಿರಿಯ ವೈದ್ಯರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು.

ಕೆಲಸಕ್ಕೆ ಹಾಜರಾಗಿ ಇಲ್ಲವೇ ಕ್ರಮ ಎದುರಿಸಲು ಸಿದ್ಧರಾಗಿ: ಮಮತಾ ಎಚ್ಚರಿಕೆ

ಈ ವೇಳೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಮುಷ್ಕರವನ್ನು ಗುರುವಾರ ಮಧ್ಯಾಹ್ನ 2 ಗಂಟೆ ಒಳಗೆ ಸ್ಥಗಿತಗೊಳಿಸಿ ಕೆಲಸಕ್ಕೆ ತೆರಳಬೇಕು. ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಗಡುವು ವಿಧಿಸಿ, ಪ್ರತಿಭಟನಾನಿರತ ವೈದ್ಯರಿಗೆ ಎಚ್ಚರಿಕೆ ನೀಡಿದ್ದರು.

‘ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ರಾಜಕೀಯ ಪಕ್ಷಗಳು ಮುಷ್ಕರಕ್ಕೆ ಪ್ರಚೋದನೆ ನೀಡುತ್ತಿವೆ. ಈ ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಇವರಿಗೆ ಜಾಮೀನು ಸಹ ದೊರೆತಿಲ್ಲ. ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯವಹಿಸಿದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಆ ಸಂದರ್ಭದಲ್ಲಿ ವೈದ್ಯರು ನ್ಯಾಯ ಬೇಕು ಎಂದು ಘೋಷಣೆ ಕೂಗಿದ್ದರು.

ರಾಜಭವನದಲ್ಲಿ ವೈದ್ಯರ ತಂಡ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರನ್ನು ಭೇಟಿಯಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದರು.

ಮಮತಾ ಬ್ಯಾನರ್ಜಿ ವಿಧಿಸಿದ್ದ ಗಡುವಿಗೂ ಮನ್ನಣೆ ನೀಡದ ವೈದ್ಯರು ಭದ್ರತೆಗೆ ಸಂಬಂಧಿಸಿದ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.

ವೈದ್ಯರ ಬೇಡಿಕೆಗಳೇನು?

* ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. 

* ಸುರಕ್ಷಿತ ವಾತಾವರಣ ಕಲ್ಪಿಸಬೇಕು.

* ವೈದ್ಯರು ಮತ್ತು ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾನೂನು ಜಾರಿಗೆ ತರಬೇಕು.

* ಕಾನೂನು ಉಲ್ಲಂಘಿಸಿದವರಿಗೆ ಕನಿಷ್ಠ 7 ವರ್ಷ ಶಿಕ್ಷೆ ವಿಧಿಸಲು ಅವಕಾಶ ಇರಬೇಕು. 

* ಕೋಲ್ಕತ್ತದಲ್ಲಿ ಡಾ.ಪ್ರತಿಭಾ ಮುಖರ್ಜಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು.

* ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಹಿರಂಗ ಕ್ಷಮೆಯಾಚಿಸಬೇಕು.

* ಮಮತಾ ಬ್ಯಾನರ್ಜಿ ಹಲ್ಲೆಗೊಳಗಾದ ವೈದ್ಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಬೇಕು. ಘಟನೆಯನ್ನು ಖಂಡಿಸಿ ಪ್ರಕಟಣೆ ಹೊರಡಿಸಬೇಕು.

* ಘಟನೆಯನ್ನು ತಕ್ಷಣ ತನಿಖೆಗ ವಹಿಸಬೇಕು.

* ಮತ್ತೆ ಇಂತಹ ಘಟನೆಗಳು ಮುರುಕಳಿಸದಂತೆ ಸೂಕ್ರ ಕ್ರಮ ಕೈಗೊಳ್ಳಬೇಕು.

* ಕಿರಿಯ ವೈದ್ಯರ ಮೇಲೆ ದಾಖಲಾಗಿರುವ ದೂರುಗಳನ್ನು ಷರತ್ತು ವಿಧಿಸದೆ ಹಿಂಪಡೆಯಬೇಕು.

* ಆಸ್ಪತ್ರೆಗೆ ಮೂಲಸೌಲಭ್ಯ ಒದಗಿಸಬೇಕು ಹಾಗೂ ಶಸ್ತ್ರಸಜ್ಜಿತ ಪೊಲೀಸ್‌ ಸಿಬ್ಬಂದಿ ನೇಮಿಸಬೇಕು.

ಕೇಂದ್ರ ಸರ್ಕಾರದ ನಿಲುವು ಏನು?

ವೈದ್ಯರಿಗೆ ಭದ್ರತೆ ಒದಗಿಸುವ ಸಂಬಂಧಿಸಿದ ವಿಷಯವನ್ನು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದರು.

ವೈದ್ಯರಿಗೆ ಸುರಕ್ಷಿತವಾದ ವಾತಾವರಣ ಕಲ್ಪಿಸುವುದು ಅಗತ್ಯ. ವೈದ್ಯರು ಸಮಾಜದ ಭಾಗವಾಗಿದ್ದಾರೆ ಎಂದು ಹೇಳಿದ್ದರು.

ಪ್ರತಿಷ್ಠೆಯಾಗಿಸಬೇಡಿ: ದೀದಿಗೆ ಸಲಹೆ

‘ವೈದ್ಯರ ಮುಷ್ಕರ ಪ್ರಕರಣವನ್ನು ಪ್ರತಿಷ್ಠೆಯಾಗಿ ಪರಿಗಣಿಸದೆ, ಸಮಸ್ಯೆಯನ್ನು ಸೌಹಾರ್ದದಿಂದ ಅಂತ್ಯಗೊಳಿಸಲು ಒತ್ತು ನೀಡಬೇಕು’ ಎಂದು ಹರ್ಷವರ್ಧನ್ ಅವರು ಮಮತಾ ಅವರಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ಸೌಹಾರ್ದವಾಗಿ ಮುಷ್ಕರ ಕೊನೆಗೊಳಿಸಬೇಕು ಹಾಗೂ ವೈದ್ಯರಿಗೆ ಕೆಲಸ ನಿರ್ವಹಿಸಲು ಭದ್ರತೆಯ ಭಾವ ನೀಡುವ ವಾತಾವರಣವನ್ನು ಕಲ್ಪಿಸಬೇಕು’ ಎಂದಿದ್ದಾರೆ.

ವೈದ್ಯರು ‘ಸಾಂಕೇತಿಕ ಪ್ರತಿಭಟನೆ ನಡೆಸಿ, ರೋಗಿಗಳ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಮರಳಬೇಕು’ ಎಂದು ಹರ್ಷರ್ಧನ್‌ ಮನವಿ ಮಾಡಿದ್ದಾರೆ.

ದೇಶದ ವಿವಿಧೆಡೆ ತಟ್ಟಿರುವ ಬಿಸಿ

ಘಟನೆ ಖಂಡಿಸಿ ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ದೇಶದೆಲ್ಲೆಡೆ ವೈದ್ಯರು ‘ಸೇವ್‌ ಡಾಕ್ಟರ್‌’ ಘೋಷಣಾ ಫಲಕಗಳೊಂದಿಗೆ ಪ್ರತಿಭಟನೆ ನಡೆಸಿ ಖಂಡಿಸಿದ್ದಾರೆ. ಹಲವೆಡೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. 

ಇನ್ನೂ ಕೆಲ ನಗರದಲ್ಲಿ ವೈದ್ಯರು ಹಣೆಗೆ ರಕ್ತ ಲೇಪಿತ ‘ಬ್ಯಾಂಡೇಜ್‌’ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವೈದ್ಯರ ಭದ್ರತೆ ವಿಷಯವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮುಷ್ಕರ ನಡೆಸುತ್ತಿರುವ ಕಿರಿಯ ವೈದ್ಯರಿಗೆ ಬೆಂಬಲ ಸೂಚಿಸಿ, ಮಹಾರಾಷ್ಟ್ರ, ದೆಹಲಿ, ಹೈದರಾಬಾದ್‌ನ ಏಮ್ಸ್‌ ಆಸ್ಪತ್ರೆ ವೈದ್ಯರು ಮುಷ್ಕರ ನಡೆಸಿದ್ದರಿಂದ ಚಿಕಿತ್ಸೆ ಇಲ್ಲದೇ ರೋಗಿಗಳು ಪರದಾಡಿದ್ದಾರೆ. 

ಕೋಲ್ಕತ್ತಾದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

17ರಂದು ಮುಷ್ಕರಕ್ಕೆ ಕರೆ

* ವೈದ್ಯರನ್ನು ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯು (ಐಎಂಎ) ಜೂನ್ 17ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಪ್ರತಿಭಟನೆ ಬೆಂಬಲಿಸಿ ಶುಕ್ರವಾರದಿಂದಲೇ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲೂ ಸೂಚನೆ ನೀಡಿದೆ.

* 17ರಂದು ಬೆಳಿಗ್ಗೆ 6 ಗಂಟೆಯಿಂದ ಎಲ್ಲಾ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ತುರ್ತುಸೇವೆ ಘಟಕ ಮತ್ತು ಅಪಘಾತ ಚಿಕಿತ್ಸಾ ವಿಭಾಗಗಳಷ್ಟೇ ಕಾರ್ಯನಿರ್ವಹಿಸಲಿವೆ. ಹೊರರೋಗಿಗಳ ವಿಭಾಗ ಸೇರಿ ಉಳಿದ ಎಲ್ಲಾ ಸೇವೆಗಳು ಬಂದ್‌ ಆಗಲಿವೆ ಎಂದು ಐಎಂಎ ಹೇಳಿದೆ.

* ಪ್ರತಿಭಟನಾನಿರತರಿಗೆ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಧೋರಣೆಯನ್ನು ಖಂಡಿಸಿ 450ಕ್ಕೂ ಹೆಚ್ಚು ವೈದ್ಯರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

* ಮುಖ್ಯಮಂತ್ರಿ ಬೇಷರತ್‌ ಕ್ಷಮೆ ಕೇಳಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ. 

* ಮುಷ್ಕರದ ಬಿಸಿ ಇತರ ರಾಜ್ಯಗಳಿಗೂ ವ್ಯಾಪಿಸಿದ್ದು ದೆಹಲಿ, ಮುಂಬೈ, ಹೈದರಾಬಾದ್‌ ಸೇರಿದಂತೆ ಅನೇಕ ನಗರಗಳಲ್ಲಿ ವೈದ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ?

ಘಟನೆ ನಡೆದ ಬಳಿಕ ರಾಜ್ಯದಲ್ಲೂ ವೈದ್ಯರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ವೈದ್ಯರ ಭದ್ರತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ಗೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರವೂ ವೈದ್ಯರು ಪ್ರತಿಭಟನೆ ನಡೆಸಿದ್ದು, ಹುಬ್ಬಳ್ಳಿಯಲ್ಲಿ ಶನಿವಾರ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕಿಮ್ಸ್ ವೈದ್ಯರು ತಲೆಗೆ ಬ್ಯಾಂಡೇಜ್‌ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ವೈದ್ಯಕೀಯ ಕ್ಷೇತ್ರದ ಏಳ್ಗೆಗೆ ಕ್ರಮಗಳು

ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆರೋಗ್ಯ ಸಚಿವಾಲಯವು 75 ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸಿದ್ಧಪಡಿಸಿದೆ. 

ವೈದ್ಯಕೀಯ ಆಯೋಗ ಮಸೂದೆ ಮತ್ತೆ ಮಂಡನೆಗೆ ಸಿದ್ಧತೆ

ಇದೇ 17ರಂದು ಆರಂಭವಾಗಲಿರುವ ಹೊಸ ಲೋಕಸಭೆಯ ಮೊದಲ ಅಧಿವೇಶನದಲ್ಲಿಯೇ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶದ ಮಸೂದೆಯನ್ನು ಮತ್ತೆ ಮಂಡಿಸಲು ಸರ್ಕಾರ ಸಜ್ಜಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ಯನ್ನು 2017ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ, 16ನೇ ಲೋಕಸಭೆಯ ಅವಧಿ ಮುಗಿದಿರುವುದರಿಂದ ಈ ಮಸೂದೆ ಈಗ ಅಸಿಂಧುವಾಗಿದೆ. ಹಾಗಾಗಿ ಹೊಸದಾಗಿ ಮಂಡಿಸುವ ಅಗತ್ಯ ಎದುರಾಗಿದೆ. 

ಹಿಂಸಾ ರಾಜಕಾರಣ: ಟಿಎಂಸಿ–ಬಿಜೆಪಿ ಸಂಘರ್ಷ

ಮೇ 23ರಿಂದ ಈಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ರಾಜಕೀಯ ಘರ್ಷಣೆಗಳಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಸತ್ತ 13 ಮಂದಿಯಲ್ಲಿ 7 ಮಂದಿ ಬಿಜೆಪಿ ಕಾರ್ಯಕರ್ತರಿದ್ದರೆ, 6 ಮಂದಿ ತೃಣಮೂಲ ಕಾಂಗ್ರೆಸ್‌ನವರು ಎಂದು ವರದಿಯಾಗಿದೆ.

‘ಈ ಹಿಂಸೆ ಮತ್ತು ಕೊಲೆಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾರಣ. ರಾಜ್ಯದಲ್ಲಿ ಕಾನೂನು– ಶಿಸ್ತು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ’ ಎಂದು ಬಿಜೆಪಿ ನಾಯಕರು ದೂರಿದ್ದಾರೆ. 

‘ರಾಜ್ಯದಲ್ಲಿರುವ ತೃಣಮೂಲ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರೇ ಸಂಚು ರೂಪಿಸಿ ಗಲಭೆ ಎಬ್ಬಿಸುತ್ತಿದ್ದಾರೆ’ ಎಂದು ಮಮತಾ ಆರೋಪಿಸಿದ್ದಾರೆ. 

ಹಿಂಸಾ ರಾಜಕಾರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ಆರೋಪ– ಪ್ರತ್ಯಾರೋಪಗಳು ನಡೆದವು. ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಲಾಠಿ ಪ್ರಹಾರವೂ ನಡೆದಿತ್ತು.
ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಮತ್ತು ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಕರಾಳ ದಿನ ಆಚರಿಸಿತು. ಆದರೆ, ಪಶ್ಚಿಮ ಬಂಗಾಳದಲ್ಲಿ ಗಲಭೆಗಳು ಮುಂದುವರಿಯಲು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.


ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಕಾರ್ಯಕರ್ತರ ಹತ್ಯೆ : ಮಮತಾಗೆ ಕೇಂದ್ರದಿಂದ ಎಚ್ಚರಿಕೆ

ರಾಜಕೀಯ ವೈಷಮ್ಯದಿಂದ ಪಶ್ಚಿಮಬಂಗಾಳದ ಉತ್ತರ 24 ಪರಗಣಾ ಜಿಲ್ಲೆಯ ಬಾಸಿರಾತ್‌‌ನ ಧನಿಪಾರ ಗ್ರಾಮದಲ್ಲಿ ನಡೆದ ಗಲಭೆಯಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರು ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಒಬ್ಬರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಘಟನೆ ಸಂಬಂಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಗೃಹ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿ, ಘಟನೆ ಸಂಬಂಧ ವರದಿ ನೀಡುವಂತೆ ತಿಳಿಸಿತ್ತು. ಅಮಿತ್ ಶಾ ಗೃಹಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ಅವರಿಗೆ ಈ ಸಂದೇಶ ರವಾನೆಯಾಗಿದೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ತೀರಾ ಹದೆಗೆಟ್ಟಿದ್ದು, ನಿಯಂತ್ರಣಕ್ಕೆ ತರದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿತ್ತು.

ದನಿ ಅಡಗಿಸುವ ಹುನ್ನಾರ: ಮಮತಾ ಆರೋಪ

'ರಾಜ್ಯ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಆದರೆ, ಈ ಯತ್ನ ಯಶಸ್ವಿಯಾಗದು. ದೇಶದಲ್ಲಿ ಬಿಜೆಪಿ ವಿರುದ್ಧವಾಗಿ ಮಾತನಾಡುತ್ತಿರುವ ಏಕೈಕ ಧ್ವನಿ ನನ್ನದು. ಹೀಗಾಗಿ ನನ್ನ ಧ್ವನಿ ಅಡಗಿಸಲು ಯತ್ನಿಸಲಾಗುತ್ತಿದೆ. ವಿವಿಧ ಸಾಮಾಜಿಕ ಜಾಲತಾಣ ಹಾಗೂ ವೆಬ್‌ಸೈಟ್‌ಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡಲು ಬಿಜೆಪಿಯವರು ಕೋಟಿಗಟ್ಟಲೆ ರೂಪಾಯಿ ವ್ಯಯ ಮಾಡುತ್ತಿದ್ದಾರೆ’ ಎಂದು ‍ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

ಗುಜರಾತ್‌ ಮಾಡಲು ಬಿಜೆಪಿ ಯತ್ನ: ಮಮತಾ

‘ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಗಲಭೆಗಳಲ್ಲಿ ಒಟ್ಟು ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದು ಅವರಲ್ಲಿ ಎಂಟು ಮಂದಿ ನಮ್ಮ ಪಕ್ಷಕ್ಕೆ (ಟಿಎಂಸಿ) ಸೇರಿದವರು. ಉಳಿದಿಬ್ಬರು ಬಿಜೆಪಿ ಕಾರ್ಯಕರ್ತರು. ಪ್ರತಿ ಸಾವೂ ದುರ್ಭಾಗ್ಯಪೂರ್ಣವಾದುದು' ಎಂದು ದೂರಿದ್ದ ಮಮತಾ ಬ್ಯಾನರ್ಜಿ, ‘ಬಿಜೆಪಿಯವರು ಪಶ್ಚಿಮ ಬಂಗಾಳವನ್ನು ಗುಜರಾತ್‌ ಮಾಡಲು ಹೊರಟಿದ್ದಾರೆ. ನಾನು ಜೈಲಿಗೆ ಹೋಗಲು ಸಿದ್ಧ, ಆದರೆ ಅವರ ಯೋಜನೆ ಯಶಸ್ವಿಯಾಗಲು ಬಿಡೆನು’ ಎಂದು ಗುಡುಗಿದ್ದರು.


ಈಶ್ವರಚಂದ್ರ ವಿದ್ಯಾಸಾಗರರ ಹೊಸ ಪುತ್ಥಳಿ ಸ್ಥಾಪನೆ ವೇಳೆ ನಮನ ಸಲ್ಲಿಸಿದ ಮಮತಾ ಬ್ಯಾನರ್ಜಿ

ವಿದ್ಯಾಸಾಗರರ ಹೊಸ ಪುತ್ಥಳಿ ಸ್ಥಾಪನೆ

ಲೋಕಸಭಾ ಚುನಾವಣೆಗೂ ಮುನ್ನ ನಡೆದ ಗಲಭೆಯ ಸಂದರ್ಭದಲ್ಲಿ ಧ್ವಂಸಗೊಂಡಿದ್ದ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿ ಇದ್ದ ಸ್ಥಳದಲ್ಲೇ ಹೊಸ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತದ ಹರೇ ಸ್ಕೂಲ್‌ ಅವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುತ್ಥಳಿಯನ್ನು ಅನಾವರಣಗೊಳಿಸಿದರು.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಚುನಾವಣೆಗೂ ಮುನ್ನ ನಡೆಸಿದ್ದ ರೋಡ್‌ ಶೋ ಸಂದರ್ಭದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿದ್ದ ವಿದ್ಯಾಸಾಗರರ ಪುತ್ಥಳಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.

ಇದನ್ನೂ ಓದಿ: ವೈದ್ಯರ ಮೇಲೆ ಸಂಸದ ಅನಂತಕುಮಾರ್‌ ಹೆಗಡೆ ಹಲ್ಲೆ ವಿವಾದ

ಪ್ರಚೋದನಕಾರಿ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ (3ನೇ ಜನವರಿ 2017ರಂದು ಪ್ರಕಟವಾಗಿದ್ದ ಸುದ್ದಿ).

 

Post Comments (+)