ಮಂಗಳವಾರ, ಜನವರಿ 21, 2020
26 °C
ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ದೇವಸ್ವಂ ನೌಕರರ ಚಿಂತನೆ

ಹೀಗೊಂದು ನಿಯಮ: ಶಬರಿಮಲೆ ದೇಗುಲದಲ್ಲಿ ಕಾಣಿಕೆ ಎಣಿಸುವವರು ಒಳಉಡುಪು ಧರಿಸಬಾರದು!

ಅರ್ಜುನ್‌ ರಘುನಾಥ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಾಣಿಕೆ ಎಣಿಸುವ ಸಿಬ್ಬಂದಿಯು ಒಳಉಡುಪು ಧರಿಸುವಾಗ ಇರುವ ನಿರ್ಬಂಧ ಈಗಲೂ ಮುಂದುವರಿದಿದೆ. ಇದಲ್ಲದೆ, ಸಿಬ್ಬಂದಿ ಮನೆಗೆ ಹೋಗುವಾಗ ಕಾಣಿಕೆಗಳನ್ನು ಕದ್ದೊಯ್ಯುತ್ತಾರೆಯೇ ಎಂಬುದನ್ನು ಪರಿಶೀಲಿಸಲು ಅವರ ಇಡೀ ದೇಹವನ್ನು ಪರಿಶೀಲಿಸುವ ಕ್ರಮವೂ ಇದೆ.

ಇಂತಹ ಕ್ರಮಗಳನ್ನು ಕೈಬಿಡಬೇಕು ಎಂದು ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಹತ್ತು ವರ್ಷಗಳ ಹಿಂದೆಯೇ ಹೇಳಿತ್ತು.

ಸ್ಕ್ಯಾನರ್‌ಗಳು ಮತ್ತು ಎಕ್ಸ್‌ರೇ ಘಟಕಗಳನ್ನು ಸ್ಥಾಪಿಸಿ ಅವುಗಳ ಮೂಲಕ ಪರಿಶೀಲನೆ ನಡೆಸಿ ಎಂದು ನೌಕರರು ಪದೇ ಪದೇ ಒತ್ತಾಯಿಸಿದ್ದಾರೆ. ಆದರೆ, ಅದಕ್ಕೆ ದೇವಾಲಯದ ಆಡಳಿತ ಮಂಡಳಿಯು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹಾಗಾಗಿ, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ತಿರುವಾಂಕೂರು ದೇವಸ್ವಂ ನೌಕರರ ಸಂಘವು ಚಿಂತನೆ ನಡೆಸಿದೆ. 

ನೌಕರರು ಕಾಣಿಕೆ ಕದ್ದ ಉದಾಹರಣೆಗಳು ಇವೆ. ಆದರೆ, ಬಹಳ ಅಪರೂಪಕ್ಕೆ ಒಮ್ಮೆ ಎಂಬಂತೆ ಇದು ನಡೆದಿದೆ. ಅದನ್ನೇ ನೆಪವಾಗಿ ಇರಿಸಿಕೊಂಡು ನೌಕರರನ್ನು ಬೆತ್ತಲೆ ಮಾಡಿ ಪರಿಶೀಲನೆ ನಡೆಸುವುದು ಸರಿಯಲ್ಲ, ಇದು ಅಮಾನವೀಯ ಎಂದು ನೌಕರರ ಸಂಘದ ಅಧ್ಯಕ್ಷ ಜಿ. ಬಿಜು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಗುಪ್ತಾಂಗಗಳಲ್ಲಿ ಇರಿಸಿಕೊಂಡು ಕಾಣಿಕೆಗಳನ್ನು ಕದ್ದೊಯ್ಯುವುದನ್ನು ತಡೆಯುವುದಕ್ಕಾಗಿಯೇ ಪರಿಶೀಲಿಸಲಾಗುತ್ತಿದೆ. ಈ ತೀರ್ಥಯಾತ್ರೆ ಋತುವಿನಲ್ಲಿ ಕಳ್ಳತನದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಟಿಡಿಬಿ ಅಧ್ಯಕ್ಷ ಎನ್‌. ವಾಸು ಹೇಳಿದ್ದಾರೆ. ದೇಹದ ಸ್ಕ್ಯಾನರ್‌ಗಳು ಮತ್ತು ಎಕ್ಸ್‌ ರೇ ಯಂತ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಹಣಕಾಸಿನ ಅಡಚಣೆಯಿಂದಾಗಿ ಇದು ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು