ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಇಎಂ ಉಗ್ರರ ಕಟ್ಟಡಗಳು ಈಗಲೂ ಸದೃಢ

ಗುರಿತಪ್ಪಿ ಬಿದ್ದಿರುವ ಭಾರತದ ಬಾಂಬ್‌ಗಳು; ರಾಯಿಟರ್ಸ್‌ನಿಂದ ವಿಸ್ತೃತ ವರದಿ
Last Updated 7 ಮಾರ್ಚ್ 2019, 2:18 IST
ಅಕ್ಷರ ಗಾತ್ರ

‘ಪಾಕಿಸ್ತಾನದ ಬಾಲಾಕೋಟ್‌ ಬಳಿ ಜೈಷ್‌ ಎ ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿ, ಅವನ್ನು ಧ್ವಂಸ ಮಾಡಿರುವುದಾಗಿ ಭಾರತ ಸರ್ಕಾರ ಹೇಳುತ್ತಿದೆ. ಆದರೆ ಶಿಬಿರ ಇದ್ದ ಸ್ಥಳದಲ್ಲಿ ಇರುವ ಕಟ್ಟಡಗಳಿಗೆ ಯಾವುದೇ ಹಾನಿಯಾಗಿಲ್ಲ. ಅವು ಈಗಲೂ ಸದೃಢವಾಗಿವೆ. ಉಪಗ್ರಹ ಚಿತ್ರಗಳಲ್ಲಿ ಅದು ದೃಢಪಟ್ಟಿದೆ’ ಎಂದು ರಾಯಿಟರ್ಸ್ ವರದಿ ಮಾಡಿದೆ.

* ಈವರೆಗೆ ಹೆಚ್ಚು ಸ್ಪಷ್ಟವಾಗಿರುವ ಉಪಗ್ರಹ ಚಿತ್ರಗಳು ಲಭ್ಯವಿರಲಿಲ್ಲ. ಆದರೆ ಈಗ ಸ್ಯಾನ್‌ಫ್ರಾನ್ಸಿಸ್ಕೊದ ‘ಪ್ಲಾನೆಟ್ಸ್ ಲ್ಯಾಬ್ಸ್ ಇಂಕ್’ ಜೆಇಎಂ ಶಿಬಿರದ ಸ್ಪಷ್ಟ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ

* ಈ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ದಾಳಿಯ ವಿಶ್ಲೇಷಣೆ ನಡೆಸಲಾಗಿದೆ.ಮಿಡಲ್‌ಬರಿ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ಏಷ್ಯಾ ವಿಭಾಗದ ನಿರ್ದೇಶಕ ಜೆಫ್ರಿ ಲೂಯಿಸ್ ಈ ವಿಶ್ಲೇಷಣೆ ನಡೆಸಿದ್ದಾರೆ

ತಜ್ಞರ ಅಭಿಪ್ರಾಯಗಳು

2018ರ ಏಪ್ರಿಲ್‌ನಲ್ಲಿ ತೆಗೆದ ಚಿತ್ರದಲ್ಲಿ ಮತ್ತು 2019ರ ಮಾರ್ಚ್ 4ರಂದು ತೆಗೆದಿರುವ ಚಿತ್ರದಲ್ಲಿ ಕಟ್ಟಡಗಳು ಒಂದೇ ತರಹ ಇವೆ. ವರ್ಷದ ಹಿಂದೆಯೂ ಅಲ್ಲಿ ಆರು ಕಟ್ಟಡಗಳಿದ್ದವು. ಈಗಲೂ ಅಲ್ಲಿ ಆರು ಕಟ್ಟಡಗಳಿವೆ

ಸ್ಪೈಸ್–400 ಬಾಂಬ್‌ಗಳನ್ನು ಬಳಸಿರುವುದಾಗಿ ಭಾರತ ಸರ್ಕಾರ ಹೇಳುತ್ತಿದೆ. ಈ ಬಾಂಬ್‌ಗಳು ಕಟ್ಟಡಗಳ ಛಾವಣಿಯನ್ನು ಕೊರೆದುಕೊಂಡು ಒಳನುಗ್ಗಿ ಸ್ಫೋಟಗೊಳ್ಳುತ್ತವೆ. ಆದರೆ ಈ ಚಿತ್ರದಲ್ಲಿರುವ ಯಾವ ಕಟ್ಟಡಗಳ ಛಾವಣಿಯಲ್ಲೂ ಬಾಂಬ್‌ ಕೊರೆದಿರಬಹುದಾದ ರಂಧ್ರಗಳು ಕಾಣುತ್ತಿಲ್ಲ

ಇವು ವಿಧ್ವಂಸಕಕಾರಿ ಬಾಂಬ್‌ಗಳು. ಇವು ಸ್ಫೋಟಗೊಂಡರೆ ಕಟ್ಟಡಗಳ ಗೋಡೆಗಳಿಗೆ ಹಾನಿಯಾಗಬೇಕಿತ್ತು. ಆದರೆ ಅಂತಹ ಹಾನಿ ಈ ಉಪಗ್ರಹ ಚಿತ್ರಗಳಲ್ಲಿ ಕಾಣುತ್ತಿಲ್ಲ. ಕಟ್ಟಡಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಕುಳಿ ಉಂಟಾಗಿಲ್ಲ. ಜತೆಗೆ ಯಾವ ಮರಗಳೂ ಬಿದ್ದಿಲ್ಲ

ಶಿಬಿರದ ಅತ್ಯಂತ ಸಮೀಪಕ್ಕೆ ಹೋಗಿ ರಾಯಿಟರ್ಸ್ ವರದಿಗಾರ ಅಲ್ಲಿನ ಕಟ್ಟಡಗಳ ಚಿತ್ರ ತೆಗೆದಿದ್ದಾರೆ. ಆ ಚಿತ್ರಗಳಲ್ಲೂ ಕಟ್ಟಡಗಳು ಸುಸ್ಥಿತಿಯಲ್ಲಿಯೇ ಇವೆ

ಈ ಪ್ರದೇಶದಲ್ಲಿ ಬಾಂಬ್‌ಗಳು ಬಿದ್ದಿವೆ ಎಂದು ರಾಯಿಟರ್ಸ್‌ ವರದಿಗಾರ ಹೇಳಿದ್ದಾರೆ. ಬಾಂಬ್‌ನಿಂದ ಉಂಟಾಗಿವೆ ಎಂದು ಹೇಳಲಾದ ಕುಳಿಗಳು ಇರುವ ಸ್ಥಳದ ಲೊಕೋಷನ್‌ ಆಧಾರದಲ್ಲಿ ನಕ್ಷೆಯಲ್ಲಿ ಅವನ್ನು ಗುರುತಿಸಲಾಗಿದೆ. ಈ ಪ್ರಕಾರ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ದಾಳಿ ನಡೆಸುವಲ್ಲಿ ಗುರಿತಪ್ಪಿರುವ ಸಾಧ್ಯತೆ ಹೆಚ್ಚಾಗಿದೆ

ಜಾಬಾ ಸುತ್ತಿದ್ದ ಪತ್ರಕರ್ತ

ಬಾಲಾಕೋಟ್‌ನಲ್ಲಿ ಉಗ್ರರ ಶಿಬಿರದ ಮೇಲೆ ಭಾರತೀಯ ವಾಯುಪಡೆ ವಿಮಾನಗಳು ದಾಳಿ ನಡೆಸಿದ ಮರುದಿನವೇ ರಾಯಿಟರ್ಸ್ ವರದಿಗಾರ ಅಸೀಫ್ ಶಹಜಾದ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಜಾಬಾ ಗ್ರಾಮಸ್ಥರನ್ನು ಮಾತನಾಡಿಸಿ ಅವರು ಸರಣಿ ವರದಿಗಳನ್ನು ಪ್ರಕಟಿಸಿದ್ದರು. ‘ಭಾರತದ ಬಾಂಬ್‌ಗಳು ಗುರಿತಪ್ಪಿರುವ ಸಾಧ್ಯತೆ ಇದೆ’ ಎಂದೇ ಅವರು ತಮ್ಮ ಎಲ್ಲಾ ವರದಿಯಲ್ಲಿ ಉಲ್ಲೇಖಿಸಿದ್ದರು.

‘ತಡ ರಾತ್ರಿ ಭಾರಿ ಸದ್ದು ಕೇಳಿಸಿತ್ತು. ಭೂಕಂಪ ಆಯಿತೇನೋ ಅನ್ನುವಂತೆ ನೆಲವೆಲ್ಲಾ ನಡುಗಿತ್ತು. ಬೆಳಿಗ್ಗೆ ಎದ್ದಾಗ ಬಾಂಬ್ ದಾಳಿ ನಡೆದಿರುವುದು ಗೊತ್ತಾಯಿತು. ಆ ಬಾಂಬ್‌ಗಳಿಗೆ ಸಿಲುಕಿ ಯಾರೂ ಸತ್ತಿಲ್ಲ. ಒಬ್ಬನಿಗೆ ಗಾಯವಾಗಿದೆಯಷ್ಟೆ. ಕೆಲವು ಪೈನ್ ಮರಗಳು ಉರುಳಿಬಿದ್ದಿವೆ. ಒಂದು ಕಾಗೆ ಸತ್ತಿದೆ’ ಎಂದು ಜಾಬಾ ಗ್ರಾಮಸ್ಥ ಅಬ್ದುರ್ ರಶೀದ್ ಎಂಬುವವರು ಹೇಳಿದ್ದಾರೆ ಎಂದು ಅಸೀಫ್ ತಮ್ಮ ವರದಿಯಲ್ಲಿ ವಿವರಿಸಿದ್ದರು.

ಮರಗಳು ಬಿದ್ದಿವೆ ಎನ್ನಲಾದ ಸ್ಥಳಗಳಿಗೆ ಭೇಟಿ ನೀಡಿ, ಅವುಗಳ ಚಿತ್ರವನ್ನೂ ಅಸೀಫ್ ಪ್ರಕಟಿಸಿದ್ದರು. ‘ಶಿಬಿರವನ್ನು ಇಲ್ಲಿ ಮದರಸಾ ಎಂದು ಗುರುತಿಸುತ್ತಿದ್ದಾರೆ. ಅಲ್ಲಿಗೆ ಹೋಗಲು ಪತ್ರಕರ್ತರನ್ನಾಗಲೀ, ಸ್ಥಳೀಯರನ್ನಾಗಲಿ ಬಿಡುತ್ತಿಲ್ಲ’ ಎಂದು ಅವರು ಹೇಳಿದ್ದರು. ಈ ಬಗ್ಗೆ ಅವರು ಅನುಮಾನವನ್ನೂ ವ್ಯಕ್ತಪಡಿಸಿದ್ದರು.

ಶಿಬಿರಕ್ಕೆ ಹೋಗುವ ದಾರಿಯನ್ನು ಬಂದ್ ಮಾಡಿದ್ದ ಕಾರಣ, ಬೇರೊಂದು ದಾರಿಯಲ್ಲಿ ಅವರು ಅತ್ತ ಹೋಗಿದ್ದರು. ಅಲ್ಲಿಂದ ಶಿಬಿರದ ಕಟ್ಟಡಗಳ ಚಿತ್ರವನ್ನು ತೆಗೆದಿದ್ದರು.

‘ಹಾನಿ ಸ್ಪಷ್ಟವಾಗಿ ಕಾಣುತ್ತಿದೆ’

ನವದೆಹಲಿ (ಪಿಟಿಐ): ಭಾರತದ ದಾಳಿಯಿಂದ ಜೆಇಎಂ ಕಟ್ಟಡಗಳಿಗೆ ಹಾನಿಯಾಗಿರುವುದು ರಾಯಿಟರ್ಸ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರದಲ್ಲೇ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ದಾಳಿಯ ಸ್ಥಳದಲ್ಲಿರುವ ಕಟ್ಟಡದ ಚಾವಣಿ ಮೇಲೆ ನಾಲ್ಕು ಕಲೆಗಳಿವೆ. ಇದು ಸ್ಪೈಸ್‌–2000 ಬಾಂಬ್‌ಗಳು ನುಗ್ಗಿದ್ದರಿಂದ ಆಗಿರುವ ರಂಧ್ರಗಳು.ಕಟ್ಟಡದ ಸುತ್ತಲಿನ ಮೈದಾನದಂತ ಪ್ರದೇಶದಲ್ಲೂ ಸ್ವಲ್ಪ ಬದಲಾವಣೆ ಆಗಿದೆ ಎಂದು ಪಿಟಿಐವರದಿಯಲ್ಲಿ ವಿವರಿಸಲಾಗಿದೆ.

ಆಧಾರ: ರಾಯಿಟರ್ಸ್, ಗೋಗಲ್, ಡಿಜಿಟಲ್ ಗ್ಲೋಬ್, ಪ್ಲಾನೆಟ್ ಲ್ಯಾಬ್ಸ್‌ ಇಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT