ರಫೇಲ್‌ ಒಪ್ಪಂದ: ಕೇಂದ್ರದ ವಾದ ಒಪ್ಪದ ‘ಸುಪ್ರೀಂ’

ಬುಧವಾರ, ಏಪ್ರಿಲ್ 24, 2019
33 °C
‘ದ ಹಿಂದೂ’ ಪ್ರಕಟಿಸಿದ್ದ ಗೋಪ್ಯ ದಾಖಲೆಗಳ ಪರಿಶೀಲನೆಗೆ ಒಪ್ಪಿಗೆ

ರಫೇಲ್‌ ಒಪ್ಪಂದ: ಕೇಂದ್ರದ ವಾದ ಒಪ್ಪದ ‘ಸುಪ್ರೀಂ’

Published:
Updated:
Prajavani

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ‘ದ ಹಿಂದೂ’ ಪತ್ರಿಕೆ ಪ್ರಕಟಿಸಿದ್ದ ರಹಸ್ಯ ದಾಖಲೆಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ಆ ದಾಖಲೆಗಳನ್ನು ಸಾಕ್ಷ್ಯಗಳಾಗಿ ಪರಿಗಣಿಸಬಾರದು ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ರಫೇಲ್‌ ಒಪ್ಪಂದದಲ್ಲಿ ಅಕ್ರಮ ನಡೆದಿಲ್ಲ. ಹೀಗಾಗಿ ತನಿಖೆ ಅಗತ್ಯವಿಲ್ಲ ಎಂದು ಡಿಸೆಂಬರ್‌ನಲ್ಲಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಉದ್ದೇಶದಿಂದ ಈ ದಾಖಲೆಗಳನ್ನು ಪರಿಶೀಲಿಸುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಸ್ಪಷ್ಟಪಡಿಸಿದೆ.

ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಮರುಪರಿಶೀಲನೆಯನ್ನು ಕೋರಿ ವಕೀಲ ಪ್ರಶಾಂತ್ ಭೂಷಣ್, ಬಿಜೆಪಿ ನಾಯಕರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಪರಿಶೀಲನೆ ವೇಳೆ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ಪೀಠವು ಈ ಮಾತು ಹೇಳಿದೆ.

‘ದ ಹಿಂದೂ’ ಪ್ರಕಟಿಸಿದ್ದ ದಾಖಲೆಗಳನ್ನು ಅಕ್ರಮವಾಗಿ ದಕ್ಕಿಸಿಕೊಳ್ಳಲಾಗಿದೆ. ಇದು ಅಧಿಕೃತ ರಹಸ್ಯಗಳ ಕಾಯ್ದೆಯ ಉಲ್ಲಂಘನೆ. ಇವು ಅತ್ಯಂತ ಸೂಕ್ಷ್ಮವಾದ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ದಾಖಲೆಗಳು. ಕಳವಿನ ಮೂಲಕ ದಕ್ಕಿಸಿಕೊಂಡ ಈ ದಾಖಲೆಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಬಾರದು’ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಪ್ರತಿಪಾದಿಸಿದರು.

ಈ ಪ್ರತಿಪಾದನೆಯನ್ನು ಅರ್ಜಿದಾರರಲ್ಲಿ ಒಬ್ಬರಾದ ಪ್ರಶಾಂತ್ ಭೂಷಣ್ ನಿರಾಕರಿಸಿದರು. ‘ಸತ್ಯವನ್ನು ನಿರ್ಧರಿಸುವಲ್ಲಿ ಈ ದಾಖಲೆಗಳು ಪ್ರಸ್ತುತವಾಗುವುದಾದರೆ, ಆ ದಾಖಲೆಗಳನ್ನು ಹೇಗೆ ದಕ್ಕಿಸಿಕೊಳ್ಳಲಾಯಿತು ಎಂಬುದು ಅಪ್ರಸ್ತುತವಾಗುತ್ತದೆ. ಇಂತಹ ದಾಖಲೆಗಳು ಒಮ್ಮೆ ಸಾರ್ವಜನಿಕವಾದರೆ, ಅವುಗಳು ಗೋಪ್ಯ ಎಂದು ಸರ್ಕಾರ ಹೇಳಲಾಗದು’ ಎಂದು ಅವರು ವಾದಿಸಿದರು.

‘ಇವು ದೇಶದ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮವಾದ ಮತ್ತು ಪ್ರಮುಖವಾದ ದಾಖಲೆಗಳು ಎಂದು ಸರ್ಕಾರ ಹೇಳುತ್ತಿದೆ. ನಾವೂ ಅದನ್ನೇ ಹೇಳುತ್ತಿದ್ದೇವೆ. ಇವು ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖವಾದ ದಾಖಲೆಗಳಾಗಿರುವ ಕಾರಣದಿಂದಲೇ ಅವನ್ನು ಪರಿಗಣಿಸಬೇಕು’ ಎಂದು ಮತ್ತೊಬ್ಬ ಅರ್ಜಿದಾರರಾದ ಅರುಣ್ ಶೌರಿ ಪ್ರತಿಪಾದಿಸಿದರು.

ವಾದ, ಪ್ರತಿವಾದಗಳನ್ನು ಆಲಿಸಿದ ಪೀಠವು ಅರ್ಜಿದಾರರ ಮನವಿಯನ್ನು ಮನ್ನಿಸಿತು, ದಾಖಲೆಗಳ ಪರಿಶೀಲನೆಗೆ ಸಮ್ಮತಿಸಿತು.

ಮೋದಿ ಮೇಲೆ ಮುಗಿಬಿದ್ದ ವಿಪಕ್ಷಗಳು: ಸುಪ್ರೀಂ ಕೋರ್ಟ್‌ನ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಸ್ವಾಗತಿಸಿವೆ. ಇದು ಸರ್ಕಾರಕ್ಕೆ ಆದ ಹಿನ್ನಡೆ ಎಂದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಹೇಳಿವೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವಾಲಯವು ‘ವಿಪಕ್ಷಗಳು ಸಂಭ್ರಮಿಸುವ ಅವಶ್ಯಕತೆ ಇಲ್ಲ’ ಎಂದು ಹೇಳಿದೆ.

ಕೋರ್ಟ್‌ ಹೇಳಿದ್ದು...

* ಈ ದಾಖಲೆಗಳು ಈಗಾಗಲೇ ಬಹಿರಂಗಗೊಂಡಿವೆ ಮತ್ತು ಸಾರ್ವಜನಿಕರಿಗೆ ಲಭ್ಯವಿವೆ. ಹೀಗಿದ್ದಾಗ ಆ ದಾಖಲೆಗಳನ್ನು ಓದದೇ ಇರುವುದು ಮತ್ತು ಪರಿಗಣಿಸದೇ ಇರುವುದು ಹಾಗೂ ಸಾಕ್ಷ್ಯಗಳಾಗಿ ಅವುಗಳ ಮೌಲ್ಯವನ್ನು ಕಡೆಗಣಿಸುವುದು ಅರ್ಥಹೀನ. ಅವುಗಳನ್ನು ಪರಿಗಣಿಸುವುದೇ ವಿವೇಕಯುತ ನಡೆ

* ರಹಸ್ಯ ದಾಖಲೆ ಎಂದ ಮಾತ್ರಕ್ಕೆ ಯಾವುದೇ ದಾಖಲೆಗಳನ್ನು ನ್ಯಾಯನಿರ್ಣಯದ ಉದ್ದೇಶದಿಂದ ನ್ಯಾಯಾಲಯದ ಮುಂದೆ ಇರಿಸಬಾರದು ಎಂದು ಅಧಿಕೃತ ರಹಸ್ಯಗಳ ಕಾಯ್ದೆಯೂ ಸೇರಿದಂತೆ ಯಾವುದೇ ಕಾನೂನು ಹೇಳುವುದಿಲ್ಲ

* ದೇಶದ ಸಾರ್ವಭೌಮತೆಗೆ ಮತ್ತು ಕೆಲವು ದೇಶಗಳ ಜತೆಗಿನ ಸಂಬಂಧಕ್ಕೆ ಧಕ್ಕೆಯಾಗುವುದಾದರೆ ಅಂತಹ ದಾಖಲೆಗಳನ್ನು ಬಹಿರಂಗಪಡಿಸದೆ ಇರಲು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8 (1) (ಎ) ಹೇಳುತ್ತದೆ. ಆದರೆ ಈ ದಾಖಲೆಗಳು ಈಗಾಗಲೇ ಬಹಿರಂಗಗೊಂಡಿವೆ. ಹೀಗಿದ್ದಾಗ ಆ ದಾಖಲೆಗಳ ಬಹಿರಂಗವನ್ನು ಸರ್ಕಾರ ನಿರಾಕರಿಸುವುದರಿಂದ ಸಾರ್ವಜನಿಕರ ಹಿತಾಸಕ್ತಿಗೆ ಯಾವುದೇ ಉಪಯೋಗವಿಲ್ಲ

***

ಕಾವಲುಗಾರನೇ ಕಳ್ಳತನ ಮಾಡಿದ್ದು ಎಂದು ಇಡೀ ದೇಶವೇ ಹೇಳುತ್ತಿದೆ. ‘ಸುಪ್ರೀಂ’ ಇಂದು ನ್ಯಾಯದ ಬಗ್ಗೆ ಮಾತನಾಡಿದೆ. ಇದು ಸಂಭ್ರಮ ಪಡಬೇಕಾದ ದಿನ.

-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಅವರು ತನಿಖೆಯನ್ನು ನಿರಾಕರಿಸಿದರು. ಸತ್ಯ ಮುಚ್ಚಿಟ್ಟು, ಸುಪ್ರೀಂ ಕೋರ್ಟ್‌ನ ಹಾದಿ ತಪ್ಪಿಸಿದರು. ವಿಚಾರಣೆಗೆ ಅಡ್ಡಗಾಲು ಹಾಕಿದರು. ಈಗ ಸಿಲುಕಿಕೊಳ್ಳುತ್ತಿದ್ದಾರೆ.

-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಅತ್ಯಂತ ಸೂಕ್ಷ್ಮವಾದ ವಿಚಾರಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಮತ್ತು ಅಪರಿಪೂರ್ಣ ಚಿತ್ರವನ್ನು ಕಟ್ಟಿಕೊಡಲು ಅರ್ಜಿದಾರರು ಈ ದಾಖಲೆಗಳನ್ನು ಬಳಸುತ್ತಿದ್ದಾರೆ.

-ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !