ಸೋಮವಾರ, ಜೂಲೈ 6, 2020
27 °C

ಪ್ರಜ್ಞಾ ಸಿಂಗ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ: ಬಿಜೆಪಿ

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ಬೋಪಾಲ್: ಇಲ್ಲಿನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕ್ಯಾನ್ಸರ್ ಮತ್ತು ಕಣ್ಣಿನ ಸಮಸ್ಯೆಗೆ ಸಂಬಂಧಿಸಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಜೆಪಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಸಂಸದೆ ನಾಪತ್ತೆಯಾಗಿದ್ದಾರೆ ಎಂದು ಶುಕ್ರವಾರ ಮಧ್ಯಪ್ರದೇಶದ ರಾಜಧಾನಿಯ ಹಲವೆಡೆ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಹೀಗಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಕೊರೊನಾ ವೈರಸ್ ಸಮಸ್ಯೆ ಉಲ್ಬಣಿಸಿದರೂ ಸಂಸದೆ ನಾಪತ್ತೆಯಾಗಿದ್ದಾರೆ ಎಂದು ಪೋಸ್ಟರ್‌ಗಳಲ್ಲಿ ಉಲ್ಲೇಖಿಸಲಾಗಿತ್ತು. ಆದಾಗ್ಯೂ, ನಗರದ ಭೈರಾಗಡ ಚಿಚಿಲಿ ಪ್ರದೇಶದಲ್ಲಿ ಸಹಕಾರ ಭಾರತಿ ಸಂಸ್ಥೆಯವರು ಆರಂಭಿಸಿರುವ ಸಂಚಾರಿ ಆಸ್ಪತ್ರೆಗೆ ಠಾಕೂರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

ಈ ವಿಚಾರವನ್ನು ಸಂಸ್ಥೆಯ ಉಮಾಕಾಂತ ದೀಕ್ಷಿತ್ ಎಂಬುವವರು ಬಹಿರಂಗಪಡಿಸಿದ್ದಾರೆ. ಜತೆಗೆ, ಸಂಸದೆ ನಾಪತ್ತೆಯಾಗಿಲ್ಲ, ಅನಾರೋಗ್ಯದಿಂದಾಗಿ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಂಸದೆ ದೂರವಾಣಿ ಮೂಲಕ ಸತತವಾಗಿ ಸಂಪರ್ಕದಲ್ಲಿದ್ದಾರೆ. ವಲಸೆ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಲಾಕ್ ನನ್ನಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ದೀಕ್ಷಿತ್ ತಿಳಿಸಿದ್ದಾರೆ.

ಸಂಸದೆ ನಾಪತ್ತೆಯಾಗಿದ್ದಾರೆ ಎಂದು ಪೋಸ್ಟರ್ ಹಾಕಿರುವುದನ್ನು ಭೋಪಾಲ್ ದಕ್ಷಿಣ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಪಿ.ಸಿ. ಶರ್ಮಾ ಬೆಂಬಲಿಸಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಸದೆ ಎಲ್ಲಿದ್ದಾರೆ ಎಂದು ಕೇಳುವ ಹಕ್ಕು ಜನರಿಗೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಪ್ರಜ್ಞಾ ಠಾಕೂರ್ ಎದುರು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನಗರದಲ್ಲೇ ಇದ್ದುಕೊಂಡು ಜನರಿಗೆ ನೆರವಾಗುತ್ತಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಧ್ಯಪ್ರದೇಶ ಘಟಕದ ವಕ್ತಾರ ರಾಹುಲ್ ಕೊಥಾರಿ, ಕ್ಯಾನ್ಸರ್ ಮತ್ತು ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಠಾಕೂರ್ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು