ಮಂಗಳವಾರ, ನವೆಂಬರ್ 19, 2019
23 °C

ಕರ್ತವ್ಯಕ್ಕೆ ಹಾಜರಾಗುವಂತೆ ಪೊಲೀಸರಿಗೆ ಆದೇಶಿಸಿದ ದೆಹಲಿ ಪೊಲೀಸ್ ಆಯುಕ್ತ

Published:
Updated:
Amulya Patnaik

ದೆಹಲಿ: ದೆಹಲಿ ಪೊಲೀಸ್ ಆಯುಕ್ತರ ಕಚೇರಿ ಹೊರಗಡೆ ಪ್ರತಿಭಟನೆ ನಡೆಸುತ್ತಿರುವ ಪೊಲೀಸರು  ಕರ್ತವ್ಯಕ್ಕೆ ಹಾಜರಾಗಬೇಕೆಂದು ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಿಕ್ ಹೇಳಿದ್ದಾರೆ. 

ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ಪೊಲೀಸರಿಗೆ ನ್ಯಾಯ ಲಭಿಸುವ ನಿರೀಕ್ಷೆಯಿದೆ. ಪೊಲೀಸರಿಗೆ ಇದು ಪರೀಕ್ಷಾ ಸಮಯ. ಪೊಲೀಸರಿಂದ ನಿರೀಕ್ಷೆಗಳಿವೆ. ನೀವು ಶಾಂತಿ ಕಾಪಾಡಬೇಕು ಎಂದು ದೆಹಲಿಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನಾ ನಿರತ ಪೊಲೀಸರನ್ನುದ್ದೇಶಿಸಿ ಮಾತನಾಡಿದ ಪಟ್ನಾಯಿಕ್ ಹೇಳಿದ್ದಾರೆ.

ನ್ಯಾಯಾಂಗದಲ್ಲಿ ನಂಬಿಕೆ ಇಡಿ. ಪೊಲೀಸರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಕೋರ್ಟ್ ಹೊರಗಡೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ವಕೀಲರಿಂದ ಹಲ್ಲೆ

 ಪೊಲೀಸ್ ಆಯುಕ್ತರ ಕಚೇರಿ ಹೊರಗೆ ಕೆಲವೇ ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು  ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಪೊಲೀಸ್ ಸಿಬ್ಬಂದಿಗಳು ಪ್ರತಿಭಟನಾ ಸ್ಛಳದಲ್ಲಿ ಜಮಾಯಿಸಿದ್ದಾರೆ.  ಪೊಲೀಸರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಒಂದು ರಸ್ತೆಯನ್ನೇ ಬಂದ್ ಮಾಡಬೇಕಾಗಿ ಬಂತು. ಘೋಷಣೆ ಕೂಗದೆ ಆರಂಭವಾಗಿದ್ದ ಪ್ರತಿಭಟನೆ  ಕೆಲವೇ ಹೊತ್ತಿನಲ್ಲಿ ಸದ್ದು ಮಾಡತೊಡಗಿತು ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಪಾರ್ಕಿಂಗ್ ವಿಷಯದಲ್ಲಿ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಮತ್ತು ವಕೀಲರ ನಡುವೆ ಶನಿವಾರ ವಾಗ್ವಾದವುಂಟಾಗಿತ್ತು. ಈ ಸಂಘರ್ಷದಲ್ಲಿ ಕನಿಷ್ಠ 20 ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, 40 ಸಹೋದ್ಯೋಗಿಗಳಿಗೆ ಗಾಯಗಳಾಗಿವೆ ಎಂದು ವಕೀಲರು ಹೇಳಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿತ್ತು. ಅದೇ ವೇಳೆ ಇಬ್ಬರು  ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು , ಗಾಯಗೊಂಡ ವಕೀಲರಿಗೆ ಪರಿಹಾರ ನೀಡುವಂತೆ ಹೇಳಿತ್ತು. ಆದಾಗ್ಯೂ, ವಕೀಲರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದಕ್ಕೆ ಪೊಲೀಸರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 ಇದಾದ ನಂತರ ನವೆಂಬರ್ 5, ಸೋಮವಾರದಂದು ಸಾಕೇತ್ ನ್ಯಾಯಾಲಯದ ಹೊರಗಡೆ ಪೊಲೀಸ್ ಸಿಬ್ಬಂದಿಯ ಮೇಲೆ ವಕೀಲರು ಹಲ್ಲೆ ನಡೆಸಿದ್ದಾರೆ. ವಕೀಲರು ಹಲ್ಲೆ ನಡೆಸುತ್ತಿರುವ  ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೊ ವೈರಲ್ ಆಗಿದೆ.

ಪೊಲೀಸ್ ಪ್ರಧಾನ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಕೆಲವರನ್ನು ಒಳಗೆ ಕರೆದು ಪೊಲೀಸ್ ಅಧಿಕಾರಿಗಳು ಮಾತನಾಡಿದ್ದಾರೆ. ಇದಾದ ಮೇಲೆ  ಪೊಲೀಸ್ ಆಯುಕ್ತರು  ಪ್ರತಿಭಟನಾ ನಿರತ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. 
ನಾವು ಹಲವಾರು ಸವಾಲುಗಳನ್ನು ಎದುರಿಸಿದ್ದೇವೆ, ವಿವಿಧ ಪರಿಸ್ಥಿತಿಗಳನ್ನು ನಿಭಾಯಿಸಿದ್ದೇವೆ. ಶನಿವಾರ ಮತ್ತು ಸೋಮವಾರ ನಡೆದದ್ದು ಪ್ರತ್ಯೇಕ ಘಟನೆಗಳಾಗಿವೆ. ಹೈಕೋರ್ಟ್ ಆದೇಶದ ಪ್ರಕಾರ ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು. ಎಲ್ಲರೂ ಶಾಂತಿ ಕಾಪಾಡಬೇಕು ಮತ್ತು ಕರ್ತವ್ಯಕ್ಕೆ ಮರಳಬೇಕು ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡಿ ಎಂದು  ಪಟ್ನಾಯಿಕ್ ಹೇಳಿದ್ದಾರೆ.
 

ಪ್ರತಿಕ್ರಿಯಿಸಿ (+)