ಮಂಗಳವಾರ, ಏಪ್ರಿಲ್ 20, 2021
27 °C
ಹೊಸ ಪುಸ್ತಕದಲ್ಲಿ ಕೇಂದ್ರದ ವಿರುದ್ಧ ಗಂಭೀರ ಆರೋಪ, ಟೀಕೆಗಳ ಮಳೆಗರೆದ ಬಿಜೆಪಿ ನಾಯಕ

ಆರ್ಥಿಕತೆ ನಿಭಾಯಿಸಲು ಬೇರುಗಳಿಲ್ಲದ ಸಚಿವರ ನೇಮಿಸಿದ ಮೋದಿ: ಸುಬ್ರಮಣಿಯನ್ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಕಾಡೆಮಿಕ್‌ ಅನುಭವದ ಕೊರತೆಯು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ನಿಭಾಯಿಸಲು ತಮ್ಮ ಸ್ನೇಹಿತರನ್ನು ನೆಚ್ಚಿಕೊಳ್ಳಲು ಮತ್ತು ‘ಬೇರುಗಳಿಲ್ಲದ ಸಚಿವರನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿದೆ’ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

‘ಆರ್ಥಿಕತೆ ಬಗ್ಗೆ ಒಳನೋಟ ಹೊಂದಿರದ ಸಚಿವರು ಹಾಗೂ ಸ್ನೇಹಿತರು ಮೋದಿ ಅವರಿಗೆ ದೇಶಿ ಅರ್ಥ ವ್ಯವಸ್ಥೆಯಲ್ಲಿನ ಸದ್ಯದ ಕಟು ವಾಸ್ತವವನ್ನು ಮನವರಿಕೆ ಮಾಡಿಕೊಡುತ್ತಿಲ್ಲ. ನೋಟು ರದ್ದತಿಯಂತಹ ಮೂರ್ಖತನದ, ಸರಕು ಮತ್ತು ಸೇವಾ ತೆರಿಗೆಯು (ಜಿಎಎಸ್‌ಟಿ) ಆರ್ಥಿಕತೆಗೆ ಗಮನಾರ್ಹವಾಗಿ ನೆರವಾಗದಿರುವ ಕಹಿ ಸತ್ಯದ ಕುರಿತು ಈ ಸ್ನೇಹಿತರು ಅವರಿಗೆ ವಿವರಣೆ ನೀಡುವುದಿಲ್ಲ’ ಎಂದು ಸುಬ್ರಮಣಿಯನ್ ಸ್ವಾಮಿ ಬರೆದುಕೊಂಡಿದ್ದಾರೆ.

‘ರಿಸೆಟ್: ರಿಗೆನಿಂಗ್ ಇಂಡಿಯಾಸ್ ಇಕನಾಮಿಕ್ ಲೆಗಸಿ’ ಎಂಬ ತಮ್ಮ ಹೊಸ ಪುಸ್ತಕದಲ್ಲಿ ಸ್ವಾಮಿ ಅವರು, ‘ಮೋದಿ ತಮ್ಮ ಸಲಹೆಗಾರರನ್ನಾಗಿ ಆಯ್ಕೆ ಮಾಡಿಕೊಂಡವರ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ಕನಸಿಗೆ ಗುಡ್ ಬೈ ಹೇಳಿ: ಸುಬ್ರಮಣಿಯನ್ ಸ್ವಾಮಿ

ಜಿಡಿಪಿ ಲೆಕ್ಕ ಹಾಕುವ ಮೂಲ ವರ್ಷ ಬದಲಾಯಿಸಿದ, ನಿರುದ್ಯೋಗ ಅಂಕಿ ಅಂಶ ಮತ್ತು ನೋಟು ರದ್ದತಿಯ ಪರಿಣಾಮಗಳ ಬಗ್ಗೆ ಪ್ರಶ್ನಿಸಿರುವ ಸ್ವಾಮಿ ಅವರು, ಮೋದಿ ಸಂಪುಟದಲ್ಲಿ ಆರ್ಥಿಕ ವ್ಯವಹಾರಗಳನ್ನು ನಿಭಾಯಿಸುವವರ ಸಾಮರ್ಥ್ಯದ ಮೇಲೆಯೇ ಅನುಮಾನವಿದೆ ಎಂದಿದ್ದಾರೆ.

ಆರ್ಥಿಕ ಕಾರ್ಯಕ್ಷಮತೆಯಲ್ಲಿ ವಿಫಲವಾಗಿದ್ದರಿಂದಾಗಿ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಪ್ರಚಾರದ ವಿಷಯವನ್ನೇ ಬದಲಾಯಿಸಬೇಕಾಯಿತು. ದೇಶದ ಭದ್ರತೆ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿತು ಎಂದು ಸ್ವಾಮಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಹಿಂದಿಯಲ್ಲಿ ಪ್ರಶ್ನಿಸಬೇಡಿ, ನಾನು ತಮಿಳಿಗ: ಸುಬ್ರಮಣಿಯನ್‌ ಸ್ವಾಮಿ

‘2008ರಿಂದಲೂ ಇದ್ದ ವಿದೇಶಿ ಹೂಡಿಕೆಯ ಆಕರ್ಷಣೆಯ ಕಾರಣಕ್ಕೆ ಆರ್ಥಿಕತೆಯು ಹಿನ್ನಡೆಯ ಹಾದಿಯಲ್ಲಿತ್ತು.  2016ರ ಬಳಿಕ ದೇಶದ ಆರ್ಥಿಕತೆಯು ಅಪಾಯಕರ ರೀತಿಯಲ್ಲಿ ಹಿಮ್ಮುಖ ತಿರುವು ಪಡೆದಿದೆ. ದೇಶವು ಸದ್ಯಕ್ಕೆ ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಬಗ್ಗೆ ನಾನು ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿತ್ತು’ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಜತೆ ಮೋದಿ ಅವರನ್ನು ತುಲನೆ ಮಾಡಿರುವ ಸ್ವಾಮಿ, ಸಿಂಗ್‌ ಅವರು ನಿಪುಣ ಅರ್ಥಶಾಸ್ತ್ರಜ್ಞನಾಗಿದ್ದರು. ಈ ವಿಷಯದಲ್ಲಿ ಮೋದಿ ಇದಕ್ಕೆ ಸಂಪೂರ್ಣ ತದ್ವಿರುದ್ಧ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ನಾನು ಚೌಕೀದಾರ್ ಆಗಲಾರೆ, ನಾನು ಬ್ರಾಹ್ಮಣ: ಸುಬ್ರಮಣಿಯನ್ ಸ್ವಾಮಿ

‘ಹಣದ ವಿಚಾರದಲ್ಲಿ ಮೋದಿ ಹೆಚ್ಚು ಪ್ರಾಮಾಣಿಕರಾಗಿದ್ದಾರೆ. ವ್ಯಕ್ತಿ, ಕೌಟುಂಬಿಕ, ಸಂಸ್ಥೆ, ಕೈಗಾರಿಕೆ ಸೇರಿದಂತೆ ಆರ್ಥಿಕತೆಯ ಸಣ್ಣ – ಪುಟ್ಟ ವಿಚಾರಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಆದರೆ, ರಾಷ್ಟ್ರೀಯ ವರಮಾನ, ಉತ್ಪಾದನೆ, ಬೆಲೆ ಮಟ್ಟ, ಒಟ್ಟು ಉಪಭೋಗ, ಉಳಿತಾಯ, ಬಂಡವಾಳ ಹೂಡಿಕೆ, ಬೇಡಿಕೆ, ಪೂರೈಕೆ ಚಟುವಟಿಕೆ ಒಳಗೊಂಡಿರುವ ಸಮಗ್ರ ಆರ್ಥಿಕತೆಯ ಸೂಕ್ಷ್ಮತೆಗಳ ಬಗ್ಗೆ ಅವರಲ್ಲಿ ಮಾಹಿತಿ ಕೊರತೆ ಇದೆ. ಈ ಅಕಾಡೆಮಿಕ್‌ ಅನುಭವದ ಕೊರತೆಯ ಕಾರಣಕ್ಕೆ ಅವರು  ಅನನುಭವಿಗಳನ್ನು ನೆಚ್ಚಿಕೊಳ್ಳುವಂತಾಗಿದೆ’ ಎಂದು ಸ್ವಾಮಿ ಹೇಳಿದ್ದಾರೆ.

2014ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡಾಗಲೇ ಮೊದಲ ಬಾರಿಗೆ ಆರ್ಥಿಕ ಕುಸಿತದ ಲಕ್ಷಣಗಳು ಗೋಚರಿಸಿದ್ದವು. ನಂತರದ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆ ಅನೇಕ ಸಂಕಷ್ಟಗಳನ್ನು ಎದುರಿಸಿದೆ ಎಂದೂ ಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: 6 ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ತಲುಪಿದೆ ಆರ್ಥಿಕ ವೃದ್ಧಿ ದರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು