ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರೀತಿಗೆ ‘ಹುಟ್ಟುಹಬ್ಬ’ವೇ ನೆಪ

Last Updated 5 ಜೂನ್ 2018, 8:06 IST
ಅಕ್ಷರ ಗಾತ್ರ

ದಾವಣಗೆರೆ: ಪುಣೆ ಬೆಂಗಳೂರು ಹೆದ್ದಾರಿಯ ಬಳಿ ಕುಂದವಾಡದಿಂದ 3 ಕಿ.ಮೀ.ದೂರ ಸಾಗುತ್ತಿದ್ದಂತೆಯೇ ಸತ್ಯನಾರಾಯಣಪುರ ಕ್ಯಾಂಪ್‍ ರಸ್ತೆಯ ಪಕ್ಕದಲ್ಲಿ ಹಲವು ಬಗೆಯ ಹೂಗಳು ಕಂಗೊಳಿಸುತ್ತಿದ್ದವು. ಕಣ್ಣುಗಳಿಗೆ ಇಂಪು. ಮನಸ್ಸಿಗೆ ಉಲ್ಲಾಸ ನೀಡುತ್ತಿದ್ದವು. ಆದರೆ, ಈ ಹೂಗಳು ಅರಳಲು  ಕಾರಣವಾಗಿದ್ದು, ಒಂದು ಹುಟ್ಟುಹಬ್ಬ ಎಂದರೆ ನೀವು ನಂಬುತ್ತೀರಾ?

ಹೌದು! ಕ್ಯಾಂಪ್‌ನಲ್ಲಿ ಕಣ್ಮನ ಸೂರೆಗೊಳ್ಳುವ ತೋಟವೊಂದು ನಮಗೆ ಎದುರಾಗುತ್ತದೆ. ಅದು ಎನ್‌.ಎಸ್‌.ವೆಂಕಟರಾಮಾಂಜನೇಯ ಸ್ವಾಮಿ ಅವರ ತೋಟ. ಅಲ್ಲಿ ನೆಟ್ಟ ಗಿಡಗಳು ಅವರ ಮಗಳ ಹುಟ್ಟುಹಬ್ಬದ ದಿವಸ ನೆಟ್ಟ ಗಿಡಗಳು. 10 ವರ್ಷಗಳ ಹಿಂದೆ ನೆಟ್ಟ ಸಸಿಗಳಲ್ಲಿ ಇಂದು ಹೂವುಗಳು ಅರಳುತ್ತಿವೆ. ಇವು ಕೇವಲ ಬೊಕೆಯಲ್ಲಿ ಒಂದು ದಿವಸ ಇದ್ದು ಬಾಡಿಹೋಗುವ ಹೂವಲ್ಲ. ಬದಲಾಗಿ ಸದಾಕಾಲ ಸುವಾಸನೆ ಬೀರಿ ಜನರ ಮನಸ್ಸನ್ನು ಸಂತೋಷಗೊಳಿಸಬಲ್ಲಂತಹವು. ಪ್ರತಿ ವರ್ಷ ತಮ್ಮ ಮಕ್ಕಳ ಹುಟ್ಟುಹಬ್ಬ ಬಂದಾಗಲೆಲ್ಲಾ ಎಲ್ಲಾದರೂ ಒಂದು ಕಡೆ 50 ಗಿಡಗಳು ಭೂಮಿ ತಾಯಿಯ ಮಡಿಲು ಸೇರುತ್ತವೆ.
15 ಎಕರೆ ತೋಟದಲ್ಲಿ ಎಷ್ಟೆಲ್ಲಾ ಹಣ್ಣಿನ ಮರಗಳು, ಔಷಧೀಯ ಸಸ್ಯಗಳು, ಒಂದೇ ಜಮೀನಿನಲ್ಲಿ ಆದಾಯ ತಂದು ಕೊಡುವ ಹತ್ತಾರು ತರಕಾರಿಗಳು, ನೆಲದಲ್ಲಿ ಅಸಂಖ್ಯಾತ ಎರೆಹುಳುಗಳ ನರ್ತನ, ಪಕ್ಷಿಗಳ ಚಿಲಿಪಿಲಿ ಸದ್ದು, ಅಪರೂಪದ ಸಸ್ಯ ಸಂಕುಲಗಳು.

ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡಿ ಲಾಭದಾಯಕವಾಗಿ ಆದಾಯ ಬರುವಂತೆ ತೋಟವನ್ನು ರೂಪುಗೊಳಿಸಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕವನ್ನು ಬಳಸದೇ ಬೆಳೆ ಬೆಳೆದಿರುವುದು ಇವರ ವಿಶೇಷ. ತೋಟಗಾರಿಕೆ ಬೆಳೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿ ನಿರಂತರವಾಗಿ ಆದಾಯ ಗಳಿಸುತ್ತಿದ್ದಾರೆ. ಇವರ ಶಿಸ್ತುಬದ್ಧ ಕೃಷಿಯಲ್ಲಿ ನೋಡಿ ಕಲಿಯುವುದು ಹಲವಿದೆ. ತೋಟಗಾರಿಕೆ ಬೆಳೆಗಳಿಗೆ ಆರಂಭದಲ್ಲಿ ಬಿಟ್ಟರೆ ಆನಂತರದ ದಿನಗಳಲ್ಲಿ ಯಾವುದೇ ಖರ್ಚು ಮಾಡದಿರುವುದು ಇವರ ಕೃಷಿಯ ವಿಶೇಷ.

ಕಳೆ ತೆಗೆಯುವುದನ್ನು ಬಿಟ್ಟು ನಾಲ್ಕಾರು ವರ್ಷಗಳಾಗಿವೆ. ಜಮೀನು ಪೂರ್ತಿ, ಅಲ್ಲಲ್ಲಿ ಗ್ಲಿರಿಸೀಡಿಯಾ ಗಿಡಗಳನ್ನು ಬೆಳೆಸಿದ್ದಾರೆ. ಇವನ್ನು ತಿಂಗಳಿಗೊಮ್ಮೆ ಕಟಾವು ಮಾಡಿ, ಅಲ್ಲಲ್ಲಿ ಮುಚ್ಚಿಗೆ ಮಾಡುತ್ತಾರೆ. ಎರೆಗೊಬ್ಬರಯುಕ್ತ ಭೂಮಿಯಿಂದಾಗಿ ಬೆಳೆಗಳ ಇಳುವರಿ ಹೆಚ್ಚಿದೆ. ಕೀಟ, ರೋಗರುಜಿನಗಳ ಹಾವಳಿ ಇಲ್ಲ. ಫಸಲಿನ ಗಾತ್ರ ಮತ್ತು ತೂಕ ಹೆಚ್ಚಾಗಿದೆ.

ಇವರ ತೋಟದಲ್ಲಿ 100ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ನೆಟ್ಟಿದ್ದು, ಅವುಗಳೆಲ್ಲಾ ಮರಗಳಾಗಿ ಹಣ್ಣು ನೀಡುತ್ತಿವೆ. ಕೆಲವೊಂದು ಔಷಧೀಯ ಸಸ್ಯಗಳು, ತುಂಬ ಬೆಲೆಬಾಳುವ ಮರಗಳನ್ನು ಬೆಳೆಸಿದ್ದಾರೆ.

ಪಾಲಪತ್ತರ್ ಸಪೋಟ, ಹಾಲು ಸಪೋಟ, ಮೋಸಂಬಿ, ಕಿತ್ತಳೆ, ಚಕ್ಕೋತ, ಸೀತಾಫಲ, ರಾಮಫಲ, ಲಕ್ಷ್ಮಣಫಲ, ಗೋಡಂಬಿ ಮುಂತಾದ ಹಣ್ಣುಗಳು

ಅಲ್ಲದೇ ಸಾಗುವಾನಿ(ತೇಗ) ಮಹಾಘನಿ, ಸಿಲ್ವರ್ ಓಕ್, ಬೇವು, ಹೆಬ್ಬೇವು, ರಕ್ತ ಚಂದನ, ಶ್ರೀಗಂಧ, ಬಿ.ಟಿ. ಬಿದಿರು, ಮತ್ತಿ,
ತೆಂಗು ಲೋಕಲ್, ಹೈಬ್ರಿಡ್ ತೆಂಗು, ಕೋಕೊ, ಈಚಲ ಮರ, ಅಂಟುವಾಳ, ಅಡಿಕೆ ಮರಗಳು ಕಂಗೊಳಿಸುತ್ತವೆ. ಅಮೃತಾಂಜನ್ ಸಸಿ, ಲಾವಂಚ ಸಸಿ, ವಿವಿಧ ತರಕಾರಿಗಳನ್ನು ಬೆಳೆದಿದ್ದಾರೆ. ಇವುಗಳ ಜತೆಗೆ ಭತ್ತ ಬೆಳೆಯುವುದು, ಹೈನುಗಾರಿಕೆ, ಮೀನುಗಾರಿಕೆ, ಜೇನು ಕೃಷಿ ಮಾಡಿದ್ದಾರೆ.

1990ರಲ್ಲಿ ವೆಂಕಟರಾಮಾಂಜನೇಯ ಅವರ ತಂದೆ ನೆಕ್ಕಂಬಿ ಸುಬ್ಬಾರಾವ್ ಅನಾರೋಗ್ಯಕ್ಕೆ ತುತ್ತಾದರು. ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲ. ಅನಾರೋಗ್ಯ ತೀವ್ರಗೊಂಡು ಸುಬ್ಬಾರಾವ್ ಅವರು 1993ರಲ್ಲಿ ಕೊನೆ ಉಸಿರೆಳೆದರು. ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ ಇವರಿಗೆ ಓದುವ ಆಸೆ ಇದ್ದರೂ ಸಾಲದ ಹೊರೆ ಸಂಸಾರದ ಜವಾಬ್ದಾರಿಯನ್ನು ಹೆಗಲಿಗೆ ಹಾಕಿತ್ತು. ತಂದೆ ಬಿಟ್ಟುಹೋದ ಜಮೀನಿನಲ್ಲಿಯೇ ಕೃಷಿ ಮುಂದುವರಿಸಿದರು.

ವಿಭಜನೆಯಾದಾಗ ಆಂಜನೇಯ ಅವರ ಚಿಕ್ಕಪ್ಪನವರ ಭಾಗಕ್ಕೆ ಹಣ್ಣಿನ ಮರಗಳು ಸೇರ್ಪಡೆಗೊಂಡವು. ಹಣ್ಣು ಕೇಳಿದಾಗ ಅವರು ಕೊಡದೇ ಹೀಯಾಳಿಸುತ್ತಿದ್ದರು. ಅವರ ಮೂದಲಿಕೆಯ ಮಾತುಗಳೇ ಅವರಿಗೆ ಹಣ್ಣಿನ ಮರ  ಬೆಳೆಯಲು ಪ್ರೇರಣೆಯಾದವು. ತಾಯಿ ಹೇಳಿದಂತೆ ‘ನೀನು ಯಾರ ಬಳಿಯೂ ಕೈಯೊಡ್ಡಬಾರದು. ಬದಲಾಗಿ ನೀನೆ ಹಣ್ಣನ್ನು ಬೆಳೆ' ಎಂಬ ನುಡಿಗಳೇ ಇವರಿಗೆ ಸ್ಫೂರ್ತಿಯಾದವು.

ಪರಿಸರ ಪ್ರೇಮ:
ಸೀತಾರಾಮಾಂಜನೇಯ ಅವರು ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವಾಗ ಒಮ್ಮೆ ಅವರಿಗೆ ಅನಿಸಿದ್ದು 'ಊಟ ತಿಂಡಿಯಲ್ಲೇ ಖುಷಿ ಪಟ್ಟರೆ ಅದು ಒಂದೇ ದಿನ ನಂತರ ಮರೆತುಹೋಗುತ್ತದೆ. ಆದರೆ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು ಆಲೋಚಿಸಿದರು. ಆಗ ಹೊಳೆದಿದ್ದು, ಗಿಡ ನೆಡುವುದು. ಅಂದೇ ಇವರು ನಿರ್ಧರಿಸಿ ತಮ್ಮ ಹುಟ್ಟಹಬ್ಬ ಬಂದಾಗಲೆಲ್ಲ ಶಾಲಾ , ಕಾಲೇಜು, ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವ ನಿರ್ಧಾರ ಕೈಗೊಂಡರು. ಅಂದಿನಿಂದ ಗಿಡ ನೆಡುತ್ತಾ ಬಂದರು. ಮಕ್ಕಳ ಹುಟ್ಟು ಹಬ್ಬ ಬಂತೆಂದರೆ ಎಲ್ಲಾದರೂ ಒಂದು ಕಡೆ 50 ಸಸಿಗಳನ್ನು ನಡೆಸಲಾಗುತ್ತದೆ.

1999ರಿಂದ ಇಲ್ಲಿಯವರೆಗೆ ಸುಮಾರು 9,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಬರೀ ಗಿಡ ನಡೆವುದು ಅಷ್ಟೇ ಅಲ್ಲ. ಅಲ್ಲಿ ಅವರ ಸ್ನೇಹಿತರು ಇಲ್ಲವೇ ನಂಬಿಕೆಗೆ ಅರ್ಹರಾದವರನ್ನು ಸಸಿಗಳ ಪೋಷಣೆಯ ಹೊರೆ ಹೊರಿಸುತ್ತಾರೆ. ಕುಂದುವಾಡ ಶಾಲೆ, ಸಾಲುಕಟ್ಟೆ ಗ್ರಾಮ ಪಂಚಾಯಿತಿ, ಬೇವಿನಹಳ್ಳಿ ದೇವಸ್ಥಾನ, ಸತ್ಯನಾರಾಯಣ ಕ್ಯಾಂಪ್, ಸಿಂಧನೂರು ತಾಲ್ಲೂಕು ಶ್ರೀರಾನಮನಗರ,  ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಗುಡುದೂರು ಬಳಿ ಇವರು ನೆಟ್ಟ ಸಸಿಗಳು ಮರಗಳಾಗಿ ಬೆಳೆದಿವೆ. ಮನೆಯಲ್ಲಿ ಯಾವುದಾದರೂ ಶುಭ ಕಾರ್ಯಗಳು ನಡೆದರೆ ಬಂದ ಅತಿಥಿಗಳಿಗೆ ಉಡುಗೊರೆಯಾಗಿ ನೀಡುವುದು ಇವರ ಹವ್ಯಾಸ.

ಇವರ ಪರಿಸರ ಪ್ರೇಮಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. 2014–15ರಲ್ಲಿ ಕೃಷಿ ಇಲಾಖೆಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ರಾಜ್ಯ ಮಟ್ಟದ ಅನುಶೋಧಕರ ರೈತರ ಸಮ್ಮೇಳನದಲ್ಲಿ ಪ್ರಶಸ್ತಿ ಲಭಿಸಿದೆ.

**
ಹುಟ್ಟುಹಬ್ಬ, ಶುಭ, ಸಮಾರಂಭಗಳಿಗೆ ಕೊಡುಗೆ ನೀಡುವುದಾದರೆ ಪಾತ್ರೆಗಳ ಬದಲು ಹಣ್ಣಿನ ಗಿಡಗಳನ್ನು ನೀಡಿ, ನಿಮ್ಮ ಹುಟ್ಟುಹಬ್ಬ ಸಾರ್ಥಕವಾಗುತ್ತದೆ
ವೆಂಕಟರಾಮಾಂಜನೇಯ, ಕೃಷಿಕ
**
ವೆಂಕಟರಾಮಾಂಜನೇಯ ಅವರು ಭೂಮಿಯ ಗುಣಲಕ್ಷಣಗಳಿಗೆ ತಕ್ಕಂತೆ, ಪರಿಸರಕ್ಕೆ ಹಾನಿಯಾಗಂದಂತೆ ಕೃಷಿ ಮಾಡುತ್ತಾರೆ
ಡಾ.ಬಸವನಗೌಡ ಎಂ.ಜಿ. ತೋಟಗಾರಿಕಾ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT