ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ರೈಲಿನಲ್ಲಿ ಪ್ರಯಾಣಿಸುವವರಿಗೆ ಆರೋಗ್ಯ ಸೇತು ಆ್ಯಪ್‌ ಕಡ್ಡಾಯ

Last Updated 12 ಮೇ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ‘ವಿಶೇಷ ರೈಲು’ಗಳಲ್ಲಿ ಪ್ರಯಾಣಿಸುವವರು‘ಆರೋಗ್ಯ ಸೇತು’ಮೊಬೈಲ್‌ ಆ್ಯಪ್‌ ಅನ್ನು ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಭಾರತೀಯ ರೈಲ್ವೆ ಮಂಗಳವಾರ ತಿಳಿಸಿದೆ,

ಆ್ಯಪ್‌ ಬಳಸುವಂತೆ ಸೋಮವಾರವಷ್ಟೇ ಸಲಹೆ ನೀಡಿದ್ದ ರೈಲ್ವೆ, ಈಗ ಆ್ಯಪ್‌ಅನ್ನು ಕಡ್ಡಾಯಗೊಳಿಸಿದೆ. ಮೊಬೈಲ್‌ನಲ್ಲಿ ಈ ಆ್ಯಪ್‌ ಹೊಂದಿಲ್ಲದವರಿಗೆ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ ಎಂದೂ ಹೇಳಿದೆ.

ಪ್ರಕರಣದ ಆಧಾರದ ಮೇಲೆ ನಿರ್ದಿಷ್ಟ ಪ್ರಯಾಣಿಕರಿಗೆ ಈ ಆ್ಯಪ್‌ ಅಳವಡಿಕೆಯಿಂದ ವಿನಾಯಿತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದೂ ಅಧಿಕಾರಿಗಳು ಹೇಳಿದ್ದಾರೆ.

‘ತಮ್ಮ ಸುರಕ್ಷತೆಗಾಗಿ ಪ್ರಯಾಣಿಕರು ಈ ಆ್ಯಪ್‌ಅನ್ನು ಅಳವಡಿಸಿಕೊಳ್ಳಬೇಕು.ಪ್ರತಿಯೊಬ್ಬರ ಬಳಿಯೂ ಈಗ ಸ್ಮಾರ್ಟ್‌ಫೋನ್‌ ಇರುವ ಕಾರಣ, ಈ ವಿಷಯವನ್ನು ವಿವಾದಗೊಳಿಸುವ ಅಗತ್ಯ ಇಲ್ಲ. ಆ್ಯಪ್‌ಅನ್ನು ಬಳಸುವ ಬಗ್ಗೆ ಪ್ರಯಾಣಿಕರಿಗೆ ಎಲ್ಲ ಸಹಾಯ ಒದಗಿಸಲಾಗುವುದು’ ಎಂದು ರೈಲ್ವೆ ವಕ್ತಾರ ಆರ್‌.ಡಿ.ಬಾಜಪೇಯಿ ಹೇಳಿದ್ದಾರೆ.

ಸ್ಮಾರ್ಟ್‌ಫೋನ್‌ ಹೊಂದಿರದವರಿಗಾಗಿ ಐವಿಆರ್‌ಎಸ್‌ ಸೌಲಭ್ಯ ಇದೆ. ಅವರು ಶುಲ್ಕರಹಿತ ಸಂಖ್ಯೆ 1921ಕ್ಕೆ ‘ಮಿಸ್ಡ್‌ ಕಾಲ್‌’ ನೀಡಬೇಕು. ‘ಮಿಸ್ಡ್‌ ಕಾಲ್‌’ ನೀಡಿದ ಮೊಬೈಲ್‌ಗೆ ಬರುವ ಕರೆಯನ್ನು ಸ್ವೀಕರಿಸಿ, ಮಾಹಿತಿ ಒದಗಿಸಬೇಕು ಎಂದು ಅವರು ತಿಳಿಸಿದ್ದಾರೆ.

ಟಕೆಟ್‌ ಕಾಯ್ದಿರಿಸಿದ 80 ಸಾವಿರ ಜನ: ನವದೆಹಲಿಯಿಂದ ವಿವಿಧ ನಗರಗಳಿಗೆ ಸಂಚರಿಸಲಿರುವ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಸಂಬಂಧ 80 ಸಾವಿರಕ್ಕೂ ಅಧಿಕ ಜನರು ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿದ್ದಾರೆ ಎಂದು ಭಾರತೀಯ ರೈಲ್ವೆ ಮಂಗಳವಾರ ತಿಳಿಸಿದೆ.

ಈ ರೈಲುಗಳಲ್ಲಿ ಪ್ರಯಾಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಜೆ 6ರಿಂದ ಮುಂಗಡ ಟಿಕೆಟ್‌ ಕಾಯ್ದಿರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈ ವರೆಗೆ ₹ 16.15 ಕೋಟಿ ಮೊತ್ತದ 45,533 ಟಿಕೆಟ್‌ಗಳನ್ನು ಬುಕ್‌ ಮಾಡಲಾಗಿದೆ. ಮುಂದಿನ ಒಂದು ವಾರ ಕಾಲ ಸಂಚರಿಸಲಿರುವ ಈ ರೈಲುಗಳಲ್ಲಿ ಒಟ್ಟು 82,317 ಜನರು ಪ್ರಯಾಣಿಸುವರು ಎಂದು ರೈಲ್ವೆ ಮೂಲಗಳುತಿಳಿಸಿವೆ. ಈ ವಿಶೇಷ ರೈಲುಗಳು ಹವಾನಿಯಂತ್ರಿತ ಕೋಚ್‌ಗಳನ್ನು ಮಾತ್ರ ಹೊಂದಿವೆ.

‘6.48 ಲಕ್ಷ ಕಾರ್ಮಿಕರ ಪ್ರಯಾಣ’

ಮೇ 1ರಿಂದ ಈ ವರೆಗೆ ಭಾರತೀಯ ರೈಲ್ವೆ 542 ‘ಶ್ರಮಿಕ ರೈಲು’ಗಳನ್ನು ಓಡಿಸಿದ್ದು, 6.48 ಲಕ್ಷ ವಲಸೆ ಕಾರ್ಮಿಕರು ಈ ರೈಲುಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

‘ಇನ್ನೂ ಹಲವು ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಸಿಲುಕಿದ್ದು, ಅವರಿಗಾಗಿ ಭಾರತೀಯ ರೈಲ್ವೆ 100 ಶ್ರಮಿಕ ರೈಲುಗಳನ್ನು ಓಡಿಸಲಿದೆ’ ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಈ ವಿಶೇಷ ರೈಲುಗಳನ್ನು ಓಡಿಸಿದ ಆರಂಭದ ದಿನಗಳಲ್ಲಿ ಮಾರ್ಗ ಮಧ್ಯೆ ಯಾವ ನಿಲ್ದಾಣಗಳಲ್ಲಿಯೂ ನಿಲುಗಡೆ ಇರಲಿಲ್ಲ. ಹಲವು ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈಗ ಗರಿಷ್ಠ ಮೂರು ಸ್ಥಳಗಳಲ್ಲಿ ನಿಲುಗಡೆ ನೀಡಲಾಗುತ್ತಿದೆ. ಗುಜರಾತ್‌ನಿಂದ ಗರಿಷ್ಠ ಸಂಖ್ಯೆಯ ಕಾರ್ಮಿಕರು ಪ್ರಯಾಣಿಸಿದ್ದು, ನಂತರದ ಸ್ಥಾನ ಕೇರಳದ್ದು. ಇನ್ನು, ತಮ್ಮ ತವರು ರಾಜ್ಯಗಳನ್ನು ಸೇರಿದ ಕಾರ್ಮಿಕರ ಪೈಕಿ ಬಿಹಾರ ಮತ್ತು ಉತ್ತರ ಪ್ರದೇಶದವರೇ ಗರಿಷ್ಠ ಸಂಖ್ಯೆಯಲ್ಲಿದ್ದಾರೆ ಎಂದೂ ರೈಲ್ವೆ ಮೂಲಗಳು ಹೇಳಿವೆ.

ತಾಯ್ನಾಡಿಗೆ 6 ಸಾವಿರ ಭಾರತೀಯರು

ವಿದೇಶಗಳಲ್ಲಿ ಸಿಲುಕಿದ್ದ 6,037 ಭಾರತೀಯರನ್ನು ಈ ಐದು ದಿನಗಳಲ್ಲಿ ಏರ್‌ ಇಂಡಿಯಾ ಮತ್ತು ಏರ್‌ ಇಂಡಿಯಾ ಏಕ್ಸ್‌ಪ್ರೆಸ್‌ ವಿಮಾನಗಳು ಭಾರತಕ್ಕೆ ಮರಳಿ ಕರೆತಂದಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.

ಮೇ 14ರ ಒಳಗೆ 12 ದೇಶಗಳಿಂದ 15,000 ಭಾರತೀಯರನ್ನು ವಂದೇ ಭಾರತ್‌ ಮಿಷನ್‌ನಡಿ ಕರೆತರಲು ಯೋಜನೆ ರೂಪಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ಸಿಲುಕಿರುವ 331 ಭಾರತೀಯರನ್ನು ಹೊತ್ತ ಏರ್‌ ಇಂಡಿಯಾ ವಿಮಾನವು ಮಂಗಳವಾರ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಅಹಮದಾಬಾದ್‌: ಲಾಕ್‌ಡೌನ್‌ನಿಂದಾಗಿ ಫಿಲಿಫ್ಫಿನ್ಸ್‌ನಲ್ಲಿ ಸಿಲುಕಿಕೊಂಡಿದ್ದ 138 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಮಾನವು ಮನಿಲಾದಿಂದ ಮಂಗಳವಾರ ಅಹಮದಾಬಾದ್‌ಗೆ ಬಂದಿಳಿಯಿತು.

ಈ ಎಲ್ಲ ವಿದ್ಯಾರ್ಥಿಗಳು ರಾಜ್ಯದ ನಾನಾ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸಲಾಗಿದೆ. 14 ದಿನಗಳ ಕಾಲ ಪ್ರತ್ಯೇಕವಾಗಿರಲು ವ್ಯವಸ್ಥೆ ಮಾಡಲಾಗಿದೆ ಎಂದು ಗುಜರಾತ್‌ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT