ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಜಾತಿ ಮೀಸಲಿಗೆ ತಕರಾರು

Last Updated 10 ಜನವರಿ 2019, 20:19 IST
ಅಕ್ಷರ ಗಾತ್ರ

ನವದೆಹಲಿ: ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವುದಕ್ಕಾಗಿ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕರಿಸಿರುವುದನ್ನು ಪ್ರಶ್ನಿಸಿ ‘ಯೂಥ್‌ ಫಾರ್‌ ಇಕ್ವಾಲಿಟಿ’ ಎಂಬ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಸಂವಿಧಾನ (124ನೇ ತಿದ್ದುಪಡಿ) ಮಸೂದೆ 2019 ಅನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿವೆ. ಈ ಕಾಯ್ದೆ ಅನುಷ್ಠಾನಕ್ಕೆ ತಡೆ ನೀಡಬೇಕು ಮತ್ತು ಅದನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

15 (6) ಮತ್ತು 16 (6) ವಿಧಿಗಳ ಸೇರ್ಪಡೆ ಸಂವಿಧಾನದ ಮೂಲ ರಚನೆಯನ್ನೇ ಬದಲಾಯಿಸುತ್ತದೆ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ರದ್ದು ಮಾಡುತ್ತದೆ ಎಂದು ಅರ್ಜಿ ಸಲ್ಲಿಸಿದ ವಕೀಲ ಗೋಪಾಲ ಶಂಕರನಾರಾಯಣ ಹೇಳಿದ್ದಾರೆ. ವಿಧಿಗಳಾದ 14 (ಸಮಾನತೆ) ಮತ್ತು 16 (ತಾರತಮ್ಯಕ್ಕೆ ತಡೆ) ಸಂವಿಧಾನವು ಪ್ರತಿಪಾದಿಸುವ ಸಮಾನತೆಯ ಮೂಲ ಸ್ವರೂಪದ ಭಾಗ ಎಂಬುದನ್ನು ತಿದ್ದುಪಡಿಯು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಆರ್ಥಿಕ ಸ್ಥಿತಿಯೊಂದನ್ನೇ ಮಾನದಂಡವಾಗಿ ಇರಿಸಿಕೊಂಡು ಮೀಸಲಾತಿ ನೀಡಲಾಗದು ಮತ್ತು ಮೀಸಲಾತಿ ಪ್ರಮಾಣವು ಯಾವುದೇ ಕಾರಣಕ್ಕೂ ಶೇ 50ರಷ್ಟನ್ನು ಮೀರಬಾರದು ಎಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಿದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

‘ಸಂವಿಧಾನಕ್ಕೆ ಈಗ ಮಾಡಿರುವ ತಿದ್ದುಪಡಿಯು ಸಂವಿಧಾನದ 14ನೇ ವಿಧಿ ಮತ್ತು ಇತರ ವಿಧಿಗಳು ಪ್ರತಿಪಾದಿಸಿರುವ ಸಮಾನತೆಯ ಮೂಲ ಸ್ವರೂಪವನ್ನು ಉಲ್ಲಂಘಿಸಿದೆ’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

**

ಗೊಂದಲಮಯ
‘ಆರ್ಥಿಕವಾಗಿ ಹಿಂದುಳಿದವರು’ ಎಂಬುದಕ್ಕೆ ತಿದ್ದುಪಡಿ ಮಸೂದೆಯಲ್ಲಿ ಯಾವುದೇ ವ್ಯಾಖ್ಯಾನ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸಿಕೊಳ್ಳಬಹುದೇ ಎಂಬುದೂ ಸ್ಪಷ್ಟವಾಗಿಲ್ಲ. ಆದರೆ, ಕೇಂದ್ರ ಮತ್ತು ರಾಜ್ಯಗಳು ಇದನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸುವ ಸಾಧ್ಯತೆಯೂ ತಿದ್ದುಪಡಿಯಲ್ಲಿ ಇದೆ. ಇಂತಹ ಅಸ್ಪಷ್ಟ ತಿದ್ದುಪಡಿ ಅನುಷ್ಠಾನಯೋಗ್ಯವಲ್ಲ ಮತ್ತು ಸ್ವೇಚ್ಛೆಯಿಂದ ಕೂಡಿದ್ದು’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT