ಏಕಾಂಗಿ ಸ್ಪರ್ಧೆಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ನಿರ್ಧಾರ: ಯಾರಿಗೂ ಇಲ್ಲ ಅಪಾಯ

7
ಬಿಎಸ್‌ಪಿ ಘೋಷಣೆ

ಏಕಾಂಗಿ ಸ್ಪರ್ಧೆಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ನಿರ್ಧಾರ: ಯಾರಿಗೂ ಇಲ್ಲ ಅಪಾಯ

Published:
Updated:

ಜೈಪುರ: ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ.

ಆದರೆ, ಈ ನಿರ್ಧಾರದಿಂದ ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಮೇಲೆ ಹೆಚ್ಚಿನ ಪರಿಣಾಮ ಉಂಟಾಗದು. ಉತ್ತರ ಪ್ರದೇಶದ ಗಡಿ ಭಾಗದ ಕೆಲವು ಜಿಲ್ಲೆಗಳಲ್ಲಿ ಬಿಎಸ್‌ಪಿ ಪ್ರಬಲವಾಗಿದೆ. ಈ ಜಿಲ್ಲೆಗಳ ಫಲಿತಾಂಶದ ಮೇಲೆ ಮಾತ್ರ ಸ್ವಲ್ಪ ಮಟ್ಟಿನ ಪ್ರಭಾವ ಕಾಣಿಸಿಕೊಳ್ಳಬಹುದು. 

2008ರ ವಿಧಾನಸಭಾ ಚುನಾವಣೆಯಲ್ಲಿ ಶೇ 8ರಷ್ಟು ಮತಗಳೊಂದಿಗೆ ಬಿಎಸ್‌ಪಿ ಆರು ಸ್ಥಾನಗಳನ್ನು ಗೆದ್ದಿತ್ತು. 2013ರ ಚುನಾವಣೆಯಲ್ಲಿ ಬಿಎಸ್‌ಪಿಯ ಮತಗಳಿಕೆ ಶೇ 3.37ಕ್ಕೆ ಮತ್ತು ಸ್ಥಾನಗಳು ಮೂರಕ್ಕೆ ಕುಸಿದವು. 

ಶೇಖಾವತಿ ಪ್ರಾಂತ್ಯದ ಆರು ಜಿಲ್ಲೆಗಳ ಒಟ್ಟು 39 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್‌ಪಿಯ ಅಸ್ತಿತ್ವ ಇದೆ. ಈ ‍ಪ್ಯಾಂತ್ಯದಲ್ಲಿ 2008ರಲ್ಲಿ ಬಿಎಸ್‌ಪಿಗೆ ಸಿಕ್ಕ ಮತ ಪ್ರಮಾಣ ಶೇ 11 ಮತ್ತು 2013ರಲ್ಲಿ ಅದು ಶೇ 5ಕ್ಕೆ ಇಳಿಯಿತು. 

ಹಿಂದಿನ ಮತಗಳಿಕೆ ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ನೋಡುವುದಾದರೆ ರಾಜಸ್ಥಾನದಲ್ಲಿ ಬಿಎಸ್‌ಪಿಯ ಏಕಾಂಗಿ ಸ್ಪರ್ಧೆ ಯಾವುದೇ ದೊಡ್ಡ ಪಕ್ಷಕ್ಕೆ (ಬಿಜೆಪಿ ಅಥವಾ ಕಾಂಗ್ರೆಸ್‌) ಹೆಚ್ಚಿನ ಹೊಡೆತ ನೀಡದು ಎಂದು ರಾಜ ಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಹೆಚ್ಚೆಂದರೆ ಈ ಪ‍ಕ್ಷಗಳು ಪರಿಶಿಷ್ಟ ಜಾತಿಯ (ಎಸ್‌ಸಿ) ಜನರ ಮತಗಳನ್ನು ಕಳೆದುಕೊಳ್ಳಬಹುದು ಅಷ್ಟೇ. ರಾಜ್ಯದ 200 ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಲ್ಲಿ ಎಸ್‌ಸಿ ಮತದಾರರು ನಿರ್ಣಾಯಕ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನರ ಒಟ್ಟು ಮತಗಳ ಪ್ರಮಾಣ ಶೇ 18. 

ಉತ್ತರ ಪ್ರದೇಶದ ಗಡಿಯಲ್ಲಿರುವ ದೌಸಾ, ಭರತ್‌ಪುರ, ಕರೌಲಿ ಮತ್ತು ಸಿಕರ್‌ ಜಿಲ್ಲೆಗಳಲ್ಲಿ ಜಾಟವ್‌ ಸಮುದಾಯದ (ಎಸ್‌ಸಿ) ಮತದಾರರು ನಿರ್ಣಾಯಕ. ಮಾಯಾವತಿ ಅವರು ಈ ಸಮುದಾಯಕ್ಕೆ ಸೇರಿದವರು. ಈ ಜಿಲ್ಲೆಗಳಲ್ಲಿ ಇರುವ ಪ್ರಭಾವ ಇತರ ಜಿಲ್ಲೆಗಳಿಗೆ ಪಸರಿಸುವ ಸಾಧ್ಯತೆ ಕಡಿಮೆ. ಹಿಂದಿನ ಚುನಾವಣೆಯಲ್ಲಿ ಇಲ್ಲಿನ ಕ್ಷೇತ್ರವೊಂದರಿಂದ ಬಿಎಸ್‌ಪಿ ಟಿಕೆಟ್‌ನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರಾಜ್‌ಕುಮಾರ್‌ ಶರ್ಮಾ ಗೆದ್ದಿದ್ದಾರೆ’ ಎಂದು ರಾಜಕೀಯ ವಿಶ್ಲೇಷಕ ಓಂ ಶೈನಿ ಹೇಳುತ್ತಾರೆ.  ಗಂಗಾನಗರ, ಬಿಕಾನೇರ್‌, ಧೋಲ್‌ಪುರ, ಕರೌಲಿ ಮತ್ತು ಭರತ್‌ಪುರ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ 21ಕ್ಕೂ ಹೆಚ್ಚು.

ಕಾಂಗ್ರೆಸ್‌ಗೆ ಹಿನ್ನಡೆ ಅಲ್ಲ: ಕಮಲ್‌ನಾಥ್‌

ಭೋಪಾಲ್‌: ಮಾಯಾವತಿ ಅವರ ನಿರ್ಧಾರ ಕಾಂಗ್ರೆಸ್‌ಗೆ ಹಿನ್ನಡೆ ಅಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಹೇಳಿದ್ದಾರೆ.  ‘ಬಿಎಸ್‌ಪಿಯ ಮತ ಪ್ರಮಾಣ ಶೇ 6ರಷ್ಟನ್ನೂ ದಾಟದ ಕ್ಷೇತ್ರಗಳನ್ನೂ ಮಾಯಾವತಿ ಕೇಳುತ್ತಿದ್ದರು. ಈ ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟರೆ ಇಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಆಗಲಿ, ಬಿಎಸ್‌ಪಿ ಆಗಲಿ ಗೆಲ್ಲುವುದು ಸಾಧ್ಯವಾಗುವುದಿಲ್ಲ. ಇದರ ಲಾಭ ಪಡೆದುಕೊಂಡು ಬಿಜೆಪಿ ಅಲ್ಲಿ ಗೆಲುವು ಸಾಧಿಸಬಹುದು’ ಎಂದು ಕಮಲ್‌ನಾಥ್‌ ಹೇಳಿದ್ದಾರೆ. 

ಮೂರು ರಾಜ್ಯಗಳಿಗೆ 25 ಸಾವಿರ ಪೊಲೀಸರು

ನವದೆಹಲಿ (ಪಿಟಿಐ): ಛತ್ತೀಸಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ 25 ಸಾವಿರ ಪೊಲೀಸರನ್ನು ಕೇಂದ್ರ ಗೃಹ ಸಚಿವಾಲಯ ನಿಯೋಜಿಸಿದೆ. ಇದೇ 15ರೊಳಗೆ ನಿಯೋಜಿತ ರಾಜ್ಯಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಈ ಪೊಲೀಸರಿಗೆ ಸೂಚಿಸಲಾಗಿದೆ. 

ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ತಲಾ 50 ತುಕಡಿಗಳನ್ನು ಹಂಚಿಕೆ ಮಾಡಲಾಗಿದೆ. ಒಂದು ತುಕಡಿಯಲ್ಲಿ ನೂರು ಸಿಬ್ಬಂದಿ ಇರುತ್ತಾರೆ. ಛತ್ತೀಸಗಡಕ್ಕೆ 150 ತುಕಡಿಗಳನ್ನು ನಿಯೋಜಿಸಲಾಗಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ ನಕ್ಸಲ್‌ ಚಟುವಟಿಕೆ ತೀವ್ರವಾಗಿರುವುದರಿಂದ ಈ ರಾಜ್ಯಕ್ಕೆ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 

ಚುನಾವಣಾ ಹಂತಗಳು ಮತ್ತು ದಿನಾಂಕ ಪ್ರಕಟವಾದ ಬಳಿಕ ಈ ಪಡೆಯನ್ನು ಎಲ್ಲೆಲ್ಲಿ ನಿಯೋಜಿಸಲಾಗುವುದು ಎಂಬ ವಿವರವಾದ ಆದೇಶ ಪ್ರಕಟವಾಗಲಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !