‘ರಾಮ್‌ ಕದಮ್‌ ಅಲ್ಲಾವುದ್ದೀನ್‌ ಖಿಲ್ಜಿ ಇದ್ದಂತೆ’

7
ಶಾಸಕನ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಖಂಡನೆ * ಬಿಜೆಪಿ ವಿರುದ್ಧ ಶಿವಸೇನಾ ವಾಗ್ದಾಳಿ

‘ರಾಮ್‌ ಕದಮ್‌ ಅಲ್ಲಾವುದ್ದೀನ್‌ ಖಿಲ್ಜಿ ಇದ್ದಂತೆ’

Published:
Updated:

ಮುಂಬೈ: ಮಹಿಳಾ ವಿರೋಧಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಾಮ್‌ ಕದಂ ಅವರನ್ನು ಶಿವಸೇನಾ, 13ನೇ ಶತಮಾನದ ದೆಹಲಿ ಸುಲ್ತಾನ ಅಲ್ಲಾವುದ್ದೀನ್‌ ಖಿಲ್ಜಿಗೆ ಹೋಲಿಸಿದೆ. ಕದಂ ಹೇಳಿಕೆ ಬಗ್ಗೆ ಬಿಜೆಪಿ ವಹಿಸಿರುವ ಮೌನವನ್ನೂ ಪ್ರಶ್ನೆ ಮಾಡಿದೆ.

‘ನೀವು ಇಷ್ಟಪಡುವ ಯುವತಿ ನಿಮ್ಮ ಪ್ರೀತಿ ಒಪ್ಪಿಕೊಳ್ಳದಿದ್ದರೆ ಆಕೆಯನ್ನು ಅಪಹರಿಸಿಯಾದರೂ ಸರಿ ನಿಮಗೆ ಒಪ್ಪಿಸುತ್ತೇನೆ’ ಎಂದು ಯುವಕರನ್ನು ಹುರುದುಂಬಿಸುವಂತೆ ಕದಂ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ತ್ರಿವಳಿ ತಲಾಖ್ ನಿಷೇಧಿಸಿ ಮುಸ್ಲಿಂ ಮಹಿಳೆಯರಿಗೆ ‘ನ್ಯಾಯ’ ಒದಗಿಸಲು ಪ್ರಯತ್ನಿಸುತ್ತಿದ್ದರೆ, ಅವರದೇ ಪಕ್ಷದ ಶಾಸಕರು ಮಹಿಳೆಯರಲ್ಲಿ ಭಯ ಮೂಡಿಸುತ್ತಿದ್ದಾರೆ ಎಂದು ಶಿವಸೇನಾ ಹರಿಹಾಯ್ದಿದೆ.

‘ಅಲ್ಲಾವುದ್ದೀನ್ ಖಿಲ್ಜಿಯ ನಿರಂಕುಶ ಆಡಳಿತದಲ್ಲಿ ತಮ್ಮ ಮರ್ಯಾದೆ, ಪ್ರತಿಷ್ಠೆ ಹಾಗೂ ಧರ್ಮವನ್ನು ಕಾಪಾಡಿಕೊಳ್ಳಲು ರಾಣಿ ಪದ್ಮಿನಿ ಇತರ ಸಾವಿರಾರು ರಜಪೂತ ಮಹಿಳೆಯರೊಂದಿಗೆ ಆತ್ಮಾಹುತಿಗೆ ಶರಣಾಗಿದ್ದಳು. ಆ ಕಿಚ್ಚು ಇಂದಿಗೂ ಖಿಲ್ಜಿಯಂತಹ ಪುರುಷರ ವಿರುದ್ಧ ಹೋರಾಡಲು ಭಾರತೀಯ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತಿದೆ. ಆದರೆ, ಇದೀಗ ಬಿಜೆಪಿಯ ಖಿಲ್ಜಿ ವಿರುದ್ಧ ಆತ್ಮಾಹುತಿ ಮಾಡಿಕೊಳ್ಳುವ ಕಾಲ ಮಹಾರಾಷ್ಟ್ರದ ಮಹಿಳೆಯರಿಗೆ ಬಂದಿದೆ ಎನಿಸುತ್ತಿದೆ’ ಎಂದು ಶಿವಸೇನಾ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಟೀಕಿಸಿದೆ.‌

 ಮಹಿಳೆಯರು, ರೈತರು ಹಾಗೂ ಸೈನಿಕರ ಪತ್ನಿಯರ ವಿರುದ್ಧ ಕೆಟ್ಟದಾಗಿ ಮಾತನಾಡುವ ಇಂತಹವರನ್ನು ಬಿಜೆಪಿ ಪೋಷಿಸುತ್ತಿದೆ. ರಾಜ್ಯದಲ್ಲಿ ಆ ಪಕ್ಷವು ಯುವಜನರಿಗೆ ಯಾವ ಬಗೆಯ ಸಂದೇಶ ರವಾನಿಸುತ್ತಿದೆ? ಇದೇ ಏನು ಬಿಜೆಪಿಯ ಹಿಂದುತ್ವ ಮತ್ತು ಸಂಸ್ಕೃತಿ? ಚುನಾವಣೆಗಳಲ್ಲಿ ಗೆಲ್ಲಬೇಕೆಂಬ ದುರಾಸೆಯಿಂದ ಮಾಡಿಕೊಂಡ ಸ್ವಯಂಕೃತಾಪರಾಧದ ಫಲ ಇದು. ಕಳೆದ ಐದು ವರ್ಷಗಳಲ್ಲಿ ಏನನ್ನು ಬಿತ್ತಲಾಗಿತ್ತೋ ಅದರ ಫಲವನ್ನು ಅದು ಈಗ ಉಣ್ಣುತ್ತಿದೆ’ ಎಂದು ಸೇನಾ ಹೇಳಿದೆ.

ನಾಲಿಗೆ ಕತ್ತರಿಸಿದರೆ ಬಹುಮಾನ: ರಾಮ್‌ ಕದಂ ಅವರ ನಾಲಿಗೆ ಕತ್ತರಿಸಿದವರಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ಸುಬೋಧ್‌ ಸಾಹುಜಿ ಘೋಷಿಸಿದ್ದಾರೆ. ‌

‘ಕ್ಷಮೆ ಯಾಚಿಸಿದ್ದಾರೆ; ವಿವಾದ ಮುಗಿಸಿ’
‘ರಾಮ್‌ ಕದಂ ಅವರು ತಮ್ಮ ಮಹಿಳಾ ವಿರೋಧಿ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ವಿವಾದ ಇಲ್ಲಿಗೇ ಮುಗಿಯಲಿ’ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಸಚಿವ ಚಂದ್ರಕಾಂತ್‌ ಪಾಟೀಲ್‌ ಶುಕ್ರವಾರ ಹೇಳಿದ್ದಾರೆ.

ಜನಪ್ರತಿನಿಧಿಗಳು ಮಾತನಾಡುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ದೂರು: ಶಾಂತಿ ಕದಡಲು ಪ್ರಚೋದನಕಾರಿ ಹೇಳಿಕೆ ನೀಡಿದ ಆಪಾದನೆ ಮೇಲೆ ಸಾಮಾಜಿಕ ಹೋರಾಟಗಾರ್ತಿಯೊಬ್ಬರು ಕದಂ ಅವರ ವಿರುದ್ಧ ಬರ್ಶಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

*
ಕೃಷ್ಣ ಜನ್ಮಾಷ್ಟಮಿಯಂದೇ ಬಿಜೆಪಿ ಶಾಸಕ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ಶಿವಾಜಿ ಮಹಾರಾಜರ ಹೆಸರಿನಲ್ಲಿ ಆಡಳಿತ ನಡೆಸಲು ಇವರಿಗೆ ನೈತಿಕತೆ ಇಲ್ಲ.
–ಶಿವಸೇನಾ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !