ಈತ ಭಯೋತ್ಪಾದಕನೂ ಅಲ್ಲ, ಅದು ಜೈಪುರ ವಿಮಾನ ನಿಲ್ದಾಣವೂ ಅಲ್ಲ

7

ಈತ ಭಯೋತ್ಪಾದಕನೂ ಅಲ್ಲ, ಅದು ಜೈಪುರ ವಿಮಾನ ನಿಲ್ದಾಣವೂ ಅಲ್ಲ

Published:
Updated:
Deccan Herald

ಬೆಂಗಳೂರು: ‘ಜೈಪುರ ವಿಮಾನ ನಿಲ್ದಾಣದಲ್ಲಿ ಬೇಕಾಬಿಟ್ಟಿ ಗುಂಡು ಹಾರಿಸುತ್ತಿದ್ದ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ’ ಎಂಬ ಒಕ್ಕಣೆಯೊಂದಿಗೆ ಒಂದು ವಿಡಿಯೊ ವಾಟ್ಸ್‌ಆ್ಯಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದು ಸುಳ್ಳು ಸುದ್ದಿ ಎಂದು ಇದೀಗ ಸಾಬೀತಾಗಿದೆ. ಈ ಕುರಿತು ‘ದಿ ಕ್ವಿಂಟ್‌’ ಮತ್ತು ‘ಅಲ್ಟ್‌ನ್ಯೂಸ್’ ಜಾಲತಾಣಗಳು ಸುದ್ದಿ ಪ್ರಕಟಿಸಿವೆ.

ವಿಡಿಯೊದಲ್ಲಿರುವ ವ್ಯಕ್ತಿಯ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಲಾಗಿದೆ. ಪೊಲೀಸರು ಬಂಧಿಸಿರಬಹುದು ಎನಿಸುವಂತೆ ಕಾಣಿಸುವ ವ್ಯಕ್ತಿ ಇರುವ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದ ಕೆಲವರು ‘ಜೈಪುರ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕನನ್ನು ಬಂಧಿಸಿದ ವಿಡಿಯೊ ನಿಜವೇ’ ಎಂದು ಪ್ರಶ್ನಿಸಿದ್ದರು.

ಆದರೆ ವಾಸ್ತವ ಪರಿಶೀಲಿಸಿದಾಗ ಈ ವಿಡಿಯೊ ಜೈಪುರದ್ದಲ್ಲ, ದೆಹಲಿಯದ್ದು. ಈ ವಿಡಿಯೊದಲ್ಲಿರುವ ವ್ಯಕ್ತಿ ಭಯೋತ್ಪಾದಕನೂ ಅಲ್ಲ ಎಂಬ ಸಂಗತಿ ಬೆಳಕಿಗೆ ಬಂತು. ಈ ವಿಡಿಯೊವನ್ನು ಆಗಸ್ಟ್ 16ರ ರಾತ್ರಿ ರೆಕಾರ್ಡ್ ಮಾಡಲಾಗಿದೆ.

‘ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕಾರೊಂದು ವೇಗವಾಗಿ ಬರುತ್ತಿತ್ತು. ಹಿಂದಿನ ಸೀಟಿನಲ್ಲಿದ್ದ ವ್ಯಕ್ತಿಯೊಬ್ಬ ಚಾಲನಕನಿಗೆ ಥಳಿಸುತ್ತಿದ್ದ. ಚಾಲಕ ಕಾರಿನಿಂದ ಇಳಿದು ಓಡಿಹೋದ ನಂತರ, ಹಿಂದಿನ ಸೀಟಿನಲ್ಲಿದ್ದವನೇ ಕಾರು ಓಡಿಸಲು ಆರಂಭಿಸಿದ. ಇದನ್ನು ಗಮನಿಸಿದ ಸಿಐಎಸ್‌ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಸಿಬ್ಬಂದಿ ಕಾರು ನಿಲ್ಲಿಸುವಂತೆ ಸೂಚಿಸಿದರು.

‘ಚಾಲಕ ಸ್ಥಾನದಲ್ಲಿದ್ದವ ಕಾರು ನಿಲ್ಲಿಸಲಿಲ್ಲ. ಯು–ಟರ್ನ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದೆ. ಸಿಐಎಸ್‌ಎಫ್‌ ಸಿಬ್ಬಂದಿಯೊಬ್ಬರು ತಕ್ಷಣ ಚಲಿಸುತ್ತಿದ್ದ ಕಾರಿನ ಕೀಲಿ ಕಸಿದುಕೊಂಡು ಕಾರು ನಿಲ್ಲುವಂತೆ ಮಾಡಿದರು. ಕೆಳಗಿಳಿದ ಆತ ಸಿಐಎಸ್‌ಎಫ್‌ ಸಿಬ್ಬಂದಿಯ ಜೊತೆಗೆ ಜಗಳ ತೆಗೆದು, ಕಮಾಂಡೊ ಒಬ್ಬರಿಂದ ಪಿಸ್ತೂಲ್ ಕಸಿದುಕೊಂಡು ಓಡಿಹೋಗಲು ಯತ್ನಿಸಿದ. ಅವನನ್ನು ಹೆದರಿಸಲು ಸಿಐಎಸ್‌ಎಫ್‌ ಸಿಬ್ಬಂದಿ ನೆಲಕ್ಕೆ ಗುಂಡು ಹಾರಿಸಿದರು. ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದರು’ ಎಂದು ‘ಹಿಂದೂಸ್ತಾನ್ ಟೈಮ್ಸ್‌’ ಈ ಘಟನೆ ಕುರಿತು ವರದಿ ಮಾಡಿದೆ.

‘ಸಿಐಎಸ್‌ಎಫ್ ಅಧಿಕಾರಿಗಳ ಪ್ರಕಾರ ಅವನ ಹೆಸರು ಶಂಕರ್. ದಕ್ಷಿಣ ದೆಹಲಿಯ ಸಂಗಂ ವಿಹಾರ್‌ ನಿವಾಸಿ. ಹಿಂದೊಂದೋ ಬಾಡಿಗಾರ್ಡ್ ಅಗಿದ್ದವ. ವಿಮಾನ ನಿಲ್ದಾಣ ಪ್ರವೇಶಿಸಲು ಏನು ಕಾರಣ ಎನ್ನುವುದು ತಿಳಿದುಬಂದಿಲ್ಲ. ಪ್ರಜ್ಞೆ ತಪ್ಪುವಷ್ಟು ಕುಡಿದಿದ್ದ ಅವನು ನಮ್ಮ ಯಾವ ಪ್ರಶ್ನೆಗಳಿಗೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ’ ಎನ್ನುವ ಸಿಐಎಸ್‌ಎಫ್ ಸಿಬ್ಬಂದಿಯ ಹೇಳಿಕೆಯನ್ನು ‘ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

ಆರೋಪಿಯ ವಿರುದ್ಧ ಸೆಕ್ಷನ್ 186, 353 ಮತ್ತು 3332 ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.

ಕೆಲ ವಾರಗಳ ಹಿಂದೆ ರೆಕಾರ್ಡ್‌ ಮಾಡಿರುವ ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೆಯಾಗುತ್ತಿದೆ. ಧರ್ಮ, ರಾಜಕಾರಣ ಸೇರಿದಂತೆ ತಮಗೆ ತೋಚಿದ ವಿಚಾರಗಳನ್ನು ಹರಡಲು ಈ ವಿಡಿಯೊ ಬಳಸಿಕೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !