‘ಪಕ್ಷಕ್ಕೆ ಗೊಂದಲ ಬೇಡ, ನಾನು ಸ್ಪರ್ಧಿಸುವುದಿಲ್ಲ’

ಬುಧವಾರ, ಏಪ್ರಿಲ್ 24, 2019
24 °C
ಚುನಾವಣಾ ಕಣದಿಂದ ದೂರ ಉಳಿದ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್

‘ಪಕ್ಷಕ್ಕೆ ಗೊಂದಲ ಬೇಡ, ನಾನು ಸ್ಪರ್ಧಿಸುವುದಿಲ್ಲ’

Published:
Updated:
Prajavani

ನವದೆಹಲಿ: ‘ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ ಲೋಕಸಭಾ ಕ್ಷೇತ್ರದಿಂದ ಎಂಟು ಬಾರಿ ಅವರು ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಅವರು ಅದೇ ಕ್ಷೇತ್ರದಿಂದ ಸ್ಪರ್ಧಿಸಬೇಕಿತ್ತು. ಈ ಸಂಬಂಧ ಪಕ್ಷದ ನಾಯಕರ ಜತೆ ಮಾತುಕತೆ ನಡೆಸಿದ್ದರು. ಆದರೆ ಪಕ್ಷವು ಇಂದೋರ್‌ಗೆ ಈವರೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಇದರ ಮಧ್ಯೆಯೇ ಸುಮಿತ್ರಾ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

‘ಬಹುಶಃ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಪಕ್ಷವು ಮೀನಾಮೇಷ ಎಣಿಸುತ್ತಿರಬಹುದು. ಪಕ್ಷದ ಹಿರಿಯ ನಾಯಕರ ಜತೆ ಈ ಬಗ್ಗೆ ಚರ್ಚಿಸಿದ್ದೆ. ಇಂದೋರ್‌ಗೆ ಅಭ್ಯರ್ಥಿಯನ್ನು ಆರಿಸುವಲ್ಲಿ ಅವರು ಮುಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದೂ ತಿಳಿಸಿದ್ದೆ. ಆದರೆ ಈಗಲೂ ಅವರಲ್ಲಿ ಸ್ವಲ್ಪ ಸಂದೇಹವಿದ್ದಂತಿದೆ. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದೇನೆ’ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳಿಗಾಗಿ ಜಿದ್ದಾಜಿದ್ದಿ: ಬಿಜೆಪಿಯ ಬಹುತೇಕ ಹಿರಿಯ ನಾಯಕರು ಚುನಾವಣಾ ಕಣದಿಂದ ಹಿಂದೆ ಸರಿದಂತೆಯೇ ಸುಮಿತ್ರಾ ಮಹಾಜನ್ ಸಹ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಮಧ್ಯಪ್ರದೇಶದ ಹೆಚ್ಚಿನ ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಅಂತಿಮಗೊಳಿಸಿದೆ. ಆದರೆ ಇಂದೋರ್ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.

ಇಂದೋರ್‌ನಲ್ಲಿ ಸುಮಿತ್ರಾ ಮಹಾಜನ್ ಅವರ ಪ್ರಭಾವವವಿದೆ. ಅಂತೆಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಪ್ರಭಾವವೂ ಈ ಕ್ಷೇತ್ರದಲ್ಲಿದೆ. ಡಿಸೆಂಬರ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಈ ಇಬ್ಬರು ನಾಯಕರೂ ತಮ್ಮ ಮಕ್ಕಳಿಗೆ ಇಂದೋರ್‌ನಲ್ಲಿನ ಒಂದು ಕ್ಷೇತ್ರದ ಟಿಕೆಟ್ ಕೊಡಿಸಲು ಬಯಸಿದ್ದರು. ಆದರೆ ಅಂತಿಮವಾಗಿ ಕೈಲಾಶ್ ಅವರ ಕೈ ಮೇಲಾಗಿತ್ತು.

ಸುಮಿತ್ರಾ ಅವರಲ್ಲಿ ಈಗಲೂ ಆ ಅಸಮಾಧಾನ ಇದೆ. ಚುನಾವಣೆಯಿಂದ ದೂರ ಉಳಿಯುವ ಅವರ ನಿರ್ಧಾರಕ್ಕೂ ಇದೇ ಕಾರಣ. ಹೀಗಾಗಿಯೇ ಇಂದೋರ್‌ಗೆ ಅಭ್ಯರ್ಥಿ ಇನ್ನೂ ನಿರ್ಧಾರವಾಗಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.

ವಿಧಾನಸಭೆ ಚುನಾವಣೆಯಲ್ಲಿ ಆದ ಹಿನ್ನಡೆಯನ್ನು ಲೋಕಸಭೆ ಚುನಾವಣೆಯಲ್ಲಿ ಪರಿಹರಿಸಿಕೊಳ್ಳಲು ಅವರು ಬಯಸಿದ್ದಾರೆ. ತಮ್ಮ ಮಗನಿಗೆ ಈ ಇಂದೋರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೊಡಿಸಲು ಅವರು ಬಯಸಿದ್ದಾರೆ ಎನ್ನಲಾಗಿದೆ.

ಹಿರಿಯರ ಹಿಂಬಾಲಿಸಿದರೇ ಮಹಾಜನ್...?

* 75 ವರ್ಷಕ್ಕಿಂತ ಹಿರಿಯರಿಗೆ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದು ಬೇಡ ಎಂಬ ನಿರ್ಧಾರವನ್ನು ಪಕ್ಷ ತೆಗದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಚೆಗೆ ತಿಳಿಸಿದ್ದರು

* ಈ ಬಾರಿ ನೀವು ಕಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಬೇಡಿ ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರಿಗೆ ಪಕ್ಷವು ಅಧಿಕೃತವಾಗಿ ತಿಳಿಸಿತ್ತು. ‘ನೀವು ಸ್ಪರ್ಧಿಸಬೇಡಿ ಎಂದು ಪಕ್ಷವು ನನಗೆ ಆದೇಶಿಸಿದೆ’ ಎಂದು ಜೋಷಿ ಅವರು ತಮ್ಮ ಕ್ಷೇತ್ರದ ಜನರಿಗೆ ತಿಳಿಸಿದ್ದರು

* ಪಕ್ಷದ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರಿಗೂ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿದೆ. ಆದರೆ ಸ್ಪರ್ಧೆ ನಡೆಸದಂತೆ ಪಕ್ಷವು ಅಡ್ವಾಣಿ ಜತೆ ಯಾವುದೇ ಚರ್ಚೆ ನಡೆಸಿರಲಿಲ್ಲ. ಈ ಬಗ್ಗೆ ತಮ್ಮ ಬ್ಲಾಗ್ ಬರಹದಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು

* ಕೇಂದ್ರ ಸಚಿವ ಕಲ್‌ರಾಜ್‌ ಮಿಶ್ರಾ (75) ಸಹ ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ 

* ಸುಮಿತ್ರಾ ಮಹಾಜನ್ ಅವರಿಗೂ ಮುಂದಿನ ವಾರ 76 ವರ್ಷ ತುಂಬಲಿದೆ. ಅವರೂ ಚುನಾವಣಾ ಕಣಕ್ಕೆ ಇಳಿಯದಿರಲು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !