ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌‌ನಲ್ಲಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಸುಷ್ಮಾ

Last Updated 31 ಮೇ 2019, 2:51 IST
ಅಕ್ಷರ ಗಾತ್ರ

ನವದೆಹಲಿ: ಎರಡನೆ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರಮೋದಿ ಅವರಿಗೆ ನಿರ್ಗಮಿತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್‌‌ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

ಬಿಜೆಪಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಪ್ರತಿ ಅವಧಿಯಲ್ಲಿ ಸುಷ್ಮಾ ಅವರಿಗೆ ಸಚಿವ ಸ್ಥಾನ ಕಾಯ್ದಿರಿಸಲಾಗುತ್ತಿತ್ತು. ಕಳೆದ ಬಾರಿ ಯಶಸ್ವಿಯಾಗಿ ವಿದೇಶಾಂಗ ಖಾತೆಯನ್ನು ಸುಷ್ಮಾ ನಿಭಾಯಿಸಿದ್ದರು. ಯಾವುದೇ ಕಾರಣ ನೀಡದೆ ಸುಷ್ಮಾ ಅವರನ್ನು ನರೇಂದ್ರ ಮೋದಿ ಹಾಗೂ ಅಮಿತ್ ಷಾ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿಲ್ಲ.

ಪ್ರಧಾನಮಂತ್ರಿ ಹಾಗೂ57 ಮಂದಿ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸುಷ್ಮಾ ಸ್ವರಾಜ್ ತಮಗೆ ಮಂತ್ರಿ ಸ್ಥಾನದ ಸೂಚನೆ ಬರದೆ ಇದ್ದುದನ್ನು ಗಮನಿಸಿ ನಂತರ ಟ್ವಿಟರ್ ಮೂಲಕವೇ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. 67 ವರ್ಷದ ಸುಷ್ಮಾ ಸ್ವರಾಜ್, ನನ್ನನ್ನು ವಿದೇಶಾಂಗ ಸಚಿವೆಯನ್ನಾಗಿ ಮಾಡಿ 5 ವರ್ಷ ಸೇವೆಸಲ್ಲಿಸಲು ಅವಕಾಶ ನೀಡಿದ ತಮಗೆ ಧನ್ಯವಾದಗಳು, ವಿದೇಶದಲ್ಲಿರುವ ಭಾರತೀಯರು ಹಾಗೂ ದೇಶದ ಜನರ ಸೇವೆಸಲ್ಲಿಸಲು ನನಗೆ ಈ ಅವಕಾಶ ನೀಡಿದ್ದಕ್ಕಾಗಿ ತುಂಬಾ ಆಭಾರಿಯಾಗಿದ್ದೇನೆ. ನಮ್ಮ ಸರ್ಕಾರ ತುಂಬಾ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವಿಟರ್‌‌ನಲ್ಲಿ ತಿಳಿಸಿದ್ದಾರೆ.

ಸಮಾರಂಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸುಷ್ಮಾ ಸ್ವರಾಜ್ ಮಾಡಿದಟ್ವೀಟ್‌‌‌‌ಗೆ ಕೇವಲ 1 ಗಂಟೆಯ ಅವಧಿಯಲ್ಲಿ ಆರು ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ವ್ಯಕ್ತಿಯೊಬ್ಬರು ಮಗು ಕಣ್ಣೀರು ಸುರಿಸುವ ವಿಡಿಯೋ ಹಾಕುವ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ನಿಮ್ಮನ್ನು ಕೇಂದ್ರ ಮಂತ್ರಿಯನ್ನಾಗಿ ನೋಡಲು ನಾವುಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಭಾವಿ ಮಹಿಳಾ ಮುಖಂಡರಾಗಿದ್ದ ಸುಷ್ಮಾಸ್ವರಾಜ್, ಅಟಲ್ ಬಿಹಾರಿ ವಾಜಪೇಯಿ, ಎಲ್ .ಕೆ. ಅಡ್ವಾಣಿ ಜೊತೆ ಪಕ್ಷ ಸಂಘಟನೆ, ಸ್ವಚ್ಛ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ. ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿ, ದೆಹಲಿ ಮುಖ್ಯಮಂತ್ರಿಯಾಗಿ, ವಾರ್ತಾ ಮಂತ್ರಿಯಾಗಿ, ವಿದೇಶಾಂಗ ಸಚಿವೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರನ್ನು ಸಂಪುಟದಲ್ಲಿ ಸೇರ್ಪಡೆ ಮಾಡಿರುವುದು ಸುಷ್ಮಾ ಅವರಿಗೆ ಅಚ್ಚರಿತಂದಿದೆ ಎನ್ನಲಾಗಿದೆ. ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕೇವಲ 25 ವರ್ಷಕ್ಕೆ ರಾಜಕೀಯ ಪ್ರವೇಶಿಸಿದ ಸುಷ್ಮಾ 1977ರಲ್ಲಿ ಹರಿಯಾಣ ವಿಧಾನಸಭೆಗೆ ಪ್ರವೇಶಿಸಿ ಸಂಪುಟ ದರ್ಜೆ ಸಚಿವರಾಗಿದ್ದರು.1999ರಲ್ಲಿ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಸೋನಿಯಾಗಾಂಧಿ 56 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT