ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷೆಯ ನಿರೀಕ್ಷೆ ಹುಸಿಯಾಗಲಿದೆ

Last Updated 24 ಏಪ್ರಿಲ್ 2018, 18:09 IST
ಅಕ್ಷರ ಗಾತ್ರ

‘ಸಾಮಾನ್ಯವಾಗಿ ವಿಶ್ಲೇಷಕರು ಚುನಾವಣೆಯನ್ನು ಗಣಿತ ಎಂದು ಭಾವಿಸುತ್ತಾರೆ. ಆದರೆ, ಮತದಾರರು ಇದನ್ನು ಗಣಿತ ಎಂದು ಭಾವಿಸಿಲ್ಲ. ಅವರ ಲೆಕ್ಕಾಚಾರ ವಿಭಿನ್ನವಾದುದು. ಅದರ ಗುಟ್ಟು ಬಿಟ್ಟು ಕೊಡುವುದಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಗಣಿತದ ಜತೆಗೆ ಕೆಮಿಸ್ಟ್ರಿಯೂ ಕೆಲಸ ಮಾಡುತ್ತದೆ’ ಎನ್ನುತ್ತಾರೆ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್‌.

* ‘ಮಿಷನ್‌ 150’ ಗುರಿ ತಲುಪಲು ಬಿಜೆಪಿಯ ಕಾರ್ಯಯೋಜನೆಗಳೇನು?

ಯಾವುದೇ ಚುನಾವಣೆಯನ್ನು ಪರಿಗಣಿಸಿದರೂ ಜನರು ಪರ್ಯಾಯ ಶಕ್ತಿಯನ್ನು ಸೃಷ್ಟಿ ಮಾಡುತ್ತಾರೆ. 2014ರ ಲೋಕಸಭಾ ಚುನಾವಣೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಿ. ಬಿಜೆಪಿಗೆ 180ರಿಂದ 220 ಸೀಟು ಬರಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ನಮಗೆ 282 ಸ್ಥಾನಗಳು ಸಿಕ್ಕವು. ಅದೇ ರೀತಿ, ಉತ್ತರ ಪ್ರದೇಶದಲ್ಲೂ 180 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆಗಳು ಭವಿಷ್ಯ ಹೇಳಿದವು. ಆದರೆ, ನಮ್ಮ ಪಕ್ಷಕ್ಕೆ ಪ್ರಚಂಡ ಬಹುಮತ (325 ಸ್ಥಾನ) ದೊರಕಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಸಾಕು ಎಂದು ಮತದಾರರು ತೀರ್ಮಾನ ಮಾಡಿದ್ದಾರೆ. ಬೇರು ಮಟ್ಟದಿಂದಲೇ ನಮ್ಮ ಪಕ್ಷಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 150ರ ಗುರಿ ತಲುಪುವುದು ನಿಶ್ಚಿತ.

*ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆಯಲ್ಲ?

2014ರ ಬಳಿಕ 15 ವಿಧಾನಸಭಾ ಚುನಾವಣೆಗಳು ನಡೆದವು. ಯಾವುದೇ ಸಮೀಕ್ಷೆಯೂ ನಿರೀಕ್ಷೆ ಹಾಗೂ ಯೋಚನೆ ಮಾಡಲಾರದಷ್ಟು ಬಹುಮತ ಬಿಜೆಪಿಗೆ ಬಂದಿದೆ. ಮತದಾರರನ್ನು ಸಮೀಕ್ಷೆಯಲ್ಲಿ ಕಟ್ಟಿ ಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್‌ ಎಡಬಿಡಂಗಿ ಪಕ್ಷ. ರಾಹುಲ್‌ ಗಾಂಧಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಸಣ್ಣ ಸಣ್ಣ ಪಕ್ಷಗಳ ಹಿಂಬಾಲಕ ಆಗಿದೆ. ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ಸಿಕ್ಕಷ್ಟೂ ಸ್ಥಾನಗಳು ಸಿಗದು.

*ರಾಜ್ಯ ಬಿಜೆಪಿ ಘಟಕ ನರೇಂದ್ರ ಮೋದಿ ಅವರ ವರ್ಚಸ್ಸನ್ನೇ ನೆಚ್ಚಿಕೊಂಡು ಕಣಕ್ಕೆ ಇಳಿದಂತಿದೆಯಲ್ಲಾ?

ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ 3,600 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದು ದೇಶದಲ್ಲೇ ಜಾಸ್ತಿ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವತ್ತೂ ಇಷ್ಟೊಂದು ಕುಸಿದಿರಲಿಲ್ಲ. 24 ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಅಧಿಕಾರಿಗಳು ನಿಗೂಢವಾಗಿ ಸತ್ತಿದ್ದಾರೆ. ಬೆಂಗಳೂರಿಗೆ ಅತ್ಯಾಚಾರದ ನಗರಿ ಹಾಗೂ ಅಪರಾಧದ ರಾಜಧಾನಿ ಎಂಬ ಕುಖ್ಯಾತಿ ಬಂದಿದೆ.

ಶೇ 10 ಕಮಿಷನ್‌ ಸರ್ಕಾರ ಎಂಬ ಆರೋಪಕ್ಕೆ ಪುರಾವೆ ಏನಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಪ್ರಶ್ನಿಸಿದ್ದರು. ಮರಳು ಗಣಿಗಾರಿಕೆ ಹಾಗೂ ಗಣಿಗಾರಿಕೆ ನಡೆಯುವಲ್ಲಿ ಹೋಗಿ ಕೇಳಿದರೆ ಅವರಿಗೆ ಉತ್ತರ ಸಿಗುತ್ತದೆ. ‘ವೈಟ್‌ ಟಾಪಿಂಗ್‌’ ಎಂಬ ಹೆಸರನ್ನು ಈ ಹಿಂದೆ ಎಂದಾದರೂ ಕೇಳಿದ್ದೀರಾ? ಲೋಕೋಪಯೋಗಿ ಗುತ್ತಿಗೆದಾರರಲ್ಲಿ ಕೇಳಿದರೂ ಉತ್ತರ ಸಿಗುತ್ತದೆ. ಇದೊಂದು ಲೂಟಿ ಹಾಗೂ ಸುಲಿಗೆ ಸರ್ಕಾರ, ಒಡೆದು ಆಳುವ ಸರ್ಕಾರ. ಜನರ ವ್ಯಾಪಕ ವಿರೋಧದ ನಡುವೆಯೂ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಿತು. ಬಹಮನಿ ಉತ್ಸವ ನಡೆಸಲು ಮುಂದಾಯಿತು. ವಿರೋಧ ವ್ಯಕ್ತವಾಗದೇ ಇದ್ದರೆ ತುಘಲಕ್‌ ಉತ್ಸವವನ್ನೂ ಆಚರಿಸುತ್ತಿತ್ತು.

*ನಮ್ಮದು ಶಿಸ್ತಿನ ‍ಪಕ್ಷ ಎಂದು ಪದೇ ಪದೇ ಹೇಳಿಕೊಳ್ಳುತ್ತೀರಿ. ಟಿಕೆಟ್‌ ಹಂಚಿಕೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆಯಲ್ಲ?

224 ಸೀಟುಗಳಿಗೆ 10 ಸಾವಿರ ಆಕಾಂಕ್ಷಿಗಳು ಇದ್ದರು. ಪ್ರತಿಯೊಬ್ಬರೂ ಪ್ರಮುಖರು, ಜನಪ್ರಿಯರು ಹಾಗೂ ಕೆಲಸ ಮಾಡಿದವರು. ಸಾಕಷ್ಟು ಮನವೊಲಿಸುವ, ಸಮಾಧಾನ ಮಾಡುವ ಹಾಗೂ ಮನವರಿಕೆ ಮಾಡುವ ಯತ್ನ ಮಾಡಿದ್ದೇವೆ. ಕಾಂಗ್ರೆಸ್‌ನಲ್ಲಿ ಆಗಿರುವ ಗಲಭೆಗೆ ಹೋಲಿಸಿದರೆ ಬಿಜೆಪಿಯ ಸಮಸ್ಯೆ ತೀರಾ ಕಡಿಮೆ. ಇದು ಇವತ್ತಿನ ಚುನಾವಣಾ ಪ್ರಕ್ರಿಯೆಯಲ್ಲಿ ಸಹಜ. ಕಾಂಗ್ರೆಸ್‌ನಲ್ಲಿ ಮೂಲ ವರ್ಸಸ್‌ ವಲಸೆ ಕಾಂಗ್ರೆಸ್ಸಿಗರು, ಮುಖ್ಯಮಂತ್ರಿ ವರ್ಸಸ್‌ ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ವರ್ಸಸ್‌ ಖರ್ಗೆ... ಹೀಗೆ ಅನೇಕ ಬಣಗಳಿವೆ. ಬಿಜೆಪಿಯಲ್ಲಿ ಒಗ್ಗಟ್ಟಿದೆ. ಈ ಪ್ರಮುಖ ಅಂತರವನ್ನು ಜನ ಗುರುತಿಸಿದ್ದಾರೆ.

* ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಹೊಸ ಮುಖಗಳನ್ನು ಕಣಕ್ಕಿಳಿಸಿ ಯಶಸ್ಸು ಗಳಿಸಿತ್ತು. ಆದರೆ, ರಾಜ್ಯದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಿಲ್ಲ ಎಂಬ ಮಾತು ನಿಮ್ಮ ಪಕ್ಷದ ಪಡಸಾಲೆಯಲ್ಲೇ ಕೇಳಿ ಬರುತ್ತಿದೆಯಲ್ಲಾ?

100ಕ್ಕೂ ಹೆಚ್ಚು ಕಡೆ ಹೊಸಬರನ್ನು ಕಣಕ್ಕೆ ಇಳಿಸಿದ್ದೇವೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಕಣಕ್ಕೆ ಇಳಿದವರಲ್ಲಿ ಬಹುತೇಕರು ಹೊಸಬರು. ಬೆಂಗಳೂರಿನಲ್ಲೂ ಅನೇಕ ಕಡೆ ಹೊಸಬರಿಗೆ ಅವಕಾಶ ನೀಡಿದ್ದೇವೆ.

*ಕಾಂಗ್ರೆಸ್‌ ವಂಶಪಾರಂಪರ್ಯ ಪಕ್ಷ ಎಂದು ಬಿಜೆಪಿ ಆಗಾಗ ಟೀಕಿಸುತ್ತಾ ಇರುತ್ತದೆ. ನಿಮ್ಮ ಪಕ್ಷವೂ ನಾಯಕರ ಮಕ್ಕಳಿಗೆ ಮಣೆ ಹಾಕಿದೆಯಲ್ಲ?

ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಅವರ ಪುತ್ರ ಅರುಣ್‌ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಮಚಂದ್ರೇಗೌಡ ಸಹ ಹೇಳಿದ್ದರು. ಹಾಗಾಗಿ ಅವರ ಮಗನಿಗೆ ಟಿಕೆಟ್‌ ಕೊಟ್ಟಿದ್ದೇವೆ. ಅಂತಹ ವಿಶೇಷ ಸಂದರ್ಭಗಳಲ್ಲಷ್ಟೇ ಕಣಕ್ಕೆ ಇಳಿಸಿದ್ದೇವೆ.

*ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಳಂಕ ಎದುರಿಸಿದ ಅನೇಕ ಮಂದಿಗೆ ಮತ್ತೆ ಅವಕಾಶ ನೀಡಿದ್ದೇಕೆ?

‘ಮಾಧ್ಯಮಗಳ ವಿಚಾರಣೆ’ ಆಧಾರದಲ್ಲಿ ಅವರನ್ನು ಆರೋಪಿಗಳು ಎಂದು ಹೇಳಲು ಸಾಧ್ಯವಿಲ್ಲ. ಅವರ ಮೇಲೆ ಅನೇಕ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು. ನ್ಯಾಯಾಲಯಗಳು ಅವರನ್ನು ಖುಲಾಸೆಗೊಳಿಸಿವೆ. ಪ್ರಾಮಾಣಿಕರು ಎಂದು ಸಾಬೀತುಪಡಿಸಲು ಅವರು ಇನ್ನು ಎಲ್ಲಿಗೆ ಹೋಗಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT