ರಫೇಲ್‌ ಖರೀದಿ: ದರ ವಿವರ ಬಹಿರಂಗವೇ ‘ಸುಪ್ರೀಂ’ ಪ್ರಶ್ನೆ

7
ನ್ಯಾಯಾಲಯ ಉಸ್ತುವಾರಿಯಲ್ಲಿ ತನಿಖೆ ಕೋರಿದ ಅರ್ಜಿ ವಿಚಾರಣೆ

ರಫೇಲ್‌ ಖರೀದಿ: ದರ ವಿವರ ಬಹಿರಂಗವೇ ‘ಸುಪ್ರೀಂ’ ಪ್ರಶ್ನೆ

Published:
Updated:

ನವದೆಹಲಿ: ‘ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ವಿವರಗಳು ಬಹಿರಂಗವಾದರೆ ಮಾತ್ರ ರಫೇಲ್‌ ದರ ವಿವರಗಳ ಬಗ್ಗೆ ಚರ್ಚೆ ಸಾಧ್ಯ. ಹಾಗಾಗಿ ಈಗ ನಮ್ಮ ಮುಂದೆ ಇರುವ ಪ್ರಶ್ನೆ ದರ ವಿವರಗಳನ್ನು ಬಹಿರಂಗ ಮಾಡಬೇಕೇ ಬೇಡವೇ ಎಂಬುದಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಆದರೆ, ಫ್ರಾನ್ಸ್‌ನಿಂದ ಖರೀದಿಸಲಾಗುವ 36 ರಫೇಲ್‌ ಯುದ್ಧ ವಿಮಾನಗಳ ದರದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಈ ಮಾಹಿತಿ ಪ್ರಕಟವಾದರೆ ಪ್ರತಿಸ್ಪರ್ಧಿಗಳು ಅದನ್ನು ಅವರ ಅನುಕೂಲಕ್ಕೆ ಬಳಸಿಕೊಳ್ಳುವ ಅಪಾಯ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ. 

ದರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಸಲ್ಲಿಸಿದೆ. ಆದರೆ, ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಗೋಪ್ಯತೆ ನಿಯಮವನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠದ ಮುಂದೆ ಸಮರ್ಥಿಸಿಕೊಂಡರು. 

ಯಾವ ರೀತಿಯ ಯುದ್ಧ ವಿಮಾನ ಖರೀದಿಸಬೇಕು ಮತ್ತು ಅದರಲ್ಲಿ ಯಾವೆಲ್ಲ ಶಸ್ತ್ರಗಳು ಇರಬೇಕು ಎಂಬುದನ್ನು ನಿರ್ಧರಿಸಬೇಕಾದವರು ಪರಿಣತರೇ ಹೊರತು ನ್ಯಾಯಾಲಯ ಅಲ್ಲ. ದರ ವಿವರಗಳ ಬಗ್ಗೆ ಸಂಸತ್ತಿಗೆ ಕೂಡ ಪೂರ್ಣ ಮಾಹಿತಿ ನೀಡಿಲ್ಲ ಎಂದು ವೇಣುಗೋಪಾಲ್‌ ವಾದಿಸಿದರು. 

ಒಪ್ಪಂದಕ್ಕೆ ಫ್ರಾನ್ಸ್‌ ಸರ್ಕಾರದ ಖಾತರಿ ಇಲ್ಲ ಎಂದು ಅರ್ಜಿದಾರ ಪ್ರಶಾಂತ್‌ ಭೂಷಣ್‌ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್‌, ಫ್ರಾನ್ಸ್ ಸರ್ಕಾರದ ಖಾತರಿ ಇಲ್ಲ ಎಂಬುದು ನಿಜ. ಆದರೆ, ಅಲ್ಲಿನ ಸರ್ಕಾರ ಭರವಸೆ ಪತ್ರವೊಂದನ್ನು ನೀಡಿದೆ. ಅದು ಸರ್ಕಾರದ ಖಾತರಿಗೆ ಸಮಾನವಾಗಿದೆ ಎಂದು ಹೇಳಿದರು.  

ಕಾಯ್ದಿರಿಸಿದ ತೀರ್ಪು

ರಫೇಲ್‌ ಖರೀದಿ ಒಪ್ಪಂದದ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಒಳಪಡಿಸಿತು. ಒಪ್ಪಂದಕ್ಕೆ ಸಂಬಂಧಿಸಿ ಹಲವು ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿತು. ಫ್ರಾನ್ಸ್‌ ಸರ್ಕಾರದ ಖಾತರಿ ಯಾಕೆ ಇಲ್ಲ, ಡಾಸೋ ಕಂಪೆನಿಯು ಭಾರತೀಯ ಪಾಲುದಾರ ಸಂಸ್ಥೆಯನ್ನು ಆಯ್ಕೆ ಮಾಡಿದ ಬಗೆ, ಅಂತರ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಕಾರಣವೇನು ಮುಂತಾದ ಪ್ರಶ್ನೆಗಳು ಇದರಲ್ಲಿ ಸೇರಿದ್ದವು. ವಿಚಾರಣೆಯ ಬಳಿಕ ತೀರ್ಪನ್ನು ಪೀಠವು ಕಾಯ್ದಿರಿಸಿದೆ.

ವಾಯುಪಡೆ ಅಧಿಕಾರಿಗಳ ಹೇಳಿಕೆ

ವಾಯುಪಡೆಯ ಹಿರಿಯ ಅಧಿಕಾರಿಗಳು ರಫೇಲ್‌ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದರು. 1985ರಲ್ಲಿ ಮಿರಾಜ್‌ ವಿಮಾನಗಳ ಸೇರ್ಪಡೆಯ ಬಳಿಕ ಈವರೆಗೆ ಯಾವುದೇ ಹೊಸ ಶಸ್ತ್ರಸಜ್ಜಿತ ವಿಮಾನಗಳ ಖರೀದಿ ಆಗಿಲ್ಲ ಎಂದು ಅವರು ತಿಳಿಸಿದರು.

1997ರಲ್ಲಿ ಸುಕೋಯ್‌ ಮತ್ತು 2017ರಲ್ಲಿ ಲಘು ಯುದ್ಧ ವಿಮಾನಗಳ ಸೇರ್ಪಡೆ ಆಗಿದೆ. ಆದರೆ, ಇವು ಮೂರನೇ ತಲೆಮಾರಿನ ವಿಮಾನಗಳು. ಈಗ ಐದನೇ ತಲೆಮಾರಿನ ವಿಮಾನಗಳ ಅಗತ್ಯ ಇದೆ ಎಂದು ಹೇಳಿದರು.

ಕಾರ್ಗಿಲ್‌ ಯುದ್ಧ: ರಫೇಲ್‌ ಇಲ್ಲದೆ ಭಾರಿ ಹಾನಿ

ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ರಫೇಲ್‌ ಯುದ್ಧ ವಿಮಾನಗಳು ಇದ್ದಿದ್ದರೆ ಸಾವು ನೋವಿನ ಪ್ರಮಾಣ ಭಾರಿ ಕಡಿಮೆಯಾಗುತ್ತಿತ್ತು. ಈ ವಿಮಾನಗಳು ಶತ್ರುವಿನ ಮೇಲೆ 60 ಕಿ.ಮೀ. ದೂರದಿಂದಲೇ ದಾಳಿ ನಡೆಸಬಲ್ಲವು ಎಂದು ವೇಣುಗೋಪಾಲ್‌ ಹೇಳಿದರು.

ಕಾರ್ಗಿಲ್‌ ಯುದ್ಧ ನಡೆದದ್ದು 1999–2000ದಲ್ಲಿ. ರಫೇಲ್‌ ವಿಚಾರ ಚರ್ಚೆಗೆ ಬಂದಿರುವುದೇ 2014ರಲ್ಲಿ ಎಂದು ಪೀಠವು ಹೇಳಿತು. ತಾವು ಊಹಿಸಿಕೊಂಡು ಹೇಳಿದ್ದಾಗಿ ವೇಣುಗೋಪಾಲ್‌ ಸಮರ್ಥಿಸಿಕೊಂಡರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !