ಮಂಗಳವಾರ, ಡಿಸೆಂಬರ್ 10, 2019
19 °C

ಸರ್ಕಾರ ರಚಿಸಿಯೇ ತೀರುತ್ತೇವೆ: ಬಿಜೆಪಿಗೆ ಪರೋಕ್ಷ ಸಂದೇಶ ರವಾನಿಸಿದ ಸಂಜಯ್ ರಾವುತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಅಗತ್ಯ ಬೆಂಬಲ ಪಡೆಯಲು ಶಿವಸೇನಾ ವಿಫಲವಾಗಿರುವ ಬೆನ್ನಲ್ಲೇ ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ಮಂಗಳವಾರ ಹಿಂದಿಯ ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಕವಿತೆಯನ್ನು ಹಾಕಿ ನಮ್ಮ ಪಕ್ಷ ಯಶಸ್ವಿಯಾಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ.

ಸೋಮವಾರವಷ್ಟೇ ಚಿಕಿತ್ಸೆಗೊಳಗಾಗಿರುವ ರಾವುತ್, ಅಲೆಗಳಿಗೆ ನೀವು ಹೆದರಿದ್ದೇ ಆದರೆ ನಿಮಗೆ ಸಮುದ್ರವನ್ನು ದಾಟಲು ಸಾಧ್ಯವಾಗುವುದಿಲ್ಲ. ಯಾರು ಧೈರ್ಯವಾಗಿ ಪ್ರಯತ್ನಿಸುತ್ತಾರೋ ಅವರು ಸೋಲುವುದಿಲ್ಲ ಎಂಬ ಕವಿತೆಯ ಸಾಲುಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಅಲ್ಲದೆ ನಾವು ಖಂಡಿತವಾಗಿಯೂ ಯಶಸ್ವಿಯಾಗಿಯೇ ತೀರುತ್ತೇವೆ ಎಂದು ಮಹಾರಾಷ್ಟ್ರ ಸರ್ಕಾರ ರಚನೆಯ ವಿಚಾರವಾಗಿ ರಾವುತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

57 ವರ್ಷದ ರಾವುತ್, ಸೋಮವಾರ ಎದೆ ನೋವಿನಿಂದಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದ ಅವರು ಎರಡ್ಮೂರು ದಿನ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದರು.

ಸರ್ಕಾರ ರಚನೆಯ ಹಕ್ಕು ರಚನೆಯಿಂದ ಬಿಜೆಪಿ ಹಿಂದೆ ಸರಿದ ಬಳಿಕ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಅವರು ಸರ್ಕಾರ ರಚನೆಗೆ ಶಿವಸೇನಾಗೆ ಆಹ್ವಾನ ನೀಡಿ 48 ಗಂಟೆಗಳ ಕಾಲಾವಕಾಶ ನೀಡಿದ್ದರು.

ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ತನ್ನ ನಿರ್ಧಾರವನ್ನು ಪ್ರಕಟಿಸಲು ಮಿತ್ರ ಪಕ್ಷ ಎನ್‌ಸಿಪಿ ಜತೆಗೆ ಇನ್ನಷ್ಟು ಮಾತುಕತೆ ನಡೆಸಿದ ಬಳಿಕವಷ್ಟೇ ಸೇನಾಕ್ಕೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಕಾಂಗ್ರೆಸ್‌ ಪಕ್ಷವು ಸೋಮವಾರ ಸಂಜೆ ಪ್ರಕಟಿಸಿತು. ಹಾಗಾಗಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಶಿವಸೇನಾಕ್ಕೆ ಸಾಧ್ಯವಾಗಿಲ್ಲ. ಇದರಿಂದಾಗಿ, ಮೂರನೇ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿರುವ ಎನ್‌ಸಿಪಿಗೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಸೋಮವಾರ ರಾತ್ರಿ ಆಹ್ವಾನ ನೀಡಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕಾಂಗ್ರೆಸ್‌ನೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)