ಆಡಳಿತ ವಿರೋಧಿ ಅಲೆ ತಡೆಗೆ ಮೋದಿ

7

ಆಡಳಿತ ವಿರೋಧಿ ಅಲೆ ತಡೆಗೆ ಮೋದಿ

Published:
Updated:
Deccan Herald

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾರಾಜೇ ಅವರು ರಾಜ್ಯದಾದ್ಯಂತ ನಡೆಸಿದ ‘ಗೌರವ ಯಾತ್ರೆ’ ಶನಿವಾರ ಸಮಾರೋಪಗೊಳ್ಳಲಿದ್ದು ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಮೋದಿ ಅವರು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. 

ಮುಖ್ಯಮಂತ್ರಿ ವಿರುದ್ಧ ಸರ್ಕಾರಿ ನೌಕರರು ತೀವ್ರ ಪ್ರತಿಭಟನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಭೇಟಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಚಿಂತೆಯೂ ರಾಜ್ಯ ಬಿಜೆಪಿಯಲ್ಲಿ ಇದೆ. 

ಬಿಜೆಪಿ ಸಂಕಷ್ಟದಲ್ಲಿದೆ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಮೋದಿ ಅವರು ಸರಣಿ ರ್‍ಯಾಲಿಗಳು ಮತ್ತು ಸಾರ್ವಜನಿಕ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಹೇಳಿದೆ. ಅಜ್ಮೀರ್‌ನಲ್ಲಿ ನಡೆಯಲಿರುವ ಗೌರವ ಯಾತ್ರೆಯ ಸಮಾರೋಪದೊಂದಿಗೆ ಮೋದಿ ಅವರ ಪ್ರಚಾರ ಆರಂಭವಾಗಲಿದೆ.

ಗೌರವ ಯಾತ್ರೆಯ ಎಲ್ಲ ಆರು ಹಂತಗಳಲ್ಲಿಯೂ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಮತ್ತು ಹಲವೆಡೆ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆದಿತ್ತು. ಸಮಾರೋಪ ಸಮಾರಂಭದಲ್ಲಿ ಮೋದಿ ಅವರು ಭಾಗವಹಿಸಲಿರುವುದರಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿ ಇದೆ. 

ಮೂರು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ನೌಕರರು ಪ್ರಧಾನಿಯ ರ್‍ಯಾಲಿ ನಡೆಯುವ ಸ್ಥಳದಲ್ಲಿಯೇ ಶನಿವಾರ ಧರಣಿ ನಡೆಸಲು ನಿರ್ಧರಿಸಿದ್ದಾರೆ. 50ಕ್ಕೂ ಹೆಚ್ಚು ಇಲಾಖೆಗಳ ಸುಮಾರು ಒಂದು ಲಕ್ಷ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಮೋದಿ ಸಮಾವೇಶವು ಮುಜುಗರದ ಸನ್ನಿವೇಶ ಸೃಷ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. 

ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಕಾಣಿಸುತ್ತಿರುವ ರಾಜ್ಯದಲ್ಲಿ ಬಿಜೆಪಿ ಮುಖಂಡರು ಮೋದಿ ಅವರ ಮೇಲೆಯೇ ಭರವಸೆ ಇಟ್ಟುಕೊಂಡಿದ್ದಾರೆ. ‘ಪ್ರಧಾನಿ ಭೇಟಿಯು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಲಿದೆ’
ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. 

10 ತಿಂಗಳಲ್ಲಿ 5ನೇ ಭೇಟಿ: ಕಳೆದ 10 ತಿಂಗಳಲ್ಲಿ ಮೋದಿ ಅವರು ರಾಜಸ್ಥಾನಕ್ಕೆ ನೀಡುತ್ತಿರುವ ಐದನೇ ಭೇಟಿ ಇದು. ಬಾರ್ಮೇರ್‌ ಸಮೀಪ ಪಚ್‌ಪದ್ರಾದಲ್ಲಿನ ತೈಲ ಸಂಸ್ಕರಣಾ ಯೋಜನೆಗೆ ಚಾಲನೆ ಕೊಡಲು ಜನವರಿಯಲ್ಲಿ ಮೋದಿ ಭೇಟಿ ನೀಡಿದ್ದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ರಾಷ್ಟ್ರೀಯ ಪೌಷ್ಠಿಕತೆ ಅಭಿಯಾನ’ಕ್ಕೆ ರಾಜ್ಯದ ಝುನ್‌ಝುನುವಿನಿಂದ ಮೋದಿ
ಅವರು ಮಾರ್ಚ್‌ 8ರಂದು ಚಾಲನೆ ನೀಡಿದರು. 

ವಿವಿಧ ಯೋಜನೆಗಳ ಫಲಾನುಭವಿಗಳ ಜತೆಗಿನ ಸಂವಾದದಲ್ಲಿ ಭಾಗವಹಿಸಲು ಮೋದಿ ಅವರು ಜೈಪುರಕ್ಕೆ ಬಂದಿದ್ದರು. ರಾಜ್ಯದ ಬೇರೆ ಬೇರೆ ಭಾಗಗಳ ಸುಮಾರು ಎರಡು ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿರ್ದಿಷ್ಟ ದಾಳಿಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಪರಾಕ್ರಮ ಪರ್ವ’ದಲ್ಲಿ ಭಾಗವಹಿಸಲು ಸೆ.28ರಂದು ಮೋದಿ ಅವರು ಜೋಧಪುರ ಸೇನಾ ನೆಲೆಗೆ ಭೇಟಿ ಕೊಟ್ಟಿದ್ದರು. 

‘ಮಾಯಾ ನಿರ್ಧಾರ ಪರಿಣಾಮ ಬೀರದು’

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಬಿಎಸ್‌ಪಿ ನಿರ್ಧಾರವು ತಮ್ಮ ಪಕ್ಷದ ಗೆಲುವಿನ ಸಾಧ್ಯತೆ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. 

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿರೋಧಪಕ್ಷಗಳ ಮಹಾಮೈತ್ರಿ ಕೂಟಕ್ಕೆ ಬಿಎಸ್‌ಪಿ ಕೂಡ ಸೇರಬಹುದು ಎಂಬ ಆಶಾವಾದವನ್ನು ರಾಹುಲ್‌ ವ್ಯಕ್ತಪಡಿಸಿದ್ದಾರೆ. 

‘ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮೈತ್ರಿ ಸಂಪೂರ್ಣ ಭಿನ್ನ ವಿಚಾರಗಳು. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರೂ ಅದನ್ನು ಸೂಚಿಸಿದ್ದಾರೆ. ರಾಜ್ಯಗಳಲ್ಲಿ ನಾವು ಬಹಳ ಹೊಂದಾಣಿಕೆಯ ಸ್ವಭಾವ ತೋರಿದ್ದೇವೆ. ನಮ್ಮ ರಾಜ್ಯ ಮಟ್ಟದ ಮುಖಂಡರಿಗಿಂತ ಹೆಚ್ಚು ಹೊಂದಾಣಿಕೆ ಮನೋಭಾವ ನನ್ನದು. ಮೈತ್ರಿ ಮಾತುಕತೆಯ ನಡುವಲ್ಲಿಯೇ ಏಕಾಂಗಿಯಾಗಿ ಸ್ಪರ್ಧಿಸಲು ಮಾಯಾವತಿ ನಿರ್ಧರಿಸಿದ್ದಾರೆ’ ಎಂದು ರಾಹುಲ್‌ ಹೇಳಿದ್ದಾರೆ. 

ನಕ್ಸಲರ ಜತೆ ‘ಕೈ’ ನಂಟು: ಅಮಿತ್‌ ಶಾ

ನರಹರಪುರ (ಛತ್ತೀಸಗಡ) (ಪಿಟಿಐ): ಛತ್ತೀಸಗಡದಲ್ಲಿ ಅಧಿಕಾರದಲ್ಲಿ ಉಳಿಯುವುದಕ್ಕಾಗಿ 2003ಕ್ಕಿಂತ ಹಿಂದಿನ ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷವು ನಕ್ಸಲರ ಜತೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ. 

ನಕ್ಸಲ್‌ ಹಾವಳಿ ತೀವ್ರವಾಗಿರುವ ನರಹರಪುರದಲ್ಲಿ ಬುಡಕಟ್ಟು ಸಮಾವೇಶವನ್ನು ಉದ್ದೇಶಿಸಿ ಶಾ ಮಾತನಾಡಿದರು. ನಕ್ಸಲ್‌ ಹಾವಳಿಯನ್ನು ಸಂ‍ಪೂರ್ಣವಾಗಿ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿ
ಯಾಗಿದೆ ಎಂದೂ ಅವರು ಹೇಳಿದರು. ಅಭಿವೃದ್ಧಿಯ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ವಿರೋಧ ಪಕ್ಷಗಳಿಗೆ ಅವರು ಸವಾಲು ಒಡ್ಡಿದರು. 

‘ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರ ನೇತೃತ್ವದಲ್ಲಿ ಬಿಜೆಪಿ ಛತ್ತೀಸಗಡ ವಿಧಾನಸಭಾ ಚುನಾವಣೆ ಎದುರಿಸಲಿದೆ. ಆದರೆ, ಕಾಂಗ್ರೆಸ್‌ಗೆ ಯಾರು ನೇತೃತ್ವ ಕೊಡಲಿದ್ದಾರೆ ಎಂದು ರಾಹುಲ್‌ ಬಾಬಾ (ಗಾಂಧಿ) ಅವರನ್ನು ನಾನು ಪ್ರಶ್ನಿಸುತ್ತಿದ್ದೇನೆ’ ಎಂದು ಶಾ ಹೇಳಿದರು. 

ಮುಖ್ಯಾಂಶಗಳು

* ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ನ ಚುನಾವಣಾ ಸಮಿತಿ ಅಧ್ಯಕ್ಷರಾಗಿ ಸಚಿನ್‌ ಪೈಲಟ್‌ ನೇಮಕ

* ಕಾಂಗ್ರೆಸ್‌ ಚುನಾವಣಾ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅಶೋಕ್‌ ಗೆಹ್ಲೋಟ್‌ ನೇಮಕ

* ರಾಜಸ್ಥಾನ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ಬಿಜೆಪಿ ಈಗಾಗಲೇ ನೇಮಿಸಿದೆ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !