ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಮಿಂಚಿನ ಸಂಚಾರ

Last Updated 23 ಜನವರಿ 2019, 20:17 IST
ಅಕ್ಷರ ಗಾತ್ರ

ನವದೆಹಲಿ: ನೆಹರೂ ಕುಟುಂಬದ ಮತ್ತೊಂದು ಕುಡಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಪ್ರವೇಶಕ್ಕೆ ಸಮ್ಮತಿ ಸೂಚಿಸಿರುವ ಕಾಂಗ್ರೆಸ್‌, ಉತ್ತರ ಪ್ರದೇಶದಾದ್ಯಂತ ಇರುವ ಪಕ್ಷದ ಕಾರ್ಯಕರ್ತರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದೆ.

ಪ್ರಿಯಾಂಕಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ, ‘ಪೂರ್ವಾಂಚಲ’ ಎಂದೇ ಕರೆಯಿಸಿಕೊಳ್ಳುವ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿಯನ್ನೂ ವಹಿಸಲಾಗಿದೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ನೇಮಕ ಹೊರಬಿದ್ದಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಸಹೋದರ ರಾಹುಲ್‌, ತಾಯಿ ಸೋನಿಯಾ ಪ್ರತಿ ನಿಧಿಸುವ ಅಮೇಠಿ ಮತ್ತು ರಾಯಬರೇಲಿ ಕ್ಷೇತ್ರಗಳಲ್ಲದೆ, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸಿರುವ ವಾರಾಣಸಿ ಕ್ಷೇತ್ರಗಳನ್ನು ಪೂರ್ವಾಂಚಲ ಒಳಗೊಂಡಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾರ್ಯಕ್ಷೇತ್ರವಾದ ಗೋರಖಪುರವೂ ಈ ಭಾಗದಲ್ಲೇ ಇರುವುದರಿಂದ ಪ್ರಿಯಾಂಕಾಗೆ ಹೊಸದಾಗಿ ದೊರೆತ ಹೊಣೆಗಾರಿಕೆ ಅತ್ಯಂತ ಸವಾಲಿನಿಂದಲೇ ಕೂಡಿದೆ.

ಪೂರ್ವಾಂಚಲದ ಗಡಿಗೆ ಅಂಟಿ ಕೊಂಡಿರುವ ಬಿಹಾರದಲ್ಲಿನ 40 ಲೋಕ ಸಭೆ ಕ್ಷೇತ್ರಗಳ ಗೆಲುವಿನ ಲೆಕ್ಕಾಚಾರವೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಲ್ಲಿರುವುದು ಸ್ಪಷ್ಟ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ದೇಶದಾದ್ಯಂತ ಸೋತು ಸುಣ್ಣವಾದ ತುಸು ದಿನಗಳ ಬಳಿಕ ಪ್ರಿಯಾಂಕಾ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರಬೇಕು ಎಂಬ ಕೂಗು (ಪ್ರಿಯಾಂಕಾ ಲಾವೋ ಕಾಂಗ್ರೆಸ್‌ ಬಚಾವೋ) ಪಕ್ಷದ ವಿವಿಧ ವಲಯಗಳಿಂದಲೇ ಕೇಳಿ ಬಂದಿತ್ತಾದರೂ, ರಾಹುಲ್‌ ‘ಪಟ್ಟಾಭಿಷೇಕ’ಕ್ಕೇ ಆದ್ಯತೆ ನೀಡಲಾಗಿತ್ತು.

ಬಹುಜನ ಸಮಾಜ ಪಕ್ಷದ ಮಾಯಾವತಿ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗಿನ ಮೈತ್ರಿಗೆ ಮನಸ್ಸು ಮಾಡದಿರುವುದರಿಂದ ವಿಚಲಿತರಾದಂತೆ ಕಂಡುಬಂದಿರುವ ರಾಹುಲ್‌ ಸೋದರಿಯ ವರ್ಚಸ್ಸನ್ನು ಬಳಸಿಕೊಳ್ಳುವತ್ತ ಒಲವು ತೋರುವಂತಾಗಿದೆ.

ಹೋಲಿಕೆಯಲ್ಲಿ ಇಂದಿರಾ:ಮನೋ ವಿಜ್ಞಾನ ವಿಷಯದ ಪದವೀಧರೆಯಾಗಿರುವ ಪ್ರಿಯಾಂಕಾ ಚಹರೆ, ನಡೆ, ನುಡಿ, ವ್ಯಕ್ತಿತ್ವದಲ್ಲಿ ಅಜ್ಜಿ ಇಂದಿರಾ ಗಾಂಧಿ ಅವರನ್ನೇ ಬಹುಪಾಲು ಹೋಲುತ್ತಾರೆ. ಹಾಗಾಗಿಯೇ ಪಕ್ಷದ ಸಕಾರಾತ್ಮಕ ಬದಲಾವಣೆಗೆ ಅವರ ರಾಜಕೀಯ ಪ್ರವೇಶ ನೇರವಾಗಿ ನೆರವಾಗುವುದು ಸಂಶಯಾತೀತ.

ಚಿಕ್ಕಂದಿನಲ್ಲಿ ಅಜ್ಜಿಗೆ ಆಪ್ತವಾಗಿದ್ದು, ಅವರ ವಾಕ್ಚಾತುರ್ಯ ಮತ್ತು ವರ್ಚಸ್ಸು ಮೈಗೂಡಿಸಿಕೊಂಡಿರುವ ಪ್ರಿಯಾಂಕಾಗೆ ಇಂದಿರಾ ಅವರ ಹಸನ್ಮುಖ ಬಳುವಳಿಯಾಗಿ ಬಂದಿದೆ. ಅಂತೆಯೇ ಈ ಹಿಂದೆ ನಡೆದ ಚುನಾವಣೆಗಳ ಪ್ರಚಾರದ ವೇಳೆ ಮಾತುಗಾರಿಕೆಯಿಂದಲೇ ಹೊಸ ಮತ್ತು ಹಳೆಯ ಪೀಳಿಗೆಯವರನ್ನು ಒಟ್ಟಾಗಿ ಆಕರ್ಷಿಸಿದ್ದು ಸುಳ್ಳಲ್ಲ. ತಂದೆ ರಾಜೀವ್‌ ಗಾಂಧಿ ಅವರೊಂದಿಗಿನ ಒಡನಾಟವೂ ಇವರಿಗೆ ರಾಜಕಾರಣದ ಒಳಹೊರಗನ್ನು ಪರಿಚಯಿಸಿದೆ.

ಜನರೊಂದಿಗಿನ ನೇರ ಸಂಪರ್ಕಕ್ಕೆ ಸಂಬಂಧಿಸಿದಂತೆ ಅಜ್ಜಿಯನ್ನು ಅನುಕರಿಸುವ, ವಿಶೇಷವಾಗಿ ತಮ್ಮ ಮಾತಿನಿಂದಲೇ ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುವ, ಪಕ್ಷದ ಎಲ್ಲ ವರ್ಗದ ಮುಖಂಡರನ್ನು ಒಟ್ಟಾಗಿ ಕರೆದೊಯ್ಯುವ ರಾಜಕೀಯ ಜಾಣ್ಮೆ ಪ್ರಿಯಾಂಕಾ ಅವರ ಮತ್ತೊಂದು ಗುಣವಾಗಿದೆ ಎಂಬುದು ತಳಮಟ್ಟದ ಕಾರ್ಯಕರ್ತರ ನಂಬಿಕೆಯೂ ಹೌದು.

2017ರ ಆರಂಭಕ್ಕೆ ನಡೆದಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗಿನ ಕಾಂಗ್ರೆಸ್‌ ಹೊಂದಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಿಯಾಂಕಾ, ಸೂಕ್ತ ನಿರ್ಧಾರ ಕೈಗೊಳ್ಳುವ ಛಾತಿ ಉಳ್ಳವರು.

ಉದ್ಯಮಿಯಾಗಿರುವ ಪತಿ ರಾಬರ್ಟ್‌ ವಾದ್ರಾ ಭೂ ಹಗರಣಗಳಿಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಕೆಲವು ಆರೋಪಗಳು ಪ್ರಿಯಾಂಕಾ ಅವರನ್ನು ರಾಜಕೀಯದಿಂದ ದೂರವೇ ಇರಿಸಬಹುದು ಎಂದೇ ಭಾವಿಸಿದ್ದ ಬಿಜೆಪಿ ಮತ್ತಿತರ ವಿರೋಧ ಪಕ್ಷಗಳನ್ನು ಅವರ ರಾಜಕೀಯ ಪ್ರವೇಶವು ಸಹಜವಾಗಿಯೇ ವಿಚಲಿತಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಉತ್ತರ ಪ್ರದೇಶದಲ್ಲಿ ಗೆದ್ದರೆ ಮಾತ್ರ ದೆಹಲಿಯ ಗದ್ದುಗೆ’ ಎಂಬ ನಂಬಿಕೆ ದಟ್ಟವಾಗಿರುವುದರಿಂದಲೇ ಪಕ್ಷವು ಪ್ರಿಯಾಂಕಾ ಅವರನ್ನು ಸದ್ಯದ ಮಟ್ಟಿಗೆ ಆ ರಾಜ್ಯಕ್ಕೆ ಸೀಮಿತಗೊಳಿಸಿದೆ. ಆದರೆ, ಇಂದಿರಾ ಅವರ ಪಡಿಯಚ್ಚಿನಂತಿರುವ ಪ್ರಿಯಾಂಕಾ ಅವರ ವರ್ಚಸ್ಸು ಅಲ್ಲಿಂದಾಚೆಯೂ ಕೆಲಸ ಮಾಡಲಿದೆ.

ಹದಗೆಡುತ್ತಿರುವ ಆರೋಗ್ಯದ ಕಾರಣ ಸಕ್ರಿಯ ರಾಜಕಾರಣದಿಂದ ದೂರ ಉಳಿಯುತ್ತಿರುವ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಚಿಕ್ಕಪ್ಪ ಸಂಜಯ್‌ ಗಾಂಧಿ ಅವರ ಪುತ್ರ ವರುಣ್‌ ಗಾಂಧಿಗೂ ಆಪ್ತವಾಗಿರುವ ಪ್ರಿಯಾಂಕಾ, ಈಗಾಗಲೇ ಬಿಜೆಪಿಯಿಂದ ಒಂದೊಂದೇ ಹೆಜ್ಜೆಯನ್ನು ಹೊರಗೆ ಇರಿಸುತ್ತಿರುವ ಪ್ರೀತಿಯ ತಮ್ಮನನ್ನು ಕಾಂಗ್ರೆಸ್‌ನತ್ತ ಸೆಳೆದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT