ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ/ಎಸ್‌ಟಿ ಆಯೋಗ ಅನಾಥ| ವಿಚಾರಣೆಗೆ ಕಾದಿವೆ 2,572 ಪ್ರಕರಣ

ದಲಿತರ ದೂರು ಕೇಳುವವರಿಲ್ಲ
Last Updated 16 ಜೂನ್ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಹೀಗಿದ್ದರೂ ನೊಂದವರ ನೋವು ಆಲಿಸಿ, ನ್ಯಾಯ ಕೊಡಿಸುವ ಅಧಿಕಾರ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸುವ ಕಾಳಜಿಯನ್ನು ಸರ್ಕಾರ ತೋರಿಲ್ಲ.

ಈಚೆಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದಲಿತ ಯುವಕನ ಬೆತ್ತಲೆ ಮೆರವಣಿಗೆಯು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಬೊಟ್ಟುಮಾಡಿ ತೋರಿಸಿದೆ.

ದೌರ್ಜನ್ಯ ನಡೆದಾಗ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಹೇಳಿಕೆಕೊಟ್ಟು ಸುಮ್ಮನಾಗುತ್ತಾರೆ. ದೌರ್ಜನ್ಯನಿಯಂತ್ರಿಸಲು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮರೆತುಬಿಡುತ್ತಾರೆ ಎಂಬ ಟೀಕೆ ವ್ಯಕ್ತವಾಗಿದೆ.

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಎಸ್‌ಸಿಎಸ್‌ಟಿ) ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಇದರಿಂದಾಗಿ2,752 ದೂರುಗಳು ವಿಚಾರಣೆಗಾಗಿ ಕಾದುಕುಳಿತಿವೆ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ 2003ರಲ್ಲಿಅಧ್ಯಕ್ಷ, ಇಬ್ಬರು ಸದಸ್ಯರನ್ನು ಒಳಗೊಂಡ ಎಸ್‌ಸಿ–ಎಸ್‌ಟಿ ಆಯೋಗ ರಚನೆ ಆಯಿತು. ಅಂದಿನ ಶಾಸಕ ಅಂಜನಮೂರ್ತಿ ಆಯೋಗದ ಮೊದಲ ಅಧ್ಯಕ್ಷರಾದರು. 2004ರಲ್ಲಿ ಹೊಸ ಸರ್ಕಾರ ಬಂದಾಗ ಅವರನ್ನು ಕೆಳಗಿಳಿಸಲಾಯಿತು. 2004ರಿಂದ 2007ರ ಫೆಬ್ರುವರಿ ವರೆಗೆ ಆ ಸ್ಥಾನ ಖಾಲಿ ಇತ್ತು.

2007ರಿಂದ 2012ರ ವರೆಗೆ ನೆಹರು ಓಲೇಕಾರ, 2012ರಿಂದ 2014ರ ವರೆಗೆ ಇ.ಅಶ್ವತ್ಥನಾರಾಯಣ, 2014ರಿಂದ 2016ರ ವರೆಗೆ ಬಸಣ್ಣ ಕೆ.ಚಲವಾದಿ ಅಧ್ಯಕ್ಷರಾಗಿದ್ದರು.ಬಳಿಕ 2016ರಲ್ಲಿ ಮೂರು ತಿಂಗಳು ಕಾಲ ಅಧ್ಯಕ್ಷ ಸ್ಥಾನ ಖಾಲಿ ಇತ್ತು. 2016ರ ನ.3ರಂದು ನೇಮಕವಾದ ಎ.ಮುನಿಯಪ್ಪ, 2018ರ ಮೇ 29ರ ವರೆಗೆ ಅಧ್ಯಕ್ಷರಾಗಿದ್ದರು.

ಆಯೋಗ ರಚನೆಯಾದ ಆರಂಭದ ವರ್ಷಗಳಲ್ಲಿ ಬೆರಳೆಣಿಕೆಯಷ್ಟು ದೂರುಗಳು ದಾಖಲಾಗುತ್ತಿದ್ದವು. ಈಗ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ 620 ದೂರುಗಳು ದಾಖಲಾಗಿವೆ.

ಸರ್ಕಾರದಲ್ಲಿನ ಗೊಂದಲ ಕಾರಣ
‘ಸರ್ಕಾರದೊಳಗಿನ ಗೊಂದಲಗಳಿಂದಾಗಿ ಆಯೋಗಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ. ಈ ಹಿಂದೆ ಇದ್ದ ಎ.ಮುನಿಯಪ್ಪ ಅವರನ್ನು ಅವಧಿ ಮುಗಿಯುವ ಮುನ್ನ ರಾಜಕೀಯ ಕಾರಣಕ್ಕೆ ಕೆಳಗಿಳಿಸಲಾಗಿದೆ’ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಆರೋಪಿಸಿದರು. ‘ಅಧ್ಯಕ್ಷರನ್ನು ನೇಮಿಸುವಂತೆ ಪ್ರತಿಭಟನೆ ನಡೆಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾನೂನಿನ ಬಗ್ಗೆ ಅರಿವಿರುವ ವಕೀಲರೊಬ್ಬರನ್ನು ಅಧ್ಯಕ್ಷರನ್ನಾಗಿಕೂಡಲೇ ನೇಮಿಸುವಂತೆ ಮನವಿ ಮಾಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ನಡೆಯದ ವಿಚಾರಣೆ
ಆಯೋಗಕ್ಕೆ ಅಧ್ಯಕ್ಷರಿಲ್ಲದಿದ್ದರೆ ವಿಚಾರಣೆ ನಡೆಸಲು ಕಾರ್ಯದರ್ಶಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಬರುವ ದೂರುಗಳನ್ನು ಸ್ವೀಕರಿಸಿ ಪ್ರತಿವಾದಿಗಳಿಗೆ ನೋಟಿಸ್ ನೀಡುತ್ತಿದ್ದಾರೆ. ದೂರಿನಲ್ಲಿ ನೈಜತೆ ಕಂಡುಬಂದು ವಿಚಾರಣೆಗೆ ಅರ್ಹ ಎನಿಸಿದರೆ ಕಾಯ್ದಿರಿಸಲಾಗುತ್ತಿದೆ.

ಅಧ್ಯಕ್ಷರಿದ್ದರೆ ಪ್ರತಿವಾದಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸುತ್ತಾರೆ. ದೂರುದಾರರ ಮೇಲೆ ದೌರ್ಜನ್ಯ ಆಗಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ. ಆದರೀಗ ಒಂದು ವರ್ಷದಿಂದ ವಿಚಾರಣೆ ಸ್ಥಗಿತಗೊಂಡಿದೆ.

ದೂರುಗಳು ವಿಚಾರಣೆಗಾಗಿ ಬಾಕಿ ಉಳಿದಿವೆ. ಹೊಸದಾಗಿ ಬರುವ ದೂರುಗಳನ್ನು ಸ್ವೀಕರಿಸಿ ಪ್ರತಿವಾದಿಗೆ ನೋಟಿಸ್ ನೀಡಲಾಗುತ್ತಿದೆ.
-ಎಚ್.ಎಸ್.ಶಿವರಾಮು, ಆಯೋಗದ ಕಾರ್ಯದರ್ಶಿ

**
ಈ ಸರ್ಕಾರದಲ್ಲಿ ಎಸ್‌ಸಿ, ಎಸ್‌ಟಿ ಆಯೋಗವೂ ಅಸ್ಪೃಶ್ಯತೆಗೆ ಒಳಗಾಗಿದೆ. ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ಚಳವಳಿ ನಡೆಸಲಾಗುವುದು.
-ಮಾವಳ್ಳಿ ಶಂಕರ್‌, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ

**

ಚುನಾವಣೆಯಿಂದಾಗಿ ತಡವಾಗಿತ್ತು. ಈಗ ಪ್ರಕ್ರಿಯೆ ಆರಂಭಿಸಿದ್ದು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಹೆಸರು ಶಿಫಾರಸು ಮಾಡಿ ಕಳುಹಿಸಲಾಗಿದೆ.
-ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT