ಸೋಮವಾರ, ಜುಲೈ 26, 2021
23 °C

ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್‌, ಸಂಧಾನಕಾರರ ಹೆಸರು ಸೂಚಿಸಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಅಯೋಧ್ಯೆ ರಾಮಜನ್ಮ ಭೂಮಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠವು ವಿಚಾರಣೆಯನ್ನು ತನ್ನ ನಿಗಾವಣೆಯಲ್ಲಿರುವ ಸಂಧಾನ ಸಮಿತಿಗೆ ವಹಿಸಬೇಕೇ? ಬೇಡವೇ ಎನ್ನುವ ಬಗ್ಗೆ ತನ್ನ ತೀರ್ಪು ಕಾಯ್ದಿರಿಸಿದೆ.

ಒಂದು ವೇಳೆ ಸಂಧಾನದ ಪ್ರಯತ್ನ ನಡೆಸಲು ನ್ಯಾಯಾಲಯ ನಿರ್ಧರಿಸಿದರೆ ಸಂಧಾನ ಸಮಿತಿಯಲ್ಲಿ ಯಾರೆಲ್ಲಾ ಇರಬಹುದು ಎನ್ನುವ ಬಗ್ಗೆ ನಿಮ್ಮ ಸಲಹೆ ನೀಡಿ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಕ್ಷಿದಾರರಿಗೆ ಸೂಚಿಸಿದರು.

ಸಂಧಾನಕ್ಕೆ ನಾವು ಸಿದ್ಧರಿಲ್ಲ: ಹಿಂದೂ ಮಹಾಸಭಾ

ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿಂದೂಮಹಾಸಭಾದ ವಕೀಲರು, ಹಿಂದೂಗಳು ಸಂಧಾನಕ್ಕೆ ಸಿದ್ಧರಿಲ್ಲ. ಅದು ಪವಿತ್ರ ಸ್ಥಳ. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಅಧಿಕಾರಿ ಯಾರಿಗೂ ಇಲ್ಲ. ನಮಗೆ ಇದು ಭಾವನಾತ್ಮಕ ವಿಷಯವೂ ಹೌದು. ದಯವಿಟ್ಟು ವಿವಾದವನ್ನು ಸಂಧಾನದಿಂದ ಪರಿಹರಿಸಿಕೊಳ್ಳಿ ಎಂದು ಹೇಳಬೇಡಿ. ನಾವು 1950ರಿಂದಲೂ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ಹಿಂದೂ ಮಹಾಸಭಾದ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಸ್‌.ಎ.ಬೋಬಡೆ, ‘ಪ್ರಯತ್ನ ಆರಂಭವಾಗುವುದಕ್ಕೆ ಮೊದಲೇ ಅದರ ಫಲಿತಾಂಶದ ಬಗ್ಗೆ ತೀರ್ಪು ನೀಡುತ್ತಿದ್ದೀರಿ ಅಲ್ಲವೇ? ಪ್ರಯತ್ನವನ್ನೇ ಮಾಡದೇ ಸಲಹೆಯನ್ನು ತಿರಸ್ಕರಿಸುವುದು ಎಷ್ಟರಮಟ್ಟಿಗೆ ಸರಿ? ನನಗೇನೋ ಇದು ಸರಿ ಎನಿಸುತ್ತಿಲ್ಲ. ನ್ಯಾಯಾಲಯವು ಸಂಧಾನಕ್ಕೆ ಒಂದು ಅವಕಾಶ ಸಿಗಬೇಕು ಎಂದು ಹೇಳಿದಾಗ, ಯಾರಾದರೂ ಒಂದಿಷ್ಟು ಪಾಲನ್ನು ಬಿಟ್ಟುಕೊಡಬೇಕು ಎಂಬುದು ಅದರ ಅಭಿಪ್ರಾಯ ಆಗಿರುವುದಿಲ್ಲ’ ಎಂದು ಹೇಳಿದರು.

‘ನಮ್ಮ ಪ್ರಕಾರ ಇದು 1500 ಗಜಗಳ ಭೂಮಿಗಾಗಿ ನಡೆಯುತ್ತಿರುವ ವಿವಾದ. ನೀವು ಇದನ್ನು ಭಾವನೆ ಅಥವಾ ನಂಬಿಕೆಯ ಸಂಗತಿ ಎಂದು ಹೊಸದಾಗಿ ಹೇಳುತ್ತಿದ್ದೀರಾ? ನಮಗದು ತಿಳಿದಿಲ್ಲವೇ? ನಿಮಗೆ ನಮಗಿಂತಲೂ ಹೆಚ್ಚು ನಂಬಿಕೆ ಇದೆಯೇ’ ಎಂದು ಪ್ರಶ್ನಿಸಿದರು.

ಅಯೋಧ್ಯೆ ಪ್ರಕರಣವು ನಮಗೆ ಈ ದೇಶದ ರಾಜಕೀಯ, ರಾಜಕಾರಣದ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಅರಿವು ಇದೆ. ಮನಸ್ಸು, ಹೃದಯಗಳ ಗಾಯ ಮಾಯುವುದು ಸಾಧ್ಯವೇ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ. ನೀವು ಪ್ರಯತ್ನವನ್ನೇ ಮಾಡದೇ ಸಂಧಾನ ಪ್ರಕ್ರಿಯೆಯನ್ನು ಏಕೆ ತಿರಸ್ಕರಿಸುತ್ತಿದ್ದೀರಿ ಎನ್ನುವುದು ಮಾತ್ರ ನಮಗೆ ಅರ್ಥವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಎಸ್‌.ಎ.ಬೋಬಡೆ ಆಕ್ಷೇಪಿಸಿದರು.

ಸಂಧಾನಕ್ಕೆ ಅವಕಾಶ ಮಾಡಿಕೊಡುವುದು ಎಂದರೆ ಯಾರೋ ಒಬ್ಬ ಸಂಧಾನಕಾರರು ಎಲ್ಲ ಪ್ರಕ್ರಿಯೆಯನ್ನು ನಿಯಂತ್ರಿಸುತ್ತಾರೆ ಎಂದು ಅರ್ಥವಲ್ಲ. ಒಂದು ಸಂಧಾನಕಾರರ ತಂಡವೇ ಈ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ನುಡಿದರು.

ಇಂಥ ಪ್ರಕರಣದಲ್ಲಿ ಸಂಧಾನ ಕಾರ್ಯಸಾಧುವೇ: ನ್ಯಾ.ಚಂದ್ರಚೂಡ್ ಪ್ರಶ್ನೆ

‘ಇದು ಇಬ್ಬರ ನಡುವಿನ ವ್ಯಾಜ್ಯವಲ್ಲ. ಎರಡು ಸಮುದಾಯಗಳು ಭಾಗಿಯಾಗಿರುವ ವಿವಾದ. ಇಂಥ ಪ್ರಕರಣವನ್ನು ಸಂಧಾನದ ಮೂಲಕ ಪರಿಹರಿಸಲು ಯತ್ನಿಸಬಹುದೇ? ಒಂದು ವೇಳೆ ಸಂಧಾನದ ಮಾರ್ಗ ಅನುಸರಿಸಿದರೂ ದೇಶದ ಲಕ್ಷಾಂತರ ಜನರನ್ನು ಬೆಸೆಯಲು ಸಾಧ್ಯವೇ’ ಎಂದು ಪ್ರಕರಣದಲ್ಲಿ ಅರ್ಜಿದಾರರಾಗಿರುವ ಮುಸ್ಲಿಂ ಕಕ್ಷಿದಾರರ ಪರ ಹಾಜರಾಗಿರುವ ವಕೀಲ ರಾಜೀವ್ ಅವರನ್ನು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರಶ್ನಿಸಿದರು.

‘ಸಂಧಾನ ಎಂದರೆ ಹೊಂದಾಣಿಕೆ ಎಂದು ಅರ್ಥ. ವಿವಾದವನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಂಧಾನದ ಮಾರ್ಗ ಒಳಿತು. ಒಮ್ಮೆ ಪ್ರಕರಣವು ಪ್ರಾತಿನಿಧಿಕ ಅರ್ಥಗಳನ್ನು ತೆಗೆದುಕೊಂಡರೆ ಅದರಲ್ಲಿ ಹೊಂದಾಣಿಕೆಗೆ ಅವಕಾಶವೇ ಇರುವುದಿಲ್ಲ’ ಎಂದು ನ್ಯಾ.ಚಂದ್ರಚೂಡ್ ಅಭಿಪ್ರಾಯಪಟ್ಟರು.

ಸಂಧಾನಕ್ಕೆ ನಾವು ಸಿದ್ಧ

ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್ ಧವನ್ ‘ನಾವು ಸಂಧಾನ ಪ್ರಕ್ರಿಯೆಯನ್ನು ಗೌರವಿಸುತ್ತೇವೆ. ಎಲ್ಲರೂ ಈ ಮಾರ್ಗವನ್ನು ಗೌರವಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕ್ರಿಯೆಯನ್ನೇ ನ್ಯಾಯಾಲಯ ನಿರ್ಲಕ್ಷಿಸಿದಂತೆ ಆಗುತ್ತದೆ. ಭಾವನಾತ್ಮಕ ವಿಷಯಗಳು ನ್ಯಾಯಾಲಯಕ್ಕೆ ಬರಬೇಕಿಲ್ಲ. ಎಲ್ಲ ಸಮುದಾಯಗಳಿಗೂ ಅದರದ್ದೇ ಆದ ಭಾವನೆಗಳಿರುತ್ತವೆ. ಶಬರಿಮಲೆ ವಿಚಾರದಲ್ಲಿಯೂ ಭಾವನೆಗಳು ಇತ್ತು. ನ್ಯಾಯಾಲಯವು ಆಕ್ರೋಶದ ಬಗ್ಗೆ ಏಕೆ ಮಾತನಾಡುತ್ತಿದೆ? ಅದನ್ನೇ ಪ್ರಧಾನವಾಗಿ ಪರಿಗಣಿಸುವುದಾದರೆ ಕಾನೂನು ಪ್ರಕ್ರಿಯೆಗೆ ಅರ್ಥವೇನು? ನಾವು ಸಂಧಾನಕ್ಕೆ ಸಿದ್ಧರಿದ್ದೇವೆ’ ಎಂದು ರಾಜೀವ್ ಧವನ್ ಹೇಳಿದರು.

‘ಇದು ಭಾವನೆಗಳ ಪ್ರಶ್ನೆ, ಮಾತುಕತೆ ಸಾಧ್ಯವೇ ಇಲ್ಲ. ಅಯೋಧ್ಯೆ ರಾಮನ ಜನ್ಮಭೂಮಿ ಎನ್ನುವ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಅಯೋಧ್ಯೆಯಲ್ಲಿ ರಾಮನ ಜನ್ಮಸ್ಥಾನ ಯಾವುದು ಎನ್ನುವುದು ಮಾತ್ರ’ ಎಂದು ವಕೀಲ ಸಿ.ಎಸ್.ವೈದ್ಯನಾಥನ್ ಹೇಳಿದರು. ಜನ್ಮಭೂಮಿ ಬೇರೆ ಆಗಲಾರದು, ಅದೇ ಜಾಗದಲ್ಲಿ ಮಂದಿರ ನಿರ್ಮಿಸಬೇಕಾಗಿರುವ ಕಾರಣ, ಮಸೀದಿಗೆ ಬೇರೆ ಜಾಗ ಹುಡುಕಿಕೊಳ್ಳಬೇಕಾಗುತ್ತದೆ’ ಎಂದು ವಾದಿಸಿದರು.

ಸಂಧಾನಕ್ಕೆ ಉ.ಪ್ರ.ಸರ್ಕಾರದ ವಿರೋಧ

ಉತ್ತರ ಪ್ರದೇಶ ಸರ್ಕಾರವು ಸಂಧಾನ ಪ್ರಕ್ರಿಯೆಯನ್ನು ವಿರೋಧಿಸಿದೆ. ‘ಸಂಧಾನ ಪ್ರಕ್ರಿಯೆಯು ಕಾನೂನಾತ್ಮಕವಾಗಿ ಸರಿಯಿದೆಯೇ ಎಂಬುದನ್ನು ಸುಪ್ರೀಂ ಕೋರ್ಟ್‌ ನಿರ್ಧರಿಸಬೇಕು. ಒಂದು ವಿಚಾರವನ್ನು ಸಂಧಾನದ ಮೂಲಕ ಪರಿಹರಿಸಲು ಸಾಧ್ಯ ಎನಿಸಿದಾಗ ಸುಪ್ರೀಂಕೋರ್ಟ್‌ ಇಂಥ ತೀರ್ಮಾನ ತೆಗೆದುಕೊಳ್ಳಬಹುದು. ಈ ಪ್ರಕರಣದ ಹಿನ್ನೆಲೆ ಗಮನಿಸಿ ಯೋಚಿಸಿದಾಗ ಸಂಧಾನದಿಂದ ಹೆಚ್ಚು ಉಪಯೋಗವಾಗಬಹುದು ಎನಿಸುವುದಿಲ್ಲ’ ಎಂದು ಹೇಳಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.