ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತವ್ಯಯಕ್ಕೆ ಸೋನಿಯಾ ಸಲಹೆ, ಜಾಹೀರಾತು ನೀಡದಂತೆ ಪ್ರಧಾನಿಗೆ ಪತ್ರ

Last Updated 7 ಏಪ್ರಿಲ್ 2020, 20:32 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ನಿಧಿ ಸಂಗ್ರಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಐದು ಸಲಹೆಗಳನ್ನು ಒಳಗೊಂಡ ಪತ್ರ ಬರೆದಿದ್ದಾರೆ.

ರಾಷ್ಟ್ರಪತಿ ಭವನದ ಸೆಂಟ್ರಲ್‌ ವಿಸ್ತಾದ ಸೌಂದರ್ಯೀಕರಣ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಕಂಪನಿಗಳು ಮಾಧ್ಯಮಗಳಿಗೆ ಎರಡು ವರ್ಷಗಳ ಕಾಲ ಯಾವುದೇ ಜಾಹೀರಾತು ನೀಡದಂತೆ ನಿಷೇಧ ಹೇರುವಂತೆ ಮಂಗಳವಾರ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ವಿರೋಧ ಪಕ್ಷಗಳ ನಾಯಕರೊಂದಿಗೆ ಪ್ರಧಾನಿ, ಸೋಮವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರಲ್ಲದೇ, ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟಲು ಸಲಹೆ ನೀಡುವಂತೆ ಕೋರಿದ್ದರು. ಈ ಸಂವಾದದ ಬೆನ್ನಲ್ಲೇ ಸೋನಿಯಾ ಅವರು ಪತ್ರ ಬರೆದಿದ್ದಾರೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಕೇಂದ್ರದ ಸಚಿವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಅಧಿಕಾರಿಗಳು ವಿದೇಶ ಪ್ರವಾಸ ಕೈಗೊಳ್ಳುವುದನ್ನು ಬಿಡಬೇಕು. ಸರ್ಕಾರಿ ನೌಕರರ ವೇತನ, ಪಿಂಚಣಿ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಹೊರತುಪಡಿಸಿದಂತೆ ಸರ್ಕಾರದ ಬಜೆಟ್‌ಅನ್ನು 30ರಷ್ಟು ಕಡಿತ ಮಾಡಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

‘ಮುದ್ರಣ, ಟಿ.ವಿ ಹಾಗೂ ಆನ್‌ಲೈನ್‌ ಮಾಧ್ಯಮಗಳಿಗೆ ಜಾಹೀರಾತು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಪ್ರತಿ ವರ್ಷ ₹ 1,250 ಕೋಟಿ ಖರ್ಚು ಮಾಡುತ್ತದೆ. ಜಾಹೀರಾತು ಕೊಡುವುದನ್ನು ನಿಲ್ಲಿಸಿದರೆ ಈ ದೊಡ್ಡ ಮೊತ್ತವನ್ನು ಸದ್ಯ ಪರಿಸ್ಥಿತಿಯಲ್ಲಿ ಉದ್ಭವಿಸಿರುವ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳ ನಿವಾರಣೆಗೆ ಬಳಕೆ ಮಾಡಬಹುದು’ ಎಂದು ಅವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

‘ಸಂಕಷ್ಟದಲ್ಲಿ ಸಮಯದಲ್ಲಿ ಮಿತವ್ಯಯ ಸಾಧಿಸಿ, ಉಳಿತಾಯವಾದ ನಿಧಿಯನ್ನು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬಳಸುವುದು ಮುಖ್ಯ. ನನ್ನ ಸಲಹೆಗಳನ್ನು ಅನುಷ್ಠಾನಗೊಳಿಸುವಿರಿ ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದೂ ಅವರು ಉಲ್ಲೇಖಿಸಿದ್ದಾರೆ.

‘ನಿಧಿಯನ್ನೂ ವರ್ಗಾಯಿಸಿ’

‘ಪಿಎಂ ಕೇರ್ಸ್‌’ನಲ್ಲಿ ಸಂಗ್ರಹವಾಗಿರುವ ಹಣದ ಸಮರ್ಥ ಬಳಕೆ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಮುಖ್ಯ. ಇವುಗಳನ್ನು ಖಾತರಿಪಡಿಸುವ ಸಲುವಾಗಿ ‘ಪಿಎಂ–ಕೇರ್ಸ್‌’ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ‘ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ’ಗೆ ವರ್ಗಾಯಿಸಬೇಕು ಎಂದೂ ಸೋನಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT