ಮಂಗಳವಾರ, ನವೆಂಬರ್ 19, 2019
23 °C

ಬುಲ್​​ಬುಲ್​​​ಗೆ ಇಬ್ಬರು ಬಲಿ: ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಭಾರಿ ಮಳೆ

Published:
Updated:
BulBul Cyclone

ಕೋಲ್ಕತ್ತ: ಬುಲ್​​ಬುಲ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಹಾದುಹೋಗಿದ್ದು, ಉಭಯ ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಕೋಲ್ಕತ್ತ ಕ್ರಿಕೆಟ್ ಮತ್ತು ಫುಟ್‌ಬಾಲ್ ಕ್ಲಬ್‌ವೊಂದರ ಮುಂಭಾಗದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮರ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನನ್ನು 28 ವರ್ಷದ ಎಸ್.ಕೆ. ಸೋಹೆಲ್ ಎಂದು ಗುರುತಿಸಲಾಗಿದೆ. ಒಡಿಶಾದಲ್ಲಿ ಭಾರಿ ಮಳೆಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಪರಿಸ್ಥಿತಿ ನಿಭಾಯಿಸಲು ಪಶ್ಚಿಮ ಬಂಗಾಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಈಗಾಗಲೇ ತಲುಪಿದ್ದು, ದಕ್ಷಿಣ 24 ಪರಗಣದಲ್ಲಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಮಾಡಲಾಗುತ್ತಿದೆ.

ಕೋಲ್ಕತ್ತ ಪೋರ್ಟ್ ಟ್ರಸ್ಟ್‌ನ ಸಾಗರ್ ಪೈಲಟ್ ಸ್ಟೇಷನ್‌ ಬಳಿಯಲ್ಲಿ ಚಂಡಮಾರುತ ಪೀಡಿತ 200 ಗ್ರಾಮಸ್ಥರಿಗೆ ಆಶ್ರಯ ತಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಲ್ಕತ್ತದ ಬಿಚಲಿ ಘಾಟ್‌ನಲ್ಲಿ ದೋಣಿ ಸೇವೆ ಸ್ಥಗಿತಗೊಳಿಸಲಾಗಿದೆ.

ಮಮತಾ ಜತೆ ಮೋದಿ ಮಾತುಕತೆ: ‘ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಬುಲ್‌ಬುಲ್ ಚಂಡಮಾರುತದ ಪರಿಣಾಮದ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೂ ಮಾತುಕತೆ ನಡೆಸಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಭಾನುವಾರ ಮುಂಜಾನೆ ಪಶ್ಚಿಮ ಬಂಗಾಳದ ಸಾಗರ್ ದ್ವೀಪಗಳು ಮತ್ತು ಬಾಂಗ್ಲಾದೇಶದ ಖೇಪುಪರ ನಡುವೆ ಗಂಟೆಗೆ 110ರಿಂದ 120 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ಹಲವೆಡೆ ಭೂಕುಸಿತ ಉಂಟಾಗಿದೆ. ಚಂಡಮಾರುತವು ಬಾಂಗ್ಲಾದೇಶ ಕರಾವಳಿ ಮತ್ತು ಪಕ್ಕದ ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳ ಕಡೆಗೆ ಚಲಿಸುವಾಗ ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಶನಿವಾರ ಪೂರ್ತಿ ಭಾರಿ ಮಳೆಯಾಗಿದ್ದು, ಗಿಡಮರಗಳು ಧರೆಗುರುಳಿವೆ. ಕರಾವಳಿ ಮತ್ತು ಪಕ್ಕದ ಪಶ್ಚಿಮ ಮತ್ತು ಪೂರ್ವ ಮಿಡ್ನಾಪುರ, ದಕ್ಷಿಣ ಮತ್ತು ಉತ್ತರ ಪರಗಣ ಜಿಲ್ಲೆಗಳಲ್ಲಿ ಗಂಟೆಗೆ 135 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ.

ಪ್ರತಿಕ್ರಿಯಿಸಿ (+)