ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜದ ‘ಸಾಹೇಬ’ ಶರದ್ ಪವಾರ್

Last Updated 26 ನವೆಂಬರ್ 2019, 19:44 IST
ಅಕ್ಷರ ಗಾತ್ರ

ಮುಂಬೈ: 79ರ ತಮ್ಮ ಇಳಿವಯಸ್ಸಿನಲ್ಲಿ ಸುರಿಯುವ ಮಳೆಯಲ್ಲೇ ಚುನಾವಣಾ ಭಾಷಣ ಮಾಡುತ್ತಿರುವ ಶರದ್ ಪವಾರ್ ಅವರ ಫೊಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಎನ್‌ಸಿಪಿ 54 ಸ್ಥಾನ ಗೆದ್ದಾಗ, ಪವಾರ್ ಅವರೇ ‘ಮ್ಯಾನ್ ಆಫ್ ದಿ ಮ್ಯಾಚ್’ (ಪಂದ್ಯಶ್ರೇಷ್ಠ) ಎಂಬುದು ಖಚಿತವಾಗಿತ್ತು. ದೇವೇಂದ್ರ ಫಡಣವೀಸ್ ಮತ್ತು ತಮ್ಮ ಸಂಬಂಧಿ ಅಜಿತ್ ಪವಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಸೇನಾ–ಎನ್‌ಸಿಪಿ–ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಧಿಕಾರ ಹಿಡಿಯಲು ವೇದಿಕೆ ಅಣಿಗೊಳಿಸಿರುವ ಪವಾರ್, ಇದೀಗ ‘ಮ್ಯಾನ್ ಆಫ್ ದಿ ಸೀರೀಸ್’ (ಸರಣಿ ಶ್ರೇಷ್ಠ) ಕೂಡ ಆಗಿದ್ದಾರೆ.

ರಾಜಕೀಯ, ಕ್ರಿಕೆಟ್, ಕುಸ್ತಿ– ಯಾವುದೇ ಆಗಿದ್ದರೂ ಇವರನ್ನು ಸೋಲಿಸಲಾಗದು. ನಿಜಾರ್ಥದಲ್ಲಿ ಇವರು ‘ರಾಜಕೀಯದ ಚಾಣಕ್ಯ’ನೇ ಸರಿ. ‘ಸಾಹೇಬ’ ಎಂದೇ ಖ್ಯಾತರಾಗಿರುವ ಪವಾರ್ ಮಹಾರಾಷ್ಟ್ರದಲ್ಲಿ 4 ಬಾರಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ ಅನುಭವಿ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕರಾಗಿ, ಕೇಂದ್ರದ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದಾರೆ. 2014 ಮತ್ತು 2019ರ ಚುನಾವಣಾ ಸೋಲಿನ ಬಳಿಕ ಪಕ್ಷಕ್ಕೆ ತಳಮಟ್ಟದಲ್ಲಿ ಬಲ ತುಂಬುವ ಕೆಲಸವನ್ನು ಅವರು ಸವಾಲಾಗಿ ಸ್ವೀಕರಿಸಿದ್ದರು.

ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಹಗರಣದಲ್ಲಿ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಎಫ್‌ಐಆರ್ ದಾಖಲಿಸಿತ್ತು. ‘ಇ.ಡಿ ಕಚೇರಿಗೆ ಹೋಗಿ ವಿಚಾರಣೆ ಎದುರಿಸುತ್ತೇನೆ’ ಎಂದು ಪವಾರ್ ಘೋಷಿಸುತ್ತಿದ್ದಂತೆಯೇ ಎದುರಾದ ವಿಧಾನಸಭಾ ಚುನಾವಣೆಯಲ್ಲಿ ಅನುಕಂಪದ ಅಲೆ ಸಹಜವಾಗಿಯೇ ಕೆಲಸ ಮಾಡಿತು. ಅನಾರೋಗ್ಯದ ನಡುವೆಯೇ ನಿತ್ಯ ಮೂರ್ನಾಲ್ಕು ರ‍‍್ಯಾಲಿಗಳಲ್ಲಿ ಭಾಗವಹಿಸಿ ಪಕ್ಷದ ಆರೋಗ್ಯ ಸುಧಾರಿಸಿದರು.

ಫಡವೀಸ್ ಜತೆ ‘ಜಂಗಿಕುಸ್ತಿ’:‘ಬಿಜೆಪಿಗೆ ಸವಾಲು ಒಡ್ಡಬಲ್ಲ ಕುಸ್ತಿಪಟುಗಳು ಎದುರಾಳಿ ಪಾಳಯದಲ್ಲಿ ಇಲ್ಲ. ನಮ್ಮ ಕುಸ್ತಿಪಟುಗಳು ಎಲ್ಲಡೆಯೂ ಇದ್ದಾರೆ’ ಎಂದು ಫಡಣವೀಸ್ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪವಾರ್, ‘ನಾನು ಮಹಾರಾಷ್ಟ್ರದ ಕುಸ್ತಿ ಸಂಘಟನೆಗೇ ಅಧ್ಯಕ್ಷ. ನಿಮ್ಮಲ್ಲಿ ಕುಸ್ತಿಯೇ ಗೊತ್ತಿಲ್ಲದ ಕುಸ್ತಿಪಟುಗಳಿದ್ದಾರೆ’ ಎಂದು ಮೂದಲಿಸಿದ್ದರು. ಇದಕ್ಕೆ ಉತ್ತರಿಸುವ ಗೋಜಿಗೆ ಫಡಣವೀಸ್ ಹೋಗಿರಲಿಲ್ಲ.

ಸಂಬಂಧಿಗೇ ಪಾಠ:ಬಿಜೆಪಿ–ಸೇನಾ ಮೈತ್ರಿ ಮುರಿದುಬಿದ್ದ ಮೇಲೆ ಅವರು ಬಿಜೆಪಿ ವಿರೋಧಿ ಅಭಿಯಾನ ಶುರು ಮಾಡಿದರು. ಸಂಬಂಧಿ ಅಜಿತ್ ಪವಾರ್, ಬಿಜೆಪಿ ಪಾಳೆಯ ಸೇರಿ ಬಿಕ್ಕಟ್ಟು ಸೃಷ್ಟಿಸಿದರೂ ಧೃತಿಗೆಡದ ಪವಾರ್, ತಮ್ಮ ರಾಜಕೀಯ ಅನುಭವ ಬಳಸಿಕೊಂಡು, ಅಜಿತ್ ಅವರನ್ನು ಏಕಾಂಗಿಯಾಗಿಸುವ ಯತ್ನದಲ್ಲಿ ಸಫಲರಾದರು. ಕಾಂಗ್ರೆಸ್–ಸೇನಾ ಮುಖಂಡರು ಭರವಸೆ ಕಳೆದುಕೊಂಡಾಗ, ‘ನಮ್ಮದೇ ಸರ್ಕಾರ ಬರುತ್ತದೆ, ಚಿಂತಿಸಬೇಡಿ’ ಎಂದು ಧೈರ್ಯ ತುಂಬಿದ್ದು ಇವರೇ. ಕೊನೆಗೂ ಮಹಾರಾಷ್ಟ್ರ ರಾಜಕೀಯದಲ್ಲಿ ಬದಲಾವಣೆ ಆಗಿದೆ. ಈ ಮೂಲಕ ಇಡೀ ಎನ್‌ಸಿಪಿ ಪರಿವಾರ ಹಾಗೂ ತಮ್ಮ ಕುಟುಂಬಕ್ಕೆ ಸ್ಪಷ್ಟ ಸಂದೇಶ ರವಾನಿಸಿರುವ ಪವಾರ್, ತಾವು ‘ಸಾಹೇಬ’ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT