ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ನಾರಿ ಪ್ರವೇಶದ ವಿರುದ್ಧ ಭಾರಿ ಆಕ್ರೋಶ

Last Updated 15 ಅಕ್ಟೋಬರ್ 2018, 19:14 IST
ಅಕ್ಷರ ಗಾತ್ರ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಸುಪ್ರೀಂ ಕೋರ್ಟ್‌ ತೀರ್ಪು ಜಾರಿಯ ವಿರುದ್ಧದ ಪ್ರತಿಭಟನೆಯ ತೀವ್ರತೆಯನ್ನು ಬಿಜೆಪಿ ಇನ್ನಷ್ಟು ಹೆಚ್ಚಿಸಿದೆ. ಬೃಹತ್‌ ರ್‍ಯಾಲಿಯನ್ನು ಸಂಘಟಿಸಿರುವ ಬಿಜೆಪಿ ಆರು ದಿನಗಳ ಪ್ರತಿಭಟನಾ ಜಾಥಾದ ಸಮಾರೋಪ ಕಾರ್ಯಕ್ರಮವನ್ನು ಬಿಜೆಪಿ ನಡೆಸಿದೆ.

ಶಬರಿಮಲೆ ದೇವಸ್ಥಾನದ ಆಚರಣೆಗಳು ಮತ್ತು ಪರಂಪರೆಯನ್ನು ರಕ್ಷಿಸಲು ಬದ್ಧ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಪುನರುಚ್ಚರಿಸಿದ್ದಾರೆ.

ರ್‍ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿತ್ತು. ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸದೆ, ತೀರ್ಪನ್ನು ಜಾರಿಗೊಳಿಸಲು ಮುಂದಾಗಿರುವ ಕೇರಳ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಬಿಕ್ಕಟ್ಟಿಗೆ ಸರ್ಕಾರ ಪರಿಹಾರ ಕಂಡುಕೊಳ್ಳದಿದ್ದರೆ ಹೊಸತೊಂದು ಚಳವಳಿ ಆರಂಭಿಸುತ್ತೇವೆ ಎಂದು ಪಿಳ್ಳೆ ಪ್ರಕಟಿಸಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಶ್ರಮಿಸುತ್ತಿದೆ ಎಂಬ ಆಡಳಿತಾರೂಢ ಸಿಪಿಎಂ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಭಕ್ತರ ಹಿತಾಸಕ್ತಿಯನ್ನು ರಕ್ಷಿಸುವ ಕೆಲಸವನ್ನಷ್ಟೇ ಬಿಜೆಪಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ನೆಪವಾಗಿ ಇರಿಸಿಕೊಂಡು ಶಬರಿಮಲೆಯ ಮಹತ್ವವನ್ನು ನಾಶ ಮಾಡಲು ಸಿಪಿಎಂ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜಕೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡಿಲ್ಲದ ಹಲವು ಸಂಘಟನೆಗಳು ಕೂಡ ಪ್ರತಿಭಟನೆ ನಡೆಸುತ್ತಿವೆ. ಶಬರಿಮಲೆಯ ಬುಡದಲ್ಲಿಯೇ ಮಹಿಳೆಯರನ್ನು ತಡೆಯಲಾಗುವುದು ಎಂದು ಕೆಲವು ಸಂಘಟನೆಗಳು ಹೇಳಿವೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಹಿಡಿದುಕೊಂಡು ಕಾಂಗ್ರೆಸ್‌ ಮತ್ತು ಬಿಜೆಪಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿವೆ ಎಂದು ಸಿಪಿಎಂ ಆರೋಪಿಸಿದೆ.

ದೇವಸ್ಥಾನದ ಆಡಳಿತ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿಯು ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸಲು ಮಂಗಳವಾರ ಸಭೆ ಕರೆದಿದೆ. ಪಂದಳಂ ರಾಜ ಕುಟುಂಬದ ಪ್ರತಿನಿಧಿಗಳು, ದೇವಾಲಯದ ಪ್ರಧಾನ ಅರ್ಚಕರ ಕುಟುಂಬದ ಸದಸ್ಯರು ಮತ್ತು ಭಕ್ತರ ಗುಂಪುಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಪ್ರವೇಶಕ್ಕೆ ಶಿಕ್ಷಕಿ ನಿರ್ಧಾರ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆಗಳ ಕಾವು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಕಣ್ಣೂರಿನ 32 ವರ್ಷದ ಶಿಕ್ಷಕಿ ರೇಷ್ಮಾ ನಿಶಾಂತ್‌ ಅವರು ಅಯ್ಯಪ್ಪ ಸ್ವಾಮಿಯ 41 ದಿನಗಳ ವೃತಾಚರಣೆ ಕೈಗೊಂಡಿದ್ದು, ಅಯ್ಯಪ್ಪ ದೇವಸ್ಥಾನಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾರೆ.

ಬಹಳ ವರ್ಷಗಳ ನಂತರ ಅವಕಾಶ ಸಿಕ್ಕಿದೆ. ಇದು ಸ್ವಾಮಿಯ ದರ್ಶನಕ್ಕೆ ಹೋಗಲು ಲಕ್ಷಾಂತರ ಭಕ್ತರನ್ನು ಪ್ರೇರೇಪಿಸಿದೆ ಎಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ಈ ಹಿಂದೆಯೇ ದೇವಾಲಯಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದೆ. ಆದರೆ, ನನಗೆ ಅನುಮತಿ ಸಿಗುವುದಿಲ್ಲ ಎಂಬುದು ಗೊತ್ತಿತ್ತು’ ಎಂದು ರೇಷ್ಮಾ ಹೇಳಿದ್ದಾರೆ. ತಮ್ಮ ಫೇಸ್‌ಬುಕ್‌ ಪೋಸ್ಟ್ ಅನ್ನು ಸುಮಾರು 6,000 ಮಂದಿ ಹಂಚಿಕೊಂಡಿದ್ದಾರೆ. ತಮ್ಮ ಈ ಯೋಜನೆಯು ದೇವಸ್ಥಾನಕ್ಕೆ ಹೋಗಲು ಹಲವು ಮಹಿಳೆಯರಿಗೆ ಪ್ರೇರಣೆ ಆಗಬಹುದು ಎಂದಿದ್ದಾರೆ.

‘ಸುಮಾರು 50 ಜನರ ಗುಂಪೊಂದು ಭಾನುವಾರ ನನ್ನ ಮನೆಯ ಸಮೀಪ ಪ್ರತಿಭಟನೆ ನಡೆಸಿತು. ದೇವಸ್ಥಾನದ ಸಂಪ್ರದಾಯಗಳನ್ನು ವಿರೋಧಿಸಿದ್ದಾಗಿ ಆರೋಪಿಸಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ. ನನ್ನ ನಿರ್ಧಾರವನ್ನು ಪತಿ ನಿಶಾಂತ್‌ ಬಾಬು ಬೆಂಬಲಿಸಿದ್ದಾರೆ. ಬೆದರಿಕೆ ಹಾಕಿರುವ ಕುರಿತು ಪೊಲೀಸರಿಗೆ ದೂರು ನೀಡುತ್ತೇನೆ’ ಎಂದು ರೇಷ್ಮಾ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ನವೆಂಬರ್‌ 16 ರಿಂದ ಅಯ್ಯಪ್ಪ ಸ್ವಾಮಿ ಯಾತ್ರೆ ಆರಂಭವಾಗುತ್ತದೆ.

ರೇಶ್ಮಾ ಅವರ ಸ್ನೇಹಿತರು ಸೇರಿ ಹಲವು ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆಂದು ವರದಿಯಾಗಿದೆ. ಪಂಪಾ ಮತ್ತು ನಿಲಕ್ಕಲ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆಗಳನ್ನು ಮುಂದುವರಿಸಿವೆ. ಆದರೆ, ದೇವಾಲಯದ ಸಂಪ್ರದಾಯವನ್ನು ನಿಜವಾಗಿಯೂ ತಿಳಿದುಕೊಂಡಿರುವ ಯುವತಿಯರು ದೇವಸ್ಥಾನ ಪ್ರವೇಶದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್ ಹೇಳಿದ್ದಾರೆ.

‘ದೇವಸ್ಥಾನಕ್ಕೆ ಹೋಗಲೇಬೇಕು ಎಂದು ಪ್ರತಿಜ್ಞೆ ಮಾಡಿದ್ದೇನೆ. ನಂಬಿಕೆಯಲ್ಲಿ ಯಾವುದೇ ತಾರತಮ್ಯ ಇರಬಾರದು. ಸರ್ಕಾರ ಮತ್ತು ಸಾರ್ವಜನಿಕರು ಸಮಾನ ನ್ಯಾಯಕ್ಕಾಗಿ ಬೆಂಬಲ ನೀಡಬೇಕು’ ಎಂದು ರೇಶ್ಮಾ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT