ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ವಿರುದ್ಧ ಮೊಕದ್ದಮೆಗೆ ಅನುಮತಿ: ಆಂಧ್ರ ಸರ್ಕಾರಕ್ಕೆ ಪಿಸಿಐ ನೋಟಿಸ್‌

Last Updated 3 ನವೆಂಬರ್ 2019, 20:21 IST
ಅಕ್ಷರ ಗಾತ್ರ

ಅಮರಾವತಿ: ಮಾಧ್ಯಮ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಈಚೆಗೆ ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಆಂಧ್ರಪ್ರದೇಶ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ತಪ್ಪಾಗಿರುವ, ಆಧಾರರಹಿತವಾದ ಹಾಗೂ ಮಾನಹಾನಿಕಾರಕವಾದ ವರದಿ ಎನಿಸಿದ ಸಂದರ್ಭದಲ್ಲಿ ಸಂಬಂಧಿಸಿದ ಮಾಧ್ಯಮ ಸಂಸ್ಥೆಗಳ ಮೇಲೆ ಮೊಕದ್ದಮೆ ದಾಖಲಿಸಲು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಮುಕ್ತ ಅಧಿಕಾರವನ್ನು ನೀಡಿ ಆಂಧ್ರ ಸರ್ಕಾರ ಈಚೆಗೆ ಆದೇಶ ಹೊರಡಿಸಿತ್ತು.

ಈ ಮೊದಲು ಹೀಗೆ ಮೊಕದ್ದಮೆ ಹೂಡುವ ಅಧಿಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶೇಷ ಕಾರ್ಯದರ್ಶಿಗೆ ಇತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ, ವಾರ್ತಾ ಇಲಾಖೆಯ ವಿಶೇಷ ಕಾರ್ಯದರ್ಶಿಗೆ ನೋಟಿಸ್‌ ಜಾರಿ ಮಾಡಿರುವ ಪಿಸಿಐ, ಪ್ರತಿಕ್ರಿಯೆ ನೀಡಲು ಸೂಚಿಸಿದೆ.

ದೆಹಲಿಯಲ್ಲಿ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಪಿಸಿಐ ಅಧ್ಯಕ್ಷ ಚಂದ್ರಮೌಳಿ ಕುಮಾರ್ ಪ್ರಸಾದ್ ಅವರು, ‘ಆಂಧ್ರ ಸರ್ಕಾರದ ಈ ಆದೇಶ ಪತ್ರಕರ್ತರನ್ನು ನೈತಿಕವಾಗಿ ಕುಗ್ಗಿಸಲಿದೆ. ಮಾಧ್ಯಮದ ಸ್ವಾತಂತ್ರ್ಯಕ್ಕೂ ಧಕ್ಕೆ ತರಲಿದೆ. ವಿವರಣೆ ಕೋರುವ ಪಿಸಿಐ ಹಕ್ಕನ್ನೇ ಈ ಆದೇಶ ಪ್ರಶ್ನಿಸುವಂತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಂಧ್ರಪ್ರದೇಶ ಸರ್ಕಾರದ ಆದೇಶಕ್ಕೆ ದೇಶದಾದ್ಯಂತ ವಿವಿಧ ಸಂಘಟನೆಗಳಿಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಮಧ್ಯೆ, ಪತ್ರಕರ್ತರೂ ಆಗಿರುವ ಸಾರ್ವಜನಿಕ ನೀತಿ ಸಲಹೆಗಾರ ಕೆ.ರಾಮಚಂದ್ರಮೂರ್ತಿ ಮತ್ತು ಸರ್ಕಾರದ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ದೇವುಲಪಲ್ಲಿ ಅಮರ್‌ ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

ವಾರ್ತಾ ಸಚಿವ ಪೆರ್ನಿ ವೆಂಕಟರಾಮಯ್ಯ ಅವರು, ‘ವಸ್ತುಸ್ಥಿತಿಯನ್ನು ವರದಿ ಮಾಡುವ ಪತ್ರಕರ್ತರಿಗೆ ಆದೇಶ ಕುರಿತಂತೆ ಆತಂಕ ಅನಗತ್ಯ. ಆದರೆ, ಕೆಸರೆರಚಾಟದಲ್ಲಿ ತೊಡಗಿರುವ ಪತ್ರಕರ್ತರಿಗೆ ಹೆದರಿಕೆ ಉಂಟಾಗಿರಬಹುದು‘ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT