ಶನಿವಾರ, ಆಗಸ್ಟ್ 15, 2020
26 °C
ಸರ್ದಾರ್‌ ಪಟೇಲ್‌ ಜನ್ಮದಿನವಾದ ಅಕ್ಟೋಬರ್‌ 31ರಂದು ಅಸ್ತಿತ್ವಕ್ಕೆ ಬರಲಿವೆ ಹೊಸ ಕೇಂದ್ರಾಡಳಿತ ಪ್ರದೇಶಗಳು

ಕಾಶ್ಮೀರ ವಿಭಜನೆಗೆ ರಾಷ್ಟ್ರಪತಿ ಅನುಮೋದನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶುಕ್ರವಾರ ಸಹಿ ಮಾಡಿದ್ದಾರೆ ಎಂದು ಗೃಹಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್‌ 31ರಿಂದ ಜಾರಿಯಾಗುವಂತೆ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರಲಿವೆ. ಅಂದು ದೇಶದ ಮೊದಲ ಗೃಹಸಚಿವ ಸರ್ದಾರ್‌ ಪಟೇಲ್‌ ಅವರ ಜನ್ಮ ದಿನವೂ ಆಗಿದೆ.

ಜಮ್ಮು ಕಾಶ್ಮೀರವು ಶಾಸನಸಭೆ ಸಹಿತವಾದ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಡಾಖ್‌, ಚಂಡಿಗಡದಂತೆ ಶಾಸನಸಭೆರಹಿತ ಕೇಂದ್ರಾಡಳಿತ ಪ್ರದೇಶವೆನಿಸಲಿದೆ. ಸದ್ಯಕ್ಕೆ ಜಮ್ಮು ಕಾಶ್ಮೀರದ ಶಾಸನಸಭೆಯು ಗರಿಷ್ಠ 107 ಸದಸ್ಯರನ್ನು ಹೊಂದಿರುತ್ತದೆ. ಕ್ಷೇತ್ರ ಮರು ವಿಂಗಡಣೆಯ ಬಳಿಕ ಆ ಸಂಖ್ಯೆಯನ್ನು 114ಕ್ಕೆ ಹೆಚ್ಚಿಸಲಾಗುವುದು. ಇಲ್ಲಿನ 24 ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಬರುವುದರಿಂದ ಅವು ಖಾಲಿ ಉಳಿಯಲಿವೆ. ಕಾರ್ಗಿಲ್‌ ಮತ್ತು ಲೇಹ್‌ ಜಿಲ್ಲೆಗಳನ್ನು ಲಡಾಖ್‌ ಒಳಗೊಂಡಿರುತ್ತದೆ.

ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ಐವರು ಸದಸ್ಯರು ಹಾಗೂ ಲಡಾಖ್‌ನ ಒಬ್ಬ ಪ್ರತಿನಿಧಿ ಇರುತ್ತಾರೆ.

ನೀತಿ ಬದಲಾವಣೆ ಇಲ್ಲ– ಅಮೆರಿಕ:  ‘ಜಮ್ಮು ಕಾಶ್ಮೀರ ಕುರಿತಂತೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಭಾರತ– ಪಾಕಿಸ್ತಾನ ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಮೆರಿಕದ ವಿದೇಶಾಂಗ ವ್ಯವಹಾರಗಳ ವಕ್ತಾರ ಮಾರ್ಗನ್‌ ಒರ್ಟೆಗಸ್‌, ‘ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು. ಭಾರತ– ಪಾಕಿಸ್ತಾನ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಅಮೆರಿಕ ಬಯಸುತ್ತದೆ’ ಎಂದರು.

ಮಾತುಕತೆಗೆ ಚೀನಾ ಸಲಹೆ: ‘ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು’ ಎಂದು ಚೀನಾ ಪಾಕಿಸ್ತಾನಕ್ಕೆ ಸಲಹೆ ಕೊಟ್ಟಿದೆ.

ವಿಶೇಷಾಧಿಕಾರ ರದ್ದತಿ ಬಳಿಕ ಚೀನಾದ ಬೆಂಬಲ ಕೋರಲು ಆ ದೇಶಕ್ಕೆ ತೆರಳಿದ್ದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮೂದ್‌ ಖುರೇಷಿ ಅವರಿಗೆ ಚೀನಾ ಈ ಸಲಹೆ ನೀಡಿದೆ.

ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಚೀನಾ, ‘ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ ಆ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು’ ಎಂದಿರುವುದಲ್ಲದೆ, ‘ಯಾವುದೇ ಒಂದು ರಾಷ್ಟ್ರವು ಅಲ್ಲಿನ ಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಿ, ಶಾಂತಿ ಕದಡುವ ಪ್ರಯತ್ನ ಮಾಡಬಾರದು’ ಎಂದು ಭಾರತದ ಹೆಸರು ಉಲ್ಲೇಖಿಸದೆಯೇ ಹೇಳಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಆಗಸ್ಟ್‌ 11ರಿಂದ ಮೂರು ದಿನಗಳ ಕಾಲ ಚೀನಾ ಪ್ರವಾಸ ಮಾಡಲಿದ್ದಾರೆ.

ಯೆಚೂರಿ, ರಾಜಾಗೆ ವಿಮಾನ ನಿಲ್ದಾಣದಲ್ಲಿ ತಡೆ 

ನವದೆಹಲಿ: ಜಮ್ಮು ಕಾಶ್ಮೀರದ ಸಿಪಿಎಂ ಮುಖಂಡ ಮೊಹಮ್ಮದ್‌ ಯೂಸುಫ್‌ ತಾರಿಗಾಮಿ ಅವರನ್ನು ಭೇಟಿಯಾಗಲು ಹೋಗಿದ್ದ ಪಕ್ಷದ ಮುಖಂಡರಾದ ಸೀತಾರಾಂ ಯೆಚೂರಿ ಹಾಗೂ ಸಿಪಿಐ ನಾಯಕ ಡಿ. ರಾಜಾ ಅವರನ್ನು ಶುಕ್ರವಾರ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ಮರಳಿ ದೆಹಲಿಗೆ ಕಳುಹಿಸಲಾಗಿದೆ.

‘ಶ್ರೀನಗರಕ್ಕೆ ಹೊರಗಿನವರಿಗೆ ಪ್ರವೇಶ ನಿರಾಕರಿಸುವ ಅಧಿಕೃತ ಆದೇಶವನ್ನು ಅಧಿಕಾರಿಗಳು ನಮಗೆ ತೋರಿಸಿದರು. ಭದ್ರತೆಯ ಕಾರಣದಿಂದಾಗಿ ಬೆಂಗಾವಲು ಸಹಿತವಾದ ಪ್ರವೇಶವನ್ನೂ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ’ ಎಂದು ಯೆಚೂರಿ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಶ್ರೀನಗರ ವಿಮಾನ ನಿಲ್ದಾಣದಿಂದ ಅವರಿಬ್ಬರನ್ನೂ ಮರಳಿ ದೆಹಲಿಗೆ ಕಳುಹಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ ಮುಖಂಡ ಗುಲಾಂನಬಿ ಆಜಾದ್‌ ಅವರನ್ನೂ ಗುರುವಾರ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂಧಿಸಿ ದೆಹಲಿಗೆ ವಾಪಸ್‌ ಕಳುಹಿಸಲಾಗಿತ್ತು.

ಸ್ವಾತಂತ್ರ್ಯೋತ್ಸವ ಆಚರಣೆ: ‘ಆಗಸ್ಟ್‌ 15 ರಂದು ರಾಜ್ಯದ ಪ್ರತಿ ಪಂಚಾಯಿತಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು’ ಎಂದು ಬಿಜೆಪಿಯ ಜಮ್ಮು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದ್ರ ರೈನಾ ತಿಳಿಸಿದರು.

‘370ನೇ ವಿಧಿಯನ್ನು ರದ್ದು ಮಾಡಿರುವುದು ರಾಜ್ಯದ ಜನಸಾಮಾನ್ಯರಿಗೆ ಲಭಿಸಿರುವ ಬಹು ದೊಡ್ಡ ಗೆಲುವಾಗಿದೆ. ಜಮ್ಮು ಕಾಶ್ಮೀರದ ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಬೇಕು’ ಎಂದು ಅವರು ಕರೆ ನೀಡಿದರು.

ಥಾರ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದು

ಪಾಕಿಸ್ತಾನದ ಖೊಕ್ರಪರ್‌ನಿಂದ ರಾಜಸ್ಥಾನದ ಮುನಾಬಾವೊ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ‘ಥಾರ್‌ ಎಕ್ಸ್‌ಪ್ರೆಸ್‌’ ರೈಲು ಸಂಚಾರವನ್ನು ಸಹ ರದ್ದುಪಡಿಸುವುದಾಗಿ ಪಾಕಿಸ್ತಾನ ಶುಕ್ರವಾರ ಹೇಳಿದೆ.

‘ನಾನು ರೈಲ್ವೆ ಖಾತೆಯ ಸಚಿವನಾಗಿರುವವರೆಗೂ ಭಾರತ–ಪಾಕಿಸ್ತಾನದ ಮಧ್ಯೆ ರೈಲು ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಪಾಕಿಸ್ತಾನದ  ರೈಲ್ವೆ ಖಾತೆ ಸಚಿವ ಶೇಖ್‌ ರಷೀದ್‌ ಶುಕ್ರವಾರ ಹೇಳಿದ್ದಾರೆ.

ಸಾಂಸ್ಕೃತಿಕ ಸಂಬಂಧಕ್ಕೂ ಕತ್ತರಿ: ಭಾರತದೊಂದಿಗಿನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನೂ ಸಹ ಪಾಕಿಸ್ತಾನ ಮೊಟಕುಗೊಳಿಸಿದೆ. ಪಾಕಿಸ್ತಾನದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ‘ಭಾರತ ಬೇಡ ಎನ್ನಿ’ ಎಂಬ ಅಭಿಯಾನವನ್ನೇ ಆರಂಭಿಸಿದೆ.

25 ಮಂದಿ ಆಗ್ರಾ ಜೈಲಿಗೆ

ಜಮ್ಮು ಕಾಶ್ಮೀರ ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಮಿಯಾ ಖಯ್ಯೂಂ ಹಾಗೂ ಪದಾಧಿಕಾರಿ ಮುಬೀನ್‌ ಶಾ ಸೇರಿದಂತೆ 25 ಮಂದಿ ಪ್ರತ್ಯೇಕತಾವಾದಿಗಳನ್ನು ಶುಕ್ರವಾರ ಆಗ್ರಾ ಜೈಲಿಗೆ ಸ್ಥಳಾಂತರಿಸಲಾಗಿದೆ.

‘ಸ್ಥಳಾಂತರಗೊಂಡವರೆಲ್ಲ ಪ್ರತ್ಯೆಕತಾವಾದಿಗಳೆಂದು ಗುರುತಿಸಿಕೊಂಡವರಲ್ಲದೆ, ಜಮ್ಮು ಕಾಶ್ಮೀರದ ಶಾಂತಿ ಕದಡಿದ ಇತಿಹಾಸ ಹೊಂದಿದವರಾಗಿದ್ದಾರೆ. ಮುಂದೆಯೂ ಇವರು ಕಲ್ಲು ತೂರಾಟದಂಥ ಕೃತ್ಯದಲ್ಲಿ ತೊಡಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಎಲ್ಲರನ್ನೂ ವಾಯುಪಡೆಯ ವಿಶೇಷ ವಿಮಾನದಲ್ಲಿ ಕರೆತಂದು ಆಗ್ರಾದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು