ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಚೌಕೀದಾರ ಮಾತ್ರ ಕಳ್ಳ: ಮೋದಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

Last Updated 2 ಮಾರ್ಚ್ 2019, 16:40 IST
ಅಕ್ಷರ ಗಾತ್ರ

ರಾಂಚಿ: ‘ಎಲ್ಲ ಚೌಕೀದಾರರು ಕಳ್ಳರಲ್ಲ, ಈ ದೇಶದ ಚೌಕೀದಾರ(ಕಾವಲುಗಾರ) ಮಾತ್ರ ಕಳ್ಳ’ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಕಾವಲುಗಾರರು ನನ್ನ ಬಳಿ ಬಂದು ’ಚೌಕೀದಾರ್‌ ಚೋರ್‌ ಹೈ‘ ಘೋಷಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ನಾನು ಅವರಿಗೆ ಹೇಳಿದೆ. ನೀವು ಬೇಸರಿಸಿಕೊಳ್ಳುವ ಅವಶ್ಯಕತೆಯಿಲ್ಲ. ನೀವು ಪ್ರಾಮಾಣಿಕರು. ’ಚೌಕೀದಾರ್ ಚೋರ್‌ ಹೈ‘ ಎಂದರೆ, ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದು ನಾನು ಅವರಿಗೆ ತಿಳಿಸಿದೆ‘ ಎಂದು ವ್ಯಂಗ್ಯವಾಡಿದರು.

‘ಈ ಒಬ್ಬ ಚೌಕೀದಾರ, ದೇಶದ ಎಲ್ಲ ಚೌಕೀದಾರರ ಮಾನ ಕಳೆದಿದ್ದಾರೆ‘ ಎಂದೂ ಅವರು ಟೀಕಿಸಿದರು.

ವಾಯುಪಡೆಯಿಂದ ₹30 ಸಾವಿರ ಕೋಟಿ ಕಸಿದ ಪ್ರಧಾನಿ: ರಾಹುಲ್‌ ಗಾಂಧಿ ಆರೋಪ
’ಭಾರತೀಯ ವಾಯುಪಡೆಯು ದೇಶವನ್ನು ರಕ್ಷಿಸುತ್ತಿದೆ. ಆದರೆ, ಇದೇ ವಾಯುಪಡೆಯಿಂದ ₹30 ಸಾವಿರ ಕೋಟಿಯನ್ನು ಪ್ರಧಾನಿ ನರೇಂದ್ರ ಮೋದಿ ಕಸಿದುಕೊಂಡಿದ್ದಾರೆ‘ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರು.

’ರಫೇಲ್‌ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ, ವಾಯುಪಡೆಯ ₹30 ಸಾವಿರ ಕೋಟಿಯನ್ನು ಅನಿಲ್‌ ಅಂಬಾನಿಗೆ ಅಕ್ರಮವಾಗಿ ನೀಡಿದ್ದಾರೆ‘ ಎಂದು ಅವರು ದೂರಿದರು.

’ಕೈಗಾರಿಕೋದ್ಯಮಿಗಳ ₹3.5 ಲಕ್ಷ ಕೋಟಿ ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ಆದರೆ, ರೈತರು, ವಿದ್ಯಾರ್ಥಿಗಳು, ಸಣ್ಣ ವರ್ತಕರ ಸಾಲವನ್ನು ಮನ್ನಾ ಮಾಡಲು ಅವರಿಗೆ ಆಗುವುದಿಲ್ಲ‘ ಎಂದೂ ಅವರು ಟೀಕಿಸಿದರು.

’ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ನಿರ್ದಿಷ್ಟ ಆದಾಯ ಖಾತ್ರಿಯನ್ನು ನೀಡಲಿದೆ. ಬಡವರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ‘ ಎಂದೂ ಅವರು ಭರವಸೆ ನೀಡಿದರು.

ರಾಜಕೀಯ ಮುಖಂಡರ ಪ್ರತಿಕ್ರಿಯೆಗಳು

‘ಕಳೆದ ಚುನಾವಣೆಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ’

2014ರ ಲೋಕಸಭಾ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು 2019ರ ಚುನಾವಣೆಯಲ್ಲಿ ಬಿಜೆಪಿಯು ಪಡೆಯಲಿದೆ.ಕಳೆದ ಚುನಾವಣೆಯಲ್ಲಿ ನಾವು 282 ಸ್ಥಾನಗಳನ್ನು ಗೆದ್ದಿದ್ದೆವು. ಈ ಬಾರಿ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ.

ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆ ವಿರುದ್ಧದಿಟ್ಟ ಕ್ರಮ ಕೈಗೊಂಡಿದೆ ಹಾಗೂ ದೇಶಕ್ಕೆ ಸಮರ್ಥ ನಾಯಕತ್ವ ನೀಡಿದೆ.

–ಪ್ರಕಾಶ್‌ ಜಾವಡೇಕರ್‌, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

‘ದೇಶ–ಗಡಿ ಬಲಗೊಳಿಸುವುದೇ ಆದ್ಯತೆ’

ಬಿಜೆಪಿಯು ‘ನಮ್ಮ ಮತಗಟ್ಟೆಯೇ ಬಲಿಷ್ಠ’ (ಮೇರಾ ಬೂತ್‌ ಸಬ್‌ಸೇ ಮಜಬೂತ್‌) ಎಂಬ ಅಭಿಯಾನ ಆರಂಭಿಸಿದೆ. ಆದರೆ, ನಮಗೆ ನಮ್ಮ ದೇಶವನ್ನು ಮತ್ತು ಗಡಿ ಭದ್ರತೆಯನ್ನು ಬಲಗೊಳಿಸುವುದೇ ಆದ್ಯತೆ.ಯೋಧರಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ನಮಗೆ ದೇಶವೇ ಮೊದಲು.

ಭಯೋತ್ಪಾದಕರೇ, ಇಸ್ಲಾಂ ಅನ್ನು ಗುತ್ತಿಗೆ ತೆಗೆದುಕೊಂಡಿದ್ದೀರಾ? ಬನ್ನಿ, ಇಲ್ಲಿ ಬಂದು ಭಾರತದ ‘ಉಲೇಮಾ’ (ಇಸ್ಲಾಂ ಪಂಡಿತರು) ಗಳೊಂದಿಗೆ ಚರ್ಚೆ ಮಾಡಿ. ಅವರು ನಿಮಗೆ ಇಸ್ಲಾಂ ಅಂದರೆ ಏನೆಂದು ಹೇಳುತ್ತಾರೆ. ಆತ್ಮಾಹುತಿ ಬಾಂಬ್‌ ದಾಳಿ ನಡೆಸುವುದನ್ನು ಇಸ್ಲಾಂ ಒಪ್ಪುವುದಿಲ್ಲ.

–ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಅಧ್ಯಕ್ಷ

‘ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿಲ್ಲ’

ನಾನು ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿಲ್ಲ. ಆದರೆ, ಮಹಾಘಟಬಂಧನ್‌ದಿಂದ ಯಾರನ್ನು, ಹೇಗೆ ಪ್ರಧಾನಿಯನ್ನಾಗಿಸಬೇಕು ಎಂಬ ಸಾಮರ್ಥ್ಯವಿದೆ.

ಉತ್ತರ ಪ್ರದೇಶದವರೊಬ್ಬರು ಪ್ರಧಾನಿಯಾದರೆ ನಮಗೆ ಖಂಡಿತ ಸಂತೋಷವಾಗುತ್ತದೆ. ಪ್ರಧಾನಿ ಮೋದಿಗೆ ಹೆದರಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿಲ್ಲ. ಸಂವಿಧಾನವನ್ನು ರಕ್ಷಿಸುವ ಉದ್ದೇಶದಿಂದ ನಾವು ಒಗ್ಗೂಡಿದ್ದೇವೆ.

–ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT