ಶನಿವಾರ, ಮೇ 30, 2020
27 °C
ಲಡಾಕ್‌ನಲ್ಲಿ ಕೊರಾನಾಗೆ ಕಡಿವಾಣ​

15 ದಿನದಲ್ಲಿ ಒಂದೇ ಸೋಂಕು ಪ್ರಕರಣ: ಕೋವಿಡ್‌ ತಡೆಗೆ ಲಡಾಕ್‌ ಮಾದರಿ

ಸಿದ್ದರಾಜು ಎಂ Updated:

ಅಕ್ಷರ ಗಾತ್ರ : | |

ಶ್ರೀನಗರ: ವಿಶ್ವದಾದ್ಯಂತ ಹಬ್ಬುತ್ತಿರುವ ಮಾರಣಾಂತಿಕ ಕೊರೊನಾಗೆ ಕಡಿವಾಣ ಹಾಕುವಲ್ಲಿ ಲಡಾಕ್‌ ಕೇಂದ್ರಾಡಳಿತ ಪ್ರದೇಶವು ಯಶಸ್ವಿಯಾಗಿದ್ದು, ದೇಶದ ಎಲ್ಲ ರಾಜ್ಯಗಳಿಗೂ ಮಾದರಿಯಾಗಿದೆ.

ದೇಶದಲ್ಲಿ ಮೊದಲ ಬಾರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿ ಒಂದಾದ ಲಡಾಕ್‌ನಲ್ಲಿ ಕಳೆದ 15 ದಿನಗಳಲ್ಲಿ ಕೇವಲ ಒಂದು ಪ್ರಕರಣ ಕಂಡು ಬಂದಿದೆ. ಮಾರ್ಚ್‌ 7ರಂದು ಇರಾನ್‌ನಿಂದ ಬಂದಿದ್ದ ಇಲ್ಲಿನ ಇಬ್ಬರಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು.

2011ರ ಜನಗಣತಿ ಪ್ರಕಾರ 2.74 ಲಕ್ಷ ಜನಸಂಖ್ಯೆ ಹೊಂದಿರುವ ಲಡಾಕ್‌ ಕೇಂದ್ರಾಡಳಿತ ಪ್ರದೇಶದಲ್ಲಿ ಮಾರ್ಚ್‌ 18ರ ಹೊತ್ತಿಗೆ ಸೋಂಕಿತರ ಸಂಖ್ಯೆ 13 ತಲುಪಿತ್ತು. ಅವರಲ್ಲಿ ಏಳು ಮಂದಿ ಗುಣಮುಖರಾಗಿದ್ದಾರೆ.

‘ಕಾರ್ಗಿಲ್‌ ಪ್ರಾಂತ್ಯದಲ್ಲಿ ಶಂಕಿತ 49 ಮಂದಿಯ ವರದಿಯು ಗುರುವಾರ ಬಂದಿದ್ದು, ಅವರಲ್ಲಿ ಎಲ್ಲರದು ನೆಗೆಟಿವ್‌ ಬಂದಿದೆ. ಕಟ್ಟುನಿಟ್ಟಾದ ಲಾಕ್‌ಡೌನ್‌ ಹಾಗೂ ಸಮುದಾಯ ಸಂಪರ್ಕ ಪತ್ತೆ ಹಚ್ಚುವಿಕೆಯು ಸೋಂಕಿತರ ಪ್ರಕರಣ ಇಳಿಮುಖವಾಗಲು ಪ್ರಮುಖ ಕಾರಣ’ ಎಂದು ಲೇಹ್‌ನ ಹಿರಿಯ ಆರೋಗ್ಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಡಿವಾಣ ಹಾಕಿದ್ದು ಹೇಗೆ?

ಶಂಕಿತರನ್ನು ಕಣ್ಗಾವಲಿನಲ್ಲಿ ಇಟ್ಟು, ಪ್ರಾರಂಭಿಕ ಹಂತದಲ್ಲೇ ಪ್ರಕರಣಗಳನ್ನು ಗುರ್ತಿಸಿ ಅವರನ್ನು ಬೇರ್ಪಡಿಸಿ ಚಿಕಿತ್ಸೆ ನೀಡಿದ ಪರಿಣಾಮ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ತಕ್ಷಣ ಗುರ್ತಿಸಿ ಸೋಂಕು ಹರಡದಂತೆ ಕ್ರಮ ಕೈಗೊಂಡಿದ್ದರಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.

‘ಕಟ್ಟುನಿಟ್ಟಿನ ಸಂಪೂರ್ಣ ಲಾಕ್‌ಡೌನ್‌ ಜಾರಿ, ಸಂಪರ್ಕ ಪತ್ತೆ, ಸ್ವಯಂ ಪ್ರೇರಣೆಯಿಂದ ಜನರು ಘೋಷಣೆ ಹಾಗೂ ಪರೀಕ್ಷೆಗೆ ಮುಂದಾದ ಪರಿಣಾಮ ಕೋವಿಡ್‌ –19 ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು’ ಎಂದು ಲಡಾಕ್‌ನ ವಿಭಾಗೀಯ ಆಯುಕ್ತ ಸ್ವಗತ್‌ ಬಿಸ್ವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಕ್ಷಣ ಸ್ಪಂದಿಸಿದ ಲಡಾಕ್‌ನ ಜನರ ನಿಲುವು ಹಾಗೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಶ್ರಮವನ್ನು ಚಂಡಿಗಡದ ಸ್ನಾತಕೋತ್ತರ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಯ ವೈದ್ಯರ ನೇತೃತ್ವದ ‘ಕೇಂದ್ರ ಕ್ಷಿಪ್ರ ಕಾರ್ಯಪಡೆ’ಯು ಪ್ರಶಂಸೆ ವ್ಯಕ್ತಪಡಿಸಿದೆ.

‘ಕೇಂದ್ರಾಡಳಿತ ಪ್ರದೇಶದ ಪೂರ್ವಭಾವಿ ಕ್ರಮ ಹಾಗೂ ಕಟ್ಟುನಿಟ್ಟಿನ ನಿಯಮ ಪರಿಸ್ಥಿತಿಯನ್ನು ಹತೋಟಿಗೆ ತರಲು ಕಾರಣವಾಗಿದೆ’ ಎಂದು ವೈದ್ಯರ ತಂಡ ಹೇಳಿದೆ.

‘ಕಾಶ್ಮೀರ ಕಣಿವೆ ಹಾಗೂ ದೇಶದ ಇತರೆ ಪ್ರದೇಶಗಳ ಜನರು ಲಡಾಕ್‌ನ ಜನರಷ್ಟು ಶೀಘ್ರಗತಿಯಲ್ಲಿ ಕೋವಿಡ್‌ ತಡೆಗೆ ಸಹಕರಿಸಲಿಲ್ಲ. ಹಾಗಾಗಿ ಎಲ್ಲೆಡೆ ಪ್ರಕರಣ ಉಲ್ಬಣವಾಗಲು ಕಾರಣವಾಯಿತು. ನಾವು ಲಡಾಕ್‌ ಅನ್ನು ಮಾದರಿಯಾಗಿ ಪರಿಗಣಿಸಿ ಮಾರಣಾಂತಿಕ ಕೋವಿಡ್‌ ತಡೆಗೆ ಮುಂದಾಗಬೇಕು’ ಎಂದು ಶ್ರೀನಗರ ಹಿರಿಯ ವೈದ್ಯರೊಬ್ಬರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು