ಗುರುವಾರ , ಜುಲೈ 16, 2020
25 °C
ನೌಕರರರಿಗೆ ಪರಿಹಾರ ಸೂಚಿಸಲು ಆದೇಶ

ಬಡ್ತಿ ಮೀಸಲಾತಿ: ಕೆಎಟಿಗೆ ‘ಸುಪ್ರೀಂ’ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಡ್ತಿಯಲ್ಲಿ ಮೀಸಲಾತಿ ಅನುಸರಿಸುವ ಕಾಯ್ದೆ ರದ್ದುಪಡಿಸಿದ ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿದ್ದರಿಂದ ಸಮಸ್ಯೆಗೆ ಒಳಗಾಗಿರುವ ನೌಕರರ ಮೇಲ್ಮನವಿ ಆಲಿಸಿ ಪರಿಹಾರ ಸೂಚಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ನಿರ್ದೇಶನ ನೀಡಿದೆ.

ಕೆಎಟಿಯು ನೌಕರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುತ್ತಿಲ್ಲ ಎಂದು ದೂರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರ ಭಾಗೋಜಿ ಖಾನಾಪುರೆ ಅವರು ಸಲ್ಲಿಸಿರುವ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಆರ್‌.ಎಫ್‌. ನಾರಿಮನ್‌ ಹಾಗೂ ಇಂದೂ ಮಲ್ಹೋತ್ರಾ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.

‘ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ತಿಳಿಸಿರುವಂತೆ ತತ್ಪರಿಣಾಮ ಸೇವಾ ಜ್ಯೇಷ್ಠತೆಗೆ ಸಂಬಂಧಿಸಿದ ವಿಷಯವನ್ನು ಹೊರತುಪಡಿಸಿ, ಇತರ ಬದಲಾವಣೆಗಳಿಗೆ ಸಂಬಂಧಿಸಿದ ನೌಕರರ ಮೇಲ್ಮನವಿಯನ್ನು ಆಲಿಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ.

‘ತತ್ಪರಿಣಾಮ ಸೇವಾ ಜ್ಯೇಷ್ಠತೆ ಹೊರತುಪಡಿಸಿ ಮಿಕ್ಕೆಲ್ಲ ಸಮಸ್ಯೆಗಳಿಗೆ ಸಂಬಂಧಿಸಿದ ಮೇಲ್ಮನವಿಯನ್ನು ಆಲಿಸಬಹುದು’ ಎಂದು ಸುಪ್ರೀಂ ಕೋರ್ಟ್‌ ಕಳೆದ ಮೇ 14ರಂದು ಆದೇಶಿಸಿದೆ ಎಂದು ಅರ್ಜಿದಾರರ ಪರ ವಕೀಲರಾದ ಪಿ.ಎಸ್‌. ಪಟವಾಲಿಯಾ ಹಾಗೂ ಶೈಲೇಶ ಮಡಿಯಾಲ್‌ ನ್ಯಾಯಪೀಠಕ್ಕೆ ತಿಳಿಸಿದರು.

1991ರಲ್ಲಿಯೇ ಡ್ರಗ್‌ ಇನ್ಸ್‌ಪೆಕ್ಟರ್‌ ಆಗಿ ಸರ್ಕಾರಿ ಸೇವೆಗೆ ಸೇರಿದ್ದ ಅರ್ಜಿದಾರ ಖಾನಾಪುರೆ ಅವರು ಡ್ರಗ್‌ ಕಂಟ್ರೋಲರ್‌ ಹುದ್ದೆಗೆ ಬಡ್ತಿ ಪಡೆದಿದ್ದರಾದರೂ, ಸರ್ಕಾರ ಜಾರಿಗೊಳಿಸಿರುವ ನೂತನ ಕಾಯ್ದೆಯಿಂದಾಗಿ ಹಿಂಬಡ್ತಿ ಪಡೆದಿದ್ದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಬಡ್ತಿಗೆ ಮೀಸಲಾತಿ ನೀತಿ ಅನುಸರಿಸುವ ರಾಜ್ಯ ಸರ್ಕಾರದ 2002 ಕಾಯ್ದೆ ರದ್ದುಪಡಿಸಿ 2017ರ ಫೆಬ್ರುವರಿ 9ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸುವಂತೆ ಸೂಚಿಸಿತ್ತು.

ಆದರೆ, ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ವ್ಯತಿರಿಕ್ತವಾಗಿ ಕಳೆದ ಮಾರ್ಚ್‌ 14ರಂದು ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರೂ ಸುಪ್ರೀಂ ಕೋರ್ಟ್‌ನ ಆದೇಶದ ಕಾರಣ ಮುಂದಿರಿಸಿ ಅರ್ಜಿಯ ವಿಚಾರಣೆ ನಡೆಸಲು ಕೆಎಟಿ ನಿರಾಕರಿಸಿದೆ ಎಂದು ಅರ್ಜಿದಾರರು ಮೇಲ್ಮನವಿಯಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು