ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ ಎದುರು ಇಂದು ಸಭೆ: ರಾಹುಲ್‌ ‘ರಫೇಲ್‌’ ಲಡಾಯಿ

ನೌಕರರ ಮೇಲೆ ಒತ್ತಡ –ಆರೋಪ
Last Updated 12 ಅಕ್ಟೋಬರ್ 2018, 19:26 IST
ಅಕ್ಷರ ಗಾತ್ರ

ಬೆಂಗಳೂರು: ರಫೇಲ್‌ ಯುದ್ಧ ವಿಮಾನ ಖರೀದಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇದೀಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್‌) ಪದತಲಕ್ಕೆ ತರಲಿದ್ದಾರೆ.

‘ರಿಲಯನ್ಸ್‌ ಕಂಪನಿಗೆ ಬಹುಕೋಟಿ ಲಾಭ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್ ಡೀಲ್‌ನಲ್ಲಿ ಭಾಗಿಯಾಗಿದ್ದಾರೆ. ಮೋದಿ ಯಾರ ಚೌಕಿದಾರ’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸುತ್ತಿರುವ ರಾಹುಲ್‌, ಎಚ್‌ಎಎಲ್‌ನ ಕೊಡುಗೆಯನ್ನು ಬಣ್ಣಿಸಿ, ವಿಶ್ಲೇಷಿಸುವ ನೆವದಲ್ಲಿ ಪ್ರಧಾನಿ ವಿರುದ್ಧ ಲಡಾಯಿ ಆರಂಭಿಸಲು ಸಜ್ಜಾಗಿದ್ದಾರೆ.

ಸಂಸ್ಥೆಯ ಹಾಲಿ ಮತ್ತು ನಿವೃತ್ತ ಸಿಬ್ಬಂದಿ ಜತೆ ಸಂವಾದ ನಡೆಸಲಿರುವ ರಾಹುಲ್‌, ಪ್ರಮುಖವಾಗಿ ರಫೇಲ್ ಹಗರಣದ ಬಗ್ಗೆಯೇ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಎಚ್ಎಎಲ್ ಕೊಡುಗೆಗಳ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಚ್‌ಎಎಲ್‌ ಸುತ್ತ ಐನೂರು ಮೀಟರ್‌ ವ್ಯಾಪ್ತಿಯಲ್ಲಿ ಸಭೆ ನಡೆಸದಂತೆ ತಡೆಯಾಜ್ಞೆ ಇದೆ. ಈ ಕಾರಣಕ್ಕೆ ಮಿನ್ಸ್ಕ್ ಸ್ಕ್ವೇರ್ ಪಕ್ಕ ಸಂವಾದ ನಡೆಯಲಿದೆ ಎಂದು ಸಮಜಾಯಿಷಿ ನೀಡಿದರು.

‘ಸಂವಾದವನ್ನು ತಡೆಯಲು ಸಂಸ್ಥೆಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ. ಸಂವಾದದಲ್ಲಿ ಭಾಗವಹಿಸಬಾರದು ಎಂದು ನೌಕರರಿಗೆ ಮೌಖಿಕ ಸೂಚನೆ ನೀಡಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಶದ್‌ ಆರೋಪಿಸಿದರು.

‘ಈ ಕಾರ್ಯಕ್ರಮವನ್ನು ನಮ್ಮ ಪಕ್ಷ ಸಂಘಟನೆ ಮಾಡಿಲ್ಲ. ತಮ್ಮ ಜತೆಗೆ ಸಂವಾದ ನಡೆಸುವಂತೆ ಅಲ್ಲಿನ ನೌಕರರು ಹಲವು ಸಮಯದ ಹಿಂದೆಯೇ ಮನವಿ ಮಾಡಿದ್ದರು’ ಎಂದರು.

‘ಸಂವಾದದಲ್ಲಿ ಯಾವುದೇ ರಾಜಕಾರಣ ಇಲ್ಲ. ಪ್ರಧಾನಿ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಹಲವು ಸಲ ಇಳಿದರೂ ಸಂಸ್ಥೆಗೆ ಭೇಟಿ ನೀಡಿಲ್ಲ. ರಾಹುಲ್‌ ಅವರನ್ನು ನಾವೇ ಕೇಳಿಕೊಂಡಿದ್ದೆವು. ಸರ್ಕಾರ ನಮ್ಮ ಮಾತು ಕೇಳಲಿಲ್ಲ. ಹಾಗಾಗಿ, ವಿರೋಧ ಪಕ್ಷದ ನಾಯಕರ ಮೊರೆ ಹೋಗಿದ್ದೇವೆ’ ಎಂದು ಸಂಸ್ಥೆಯ ನಿವೃತ್ತ ನೌಕರ ಅನಂತಪದ್ಮನಾಭ ತಿಳಿಸಿದರು.

‘ಎಚ್‌ಎಎಲ್‌ಗೆ ಯುದ್ಧ ವಿಮಾನ ನಿರ್ಮಿಸುವ ಸಾಮರ್ಥ್ಯವಿದೆ. ಆದರೂ, ರಿಲಯನ್ಸ್ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಮೂಲಕ ಅನಿಲ್‌ ಅಂಬಾನಿ ಜೇಬಿಗೆ ₹ 30 ಸಾವಿರ ಕೋಟಿ ತುಂಬಿಸಲು ಪ್ರಧಾನಿ ನರೇಂದ್ರ ಮೋದಿ ನೆರವಾಗಿದ್ದಾರೆ’ ಎಂದು ರಾಹುಲ್‌ ಆರೋಪಿಸಿದ್ದರು. ಯುದ್ಧ ವಿಮಾನ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬುದು ಕಾಂಗ್ರೆಸ್‌ ಮುಖಂಡರ ಆರೋಪ.

ಒಂದೂವರೆ ಗಂಟೆ ಸಂವಾದ

ಬೆಂಗಳೂರಿಗೆ ಮಧ್ಯಾಹ್ನ ಬರಲಿರುವ ಅವರು 2.30ಕ್ಕೆ ಕುಮಾರಕೃಪಾ ಅತಿಥಿಗೃಹದಲ್ಲಿ ಪಕ್ಷದ ಮುಖಂಡರ ಜತೆಗೆ ಚರ್ಚೆ ನಡೆಸಲಿದ್ದಾರೆ. 3.30ರಿಂದ 5ರವರೆಗೆ ಸಂವಾದ ನಡೆಸಲಿದ್ದಾರೆ. ಸಂವಾದದಲ್ಲಿ 150 ಮಂದಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT