ರಘು ದೀಕ್ಷಿತ್‌ ಮೇಲೂ ‘ಮಿ–ಟೂ’

7

ರಘು ದೀಕ್ಷಿತ್‌ ಮೇಲೂ ‘ಮಿ–ಟೂ’

Published:
Updated:

ಚೆನ್ನೈ : ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿರುವ ‘ಮಿ–ಟೂ’ ಅಭಿಯಾನದಲ್ಲಿ ಹಾಡುಗಾರ ರಘು ದೀಕ್ಷಿತ್‌ ವಿರುದ್ಧ ಆರೋಪ ಕೇಳಿ ಬಂದಿದೆ. 

ತಮ್ಮ ವಿರುದ್ಧ ಆರೋಪ ಮಾಡಿರುವ ವ್ಯಕ್ತಿ ಹೇಳಿದ್ದು ಬಹುತೇಕ ಸರಿಯಾಗಿಯೇ ಇದೆ. ಆದರೆ ತಾವು ಇತರರನ್ನು ಹಿಂಸಿಸುವ ವ್ಯಕ್ತಿ ಅಲ್ಲ. ಆಗಿನ ಸನ್ನಿವೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರಿಂದ ಈ ಘಟನೆ ನಡೆದಿದೆ. ತಕ್ಷಣವೇ ಕ್ಷಮೆ ಕೇಳಿರುವುದಾಗಿ ಅವರು ತಿಳಿಸಿದ್ದಾರೆ. ಮತ್ತೊಮ್ಮೆ ಖುದ್ದಾಗಿ ಅವರ ಕ್ಷಮೆ ಕೇಳುವುದಾಗಿಯೂ ರಘು ದೀಕ್ಷಿತ್‌ ಪ್ರತಿಕ್ರಿಯೆ ನೀಡಿದ್ದಾರೆ. 

ರಘು ದೀಕ್ಷಿತ್‌ ಪ್ರಾಜೆಕ್ಟ್‌ ಎಂಬ ಬಹುಭಾಷಾ ಜನಪದ ಸಂಗೀತ ತಂಡದ ಮುಖ್ಯಸ್ಥರಾಗಿರುವ ರಘು ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಮಹಿಳೆಯ ಹೇಳಿಕೆಯನ್ನು ಗಾಯಕಿ ಚಿನ್ಮಯಿ ಶ್ರೀಪಾದ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಅತಿ ಹೆಚ್ಚು ಲೈಂಗಿಕ ಕಿರುಕುಳ ನೀಡುವವರಲ್ಲಿ ರಘು ಅವರೂ ಒಬ್ಬರು ಎಂದು ಈ ಮಹಿಳೆ ಹೇಳಿದ್ದಾರೆ. ಧ್ವನಿಮುದ್ರಣ ಸಂದರ್ಭದಲ್ಲಿ ಅವರು ತಮಗೆ ಕಿರುಕುಳ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.  

‘ಹಲವು ವರ್ಷಗಳ ಹಿಂದೆ ಧ್ವನಿಮುದ್ರಣಕ್ಕಾಗಿ ಅವರ ಸ್ಟುಡಿಯೊಕ್ಕೆ ನನ್ನನ್ನು ಕರೆದಿದ್ದರು. ನಾನು ಹೋದಾಗ ತಮ್ಮ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡತೊಡಗಿದರು (ಹೆಚ್ಚಿನ ವಿವಾಹಿತ ಗಂಡಸರು ಹೀಗೆ ಮಾಡುತ್ತಾರೆ). ಆದರೆ, ಅವರ ಹೆಂಡತಿ ಬಹಳ ಒಳ್ಳೆಯ ಮಹಿಳೆ. 

‘ಧ್ವನಿಮುದ್ರಣ ಮುಗಿದ ಬಳಿಕ ಅವರು ನನ್ನನ್ನು ಹತ್ತಿರಕ್ಕೆ ಎಳೆದುಕೊಂಡರು. ಚೆಕ್‌ಗೆ ಸಹಿ ಮಾಡುವಾಗ ಮುತ್ತು ಕೊಡುವಂತೆ ಹೇಳಿದರು... ಬಳಿಕ ಬಾಗಿಲ ಬಳಿ ನನ್ನನ್ನು ಎತ್ತಿಕೊಳ್ಳಲು ಮುಂದಾದರು. ನಾನು ಕಿರುಚುತ್ತಾ ಓಡಿದೆ...’ ಎಂದು ಚಿನ್ಮಯಿ ಅವರು ಹಂಚಿಕೊಂಡಿರುವ ಮಹಿಳೆಯ ಹೇಳಿಕೆಯ ಸ್ಕ್ರೀನ್‌ ಶಾಟ್‌ನಲ್ಲಿ ಇದೆ. 

ದೀಕ್ಷಿತ್‌ ಅವರು ಟ್ವಿಟರ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದಾರೆ. ತಮ್ಮ ವಿರುದ್ಧ ಆರೋಪ ಇರುವ ಸಾಮಾಜಿಕ ಜಾಲ ತಾಣದ ಹೇಳಿಕೆಯನ್ನು ಟ್ವೀಟ್‌ ಮಾಡಿದ ಚಿನ್ಮಯಿ ಮೇಲೆ ಯಾರು ದಾಳಿ ಮಾಡಬಾರದು. ಅವರು ಬೇರೆಯವರ ಪರವಾಗಿ ಈ ಕೆಲಸ ಮಾಡಿದ್ದಾರೆ ಎಂದು ರಘು ಹೇಳಿದ್ದಾರೆ. 

‘ಘಟನೆ ನಡೆದಿರುವುದು ಹೌದು, ಆದರೆ ಮಹಿಳೆ ಹೇಳಿದ ರೀತಿಯಲ್ಲಿಯೇ ಅಲ್ಲ.... ಆ ಮಹಿಳೆಯನ್ನು ನಾನು ಅಪ್ಪಿಕೊಂಡಿದ್ದು ಹೌದು, ಬಳಿಕ ಅವರಿಗೆ ಮುತ್ತಿಕ್ಕಲು ಯತ್ನಿಸಿದೆ. ಅವರು ನನ್ನನ್ನು ತಡೆದು, ಕೊಠಡಿಯಿಂದ ಹೊರ ನಡೆದರು. ನನ್ನ ವರ್ತನೆ ಇಷ್ಟವಾಗಲಿಲ್ಲ ಎಂದು ನಂತರ ಸಂದೇಶ ಕಳುಹಿಸಿದರು. ನಾನು ಆಗಲೇ ಅವರ ಕ್ಷಮೆ ಕೇಳಿದ್ದೇನೆ’ ಎಂದು ರಘು ಟ್ವೀಟ್‌ ಮಾಡಿದ್ದಾರೆ. 

‘ಹೆಂಡತಿಯ (ಈಗ ಪ್ರತ್ಯೇಕವಾಗಿರುವ) ಜತೆಗಿನ ಸಂಬಂಧ ಆಗ ಬಹಳ ಕೆಟ್ಟು ಹೋಗಿತ್ತು. ಹಾಗಾಗಿ ಈ ಗಾಯಕಿಯ ಜತೆಗೆ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದು ಹೌದು’ ಎಂದು ಅವರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !