ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತಾ ಮೂರ್ತಿ ಮುಂದಿನ ಪೀಳಿಗೆಗೆ ಸ್ಫೂರ್ತಿ

ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ
Last Updated 31 ಅಕ್ಟೋಬರ್ 2018, 19:28 IST
ಅಕ್ಷರ ಗಾತ್ರ

ಕೆವಡಿಯಾ/ಗುಜರಾತ್‌:ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ182 ಮೀಟರ್‌ ಎತ್ತರದ ಏಕತೆಯ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು.ಗುಜರಾತಿನ ನರ್ಮದಾ ಸರೋವರ ದಂಡೆಯ ಮೇಲೆ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.

‘ವಿಶ್ವದ ಅತ್ಯಂತ ದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸರ್ದಾರ್‌ ಪಟೇಲ್‌ ಅವರ ಮೂರ್ತಿ ಮುಂದಿನ ಪೀಳಿಗೆಗೆ ಧೈರ್ಯ, ಸಾಮರ್ಥ್ಯ ಮತ್ತು ದೇಶಭಕ್ತಿಯ ಸಂಕೇತವಾಗಿ ನಿಲ್ಲಲಿದೆ’ ಎಂದು ಮೋದಿ ಹೇಳಿದರು.

ಧೀಮಂತ ವ್ಯಕ್ತಿತ್ವದ ಪಟೇಲ್‌ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾದಾಗ ಅದೊಂದು ದೊಡ್ಡ ಅಪರಾಧ ಎಂಬಂತೆ ಕೆಲವರು ಮೂದಲಿಸಿದ್ದರು ಎಂದು ಅವರು ನೆನಪಿಸಿಕೊಂಡರು.

ದೇಶದ ತಾಕತ್ತಿನ ಪ್ರತೀಕ:ಭಾರತದ ಅಸ್ತಿತ್ವವನ್ನು ಪ್ರಶ್ನಿಸಿದ್ದ ಶಕ್ತಿಗಳಿಗೆ ಈ ಏಕತೆಯ ಮೂರ್ತಿಯು ದೇಶದ ಶಕ್ತಿ, ಸಾಮರ್ಥ್ಯಗಳೇನು ಎನ್ನುವುದನ್ನು ಸಾರಿ ಹೇಳುತ್ತದೆ. ‘ಒಂದು ಭಾರತ ಶ್ರೇಷ್ಠ ಭಾರತ’ ಎನ್ನುವುದನ್ನು ನೆನಪಿಸುತ್ತದೆ ಎಂದರು.

‘ನಾಲ್ಕು ವರ್ಷಗಳಲ್ಲಿ ಎನ್‌ಡಿಎ ಸರ್ಕಾರವು ಸ್ವಾತಂತ್ರ್ಯ ಸೇನಾನಿಗಳು ಮತ್ತು ರಾಷ್ಟ್ರ ನಾಯಕರ ಅನೇಕ ಸ್ಮಾರಕಗಳನ್ನು ನಿರ್ಮಿಸಿದೆ. ಆದರೆ, ನಮ್ಮ ಈ ಮಹತ್ವದ ಕಾರ್ಯವನ್ನು ಕೆಲವರು ರಾಜಕೀಯ ದೃಷ್ಟಿಯಿಂದ ನೋಡುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

ಅರ್ಹ ವ್ಯಕ್ತಿಗೆ ಸಂದ ಸೂಕ್ತ ಗೌರವ:55 ನಿಮಿಷಗಳ ಭಾಷಣದಲ್ಲಿ ಸರ್ದಾರ್‌ ಪಟೇಲ್‌ ಅವರ ಗುಣಗಾನ ಮಾಡಿದ ಮೋದಿ, ಅಖಂಡ ಭಾರತದ ಏಕೀಕರಣಕ್ಕೆ ದುಡಿದ ವ್ಯಕ್ತಿಗೆ ಕೊನೆಗೂ ಸೂಕ್ತ ಗೌರವ ಸಂದಿದೆ. ಆ ಮೂಲಕ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಸ್ಪಂದಿಸಿದ್ದೇವೆ
ಎಂದರು.

ಒಂದು ವೇಳೆ ಪಟೇಲ್‌ ಅವರು ಭಾರತದ ಏಕೀಕರಣಕ್ಕೆ ಶ್ರಮಿಸದಿದ್ದರೆ, ಜುನಾಗಡದಲ್ಲಿ ಸಿಂಹಗಳನ್ನು ನೋಡಲು, ಶಿವಭಕ್ತರು ಸೋಮನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು, ಹೈದರಾಬಾದ್‌ನ ಚಾರ್‌ಮಿನಾರ್‌ ವೀಕ್ಷಿಸಲು ವೀಸಾ ಪಡೆಯಬೇಕಾದ ಸ್ಥಿತಿ ಇರುತ್ತಿತ್ತು ಎಂದರು.

ಭಾರತವನ್ನು ತುಂಡು, ತುಂಡಾಗಿ ಕತ್ತರಿಸುವ ಷಡ್ಯಂತ್ರವನ್ನು ಉಕ್ಕಿನ ಮನುಷ್ಯ ವಿಫಲಗೊಳಿಸಿದರು. ಪಟೇಲ್‌ ವ್ಯಕ್ತಿತ್ವದಲ್ಲಿಕೌಟಿಲ್ಯನ ಜಾಣ್ಮೆ, ಮುತ್ಸದ್ದಿತನ ಮತ್ತು ಶಿವಾಜಿಯ ಶೌರ್ಯ ಮೇಳೈಸಿದ್ದವು ಎಂದು ಮೋದಿ ಶ್ಲಾಘಿಸಿದರು.

ಹೂವಿನ ಮಳೆ:ಭಾರತೀಯ ವಾಯುಪಡೆಯ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಏಕತೆಯ ಮೂರ್ತಿಯ ಮೇಲೆ ಹೂವಿನ ಮಳೆಗರೆದವು. ಆಗಸದಲ್ಲಿ ಬಣ್ಣದಲ್ಲಿ ತ್ರಿವರ್ಣ ಧ್ವಜವನ್ನು ಬಿಡಿಸಿದವು.

ಗುಜರಾತ್‌ ರಾಜ್ಯಪಾಲ ಒ.ಪಿ. ಕೊಹ್ಲಿ, ಮುಖ್ಯಮಂತ್ರಿ ವಿಜಯ್‌ ರೂಪಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪಟೇಲ್‌ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಆರ್‌ಎಸ್‌ಎಸ್‌ ನಿಷೇಧ ಆದೇಶ ಮುದ್ರಿಸಿ’

ನವದೆಹಲಿ (ಪಿಟಿಐ): ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನಿಷೇಧಿಸಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಹೊರಡಿಸಿದ್ದ ಆದೇಶವನ್ನು ಏಕತೆಯ ಮೂರ್ತಿಯ ತಳದಲ್ಲಿ ಕೆತ್ತಿಸಬೇಕು ಎಂದು ಕಾಂಗ್ರೆಸ್‌ ಪಕ್ಷವು ಪ್ರಧಾನಿಯನ್ನು ಒತ್ತಾಯಿಸಿದೆ.

‘ಮಹಾತ್ಮ ಗಾಂಧಿ ಪ್ರತಿಮೆ ಏಕಿಲ್ಲ’:ತಿರುವನಂತಪುರ/ಹೈದರಾಬಾದ್‌: ಬಿಜೆಪಿ ಏಕೆ ಮಹಾತ್ಮ ಗಾಂಧಿ ಅವರ ದೊಡ್ಡ ಪ್ರತಿಮೆಯನ್ನು ಸ್ಥಾಪಿಸಲಿಲ್ಲ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಮಹಾತ್ಮ ಗಾಂಧಿ ಅವರ ಅಹಿಂಸೆ ತತ್ವದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹೇಳಿದ್ದಾರೆ.

ಬಿಜೆಪಿ, ಸಂಘ ಕ್ಷಮೆ ಕೋರಲಿ: ‘ಉತ್ತರ ಪ್ರದೇಶದಲ್ಲಿ ದಲಿತ ನಾಯಕರ ಮೂರ್ತಿ ಸ್ಥಾಪಿಸಿದ್ದ ಕಾರಣಕ್ಕಾಗಿ ನನ್ನ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ಮತ್ತು ಸಂಘ ಪರಿವಾರದವರು ಈಗ ಏನು ಹೇಳುತ್ತಾರೆ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಪ್ರಶ್ನಿಸಿದ್ದಾರೆ.

ಏಕತೆ ಮೂರ್ತಿ ಅಡಿ ಪೊಲೀಸ್‌ ಅಧಿಕಾರಿಗಳ ಸಭೆ: ಪೊಲೀಸ್‌ ಉನ್ನತ ಅಧಿಕಾರಿಗಳ ಪ್ರಸಕ್ತ ಸಾಲಿನ ಸಮಾವೇಶವನ್ನು ಗುಜರಾತ್‌ ಸರ್ದಾರ್‌ ಪಟೇಲ್‌ ಏಕತೆಯ ಮೂರ್ತಿ ಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಪ್ರತಿ ದಿನ ಹತ್ತು ಸಾವಿರ ಪ್ರವಾಸಿಗರು?: ನರ್ಮದಾ ನದಿಯ ದಂಡೆಯ ಮೇಲೆ ಸ್ಥಾಪಿಸಲಾಗಿರುವ ಸರ್ದಾರ್ ಪಟೇಲ್ ಏಕತೆಯ ಮೂರ್ತಿ ದೇಶದ ಬಹುದೊಡ್ಡ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ಗುಜರಾತ್‌ ಸರ್ಕಾರ ಆಶಯ ವ್ಯಕ್ತಪಡಿಸಿದೆ.

ಮೋದಿ ವಿರುದ್ಧ ಆದಿವಾಸಿಗಳ ಪ್ರತಿಭಟನೆ: ಏಕತೆಯ ಮೂರ್ತಿ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಐವರು ಬುಡಕಟ್ಟು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT