ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ತನಿಖೆ ಅನಗತ್ಯ ಎಂದ ಸುಪ್ರೀಂ ಕೋರ್ಟ್; ರಾಹುಲ್ ಗಾಂಧಿಗೆ ಎಚ್ಚರಿಕೆ

ಮಾತನಾಡುವಾಗ ಎಚ್ಚರಿಕೆಯಿರಲಿ: ನ್ಯಾಯಾಂಗ ನಿಂದನೆ ಅರ್ಜಿ ವಜಾ ಸಂದರ್ಭ ರಾಹುಲ್‌ಗೆ ಸೂಚನೆ
Last Updated 14 ನವೆಂಬರ್ 2019, 6:08 IST
ಅಕ್ಷರ ಗಾತ್ರ

ನವದೆಹಲಿ:ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಪುನರುಚ್ಚರಿಸಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಎಚ್ಚರಿಕೆಯನ್ನೂ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿರುವುದನ್ನು ವಿರೋಧಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮೇ 10ರಂದು ಪೂರ್ಣಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು. ಈಗ ಎಫ್ಐಆರ್ ದಾಖಲಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ್ದು, ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.

ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ರಫೇಲ್ ಒಪ್ಪಂದದ ಕುರಿತು ಕ್ಲೀನ್ ಚಿಟ್ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್, ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠವು ಈಗ ತೀರ್ಪು ನೀಡಿದೆ.

ಈ ಮೊದಲು, ರಫೇಲ್ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ 2018ರ ಡಿಸೆಂಬರ್ 14ರಂದು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ವಜಾಗೊಳಿಸಿತ್ತು.

ರಾಹುಲ್ ಗಾಂಧಿಗೆ ಎಚ್ಚರಿಕೆ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, 'ಚೌಕೀದಾರ್ ಚೋರ್ ಹೈ' ಎಂದು ನ್ಯಾಯಾಲಯವನ್ನೇ ಉಲ್ಲೇಖಿಸಿ ಮಾತನಾಡಿದ್ದ ರಾಹುಲ್ ಗಾಂಧಿಗೆ, ಭವಿಷ್ಯದಲ್ಲಿ ಎಚ್ಚರಿಕೆಯಿಂದ ಮಾತನಾಡುವಂತೆ ಕಟ್ಟೆಚ್ಚರ ನೀಡಿದೆ. ರಾಹುಲ್ ವಿರುದ್ಧ ದಾಖಲಾದ ನ್ಯಾಯಾಂಗ ನಿಂದನೆ ಅರ್ಜಿಯನ್ನು, ಎಚ್ಚರಿಕೆ ನೀಡಿ ರದ್ದುಗೊಳಿಸಲಾಗಿದೆ. ಚೌಕೀದಾರ್ ಚೋರ್ ಹೈ ಎಂಬುದನ್ನು ನ್ಯಾಯಾಲಯವೇ ಒಪ್ಪಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT