ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’

ಪಾಕ್‌ ನೆಲದಲ್ಲಿದ್ದ ಭಯೋತ್ಪಾದಕರ ಶಿಬಿರ ನಿರ್ನಾಮ l ಎನ್‌ಡಿಎ ಸರ್ಕಾರದಿಂದ 2ನೇ ನಿರ್ದಿಷ್ಟ ದಾಳಿ
Published : 26 ಫೆಬ್ರುವರಿ 2019, 19:36 IST
ಫಾಲೋ ಮಾಡಿ
Comments

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರಗಾಮಿ ಸಂಘಟನೆ ಮೇಲೆ ಭಾರತ ಸೇಡು ತೀರಿಸಿಕೊಂಡಿದೆ.ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೆಇಎಂನ ಅತ್ಯಂತ ದೊಡ್ಡ ತರಬೇತಿ ಶಿಬಿರವನ್ನು ವಾಯುದಾಳಿಯ ಮೂಲಕ ನಾಶ ಮಾಡಿದೆ.

ಮಂಗಳವಾರ ಬೆಳಗ್ಗಿನ ಜಾವ 3.45ಕ್ಕೆ ಅತ್ಯಂತ ಚುರುಕು ಮತ್ತು ನಿಖರ ದಾಳಿ ಸಂಘಟಿಸಿ ಭಾರಿ ಸಂಖ್ಯೆಯ ಉಗ್ರರು, ತರಬೇತಿದಾರರು ಮತ್ತು ಕಮಾಂಡರ್‌ಗಳನ್ನು ನಿರ್ನಾಮ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯು ಸೇನಾ ಸಂಘರ್ಷ ಅಲ್ಲ, ಬದಲಿಗೆ ಉಗ್ರರ ದಾಳಿ ತಡೆಗಾಗಿ ನಡೆದ ‘ಮುನ್ನೆಚ್ಚರಿಕಾ ಕ್ರಮ’ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ನ ಯೋಧರ ಮೇಲೆ ಜೆಇಎಂ ಉಗ್ರರು ಇದೇ 14ರಂದು ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಅದಾಗಿ 12ನೇ ದಿನಕ್ಕೆ ಭಾರತದ ವಾಯುದಾಳಿ ನಡೆದಿದೆ. ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಆಗ್ರಹಿಸಿದ್ದ ರಾಜಕೀಯ ಮುಖಂಡರು ಹಾಗೂ ರಕ್ಷಣಾ ಪರಿಣತರು ದಾಳಿಯನ್ನು ಸ್ವಾಗತಿಸಿದ್ದಾರೆ.

ಗುಪ್ತಚರ ಮಾಹಿತಿ ಆಧಾರದಲ್ಲಿ ಬಾಲಾಕೋಟ್‌ನ ಉಗ್ರಗಾಮಿ ಶಿಬಿರದ ಮೇಲೆ ನಡೆಸಿದ ಕಾರ್ಯಾಚರಣೆ ಇದು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ತಿಳಿಸಿದ್ದಾರೆ. ಈ ಶಿಬಿರದಲ್ಲಿದ್ದ ಉಗ್ರರು ಭಾರತದ ಮೇಲೆ ಇನ್ನಷ್ಟು ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಹಾಗಾಗಿ ಈ ದಾಳಿ ಅನಿವಾರ್ಯವೇ ಆಗಿತ್ತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ದಾಳಿಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನ ಮೇಲೆ ನಡೆದಿದೆಯೇ ಅಥವಾ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್‌ ಮೇಲೆ ನಡೆದಿದೆಯೇ ಎಂಬುದನ್ನು ಗೋಖಲೆ ಅವರು ಸ್ಪಷ್ಟಪಡಿಸಿಲ್ಲ. ಆದರೆ, ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್‌ ಮೇಲೆಯೇ ದಾಳಿ ನಡೆದಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ದೃಢಪಡಿಸಿವೆ. ಈ ಸ್ಥಳವು ನಿಯಂತ್ರಣ ರೇಖೆಯಿಂದ 80 ಕಿ.ಮೀ. ದೂರದಲ್ಲಿದೆ. ಅಲ್‌ ಕೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ನನ್ನು ಅಮೆರಿಕದ ಯೋಧರು ಹತ್ಯೆ ಮಾಡಿದ ಅಬೋಟಾಬಾದ್‌ಗೆ ಈ ಸ್ಥಳ ಹತ್ತಿರದಲ್ಲಿದೆ.

ಪ್ರಮುಖಾಂಶಗಳು

l ಪಾಕಿಸ್ತಾನದ ಗಡಿಗೆ ಸಮೀಪದಲ್ಲಿರುವ ಪಶ್ಚಿಮ ಮತ್ತು ಕೇಂದ್ರ ಕಮಾಂಡ್‌ನ ವಿವಿಧ ವಾಯುನೆಲೆಗಳಿಂದ ಯುದ್ಧ ವಿಮಾನಗಳು ಮತ್ತು ಇತರ ವಿಮಾನಗಳು ಏಕಕಾಲಕ್ಕೆ ಆಗಸಕ್ಕೆ ಹಾರಿದವು

l ಈ ವಿಮಾನಗಳು ಎಲ್ಲಿಗೆ ಸಾಗುತ್ತಿವೆ ಎಂಬುದು ಪಾಕಿಸ್ತಾನದ ಸೇನೆಯ ಅಧಿಕಾರಿಗಳಿಗೆ ಅರ್ಥವೇ ಆಗಲಿಲ್ಲ

l ಯುದ್ಧ ವಿಮಾನಗಳ ಒಂದು ತಂಡ ಮಾತ್ರ ಗುಂಪಿನಿಂದ ಬೇರೆಯಾಗಿ ಬಾಲಾಕೋಟ್‌ನತ್ತ ಸಾಗಿತು; ನಿದ್ದೆಯಲ್ಲಿದ್ದ ಉಗ್ರರ ಮೇಲೆ ಬಾಂಬ್‌ ಮಳೆಗರೆಯಿತು

l ಯುದ್ಧ ವಿಮಾನಗಳ ಗುರಿ ಬಾಲಾಕೋಟ್‌ ಎಂಬುದು ಪಾಕಿಸ್ತಾನ ಸೇನೆಗೆ ಗೊತ್ತಾಗಲೇ ಇಲ್ಲ

l ಸುಮಾರು 700 ಮಂದಿ ತಂಗಬಹುದಾಗಿದ್ದ ಐಷಾರಾಮಿ ಶಿಬಿರವು ದಾಳಿಯಿಂದ ನೆಲಸಮವಾಯಿತು

ಇನ್ನಷ್ಟು ಓದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT