ತಿರುಪತಿ: ಗೋವಿಂದರಾಜಸ್ವಾಮಿ ದೇವಾಲಯದಿಂದ ಬಂಗಾರದ ಕಿರೀಟಗಳ ಕಳುವು

7

ತಿರುಪತಿ: ಗೋವಿಂದರಾಜಸ್ವಾಮಿ ದೇವಾಲಯದಿಂದ ಬಂಗಾರದ ಕಿರೀಟಗಳ ಕಳುವು

Published:
Updated:

ತಿರುಪತಿ: ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ಗೋವಿಂದರಾಜಸ್ವಾಮಿ ದೇವಾಲಯದಿಂದ ರತ್ನಕಚಿತ ಬಂಗಾರದ ಮುಕುಟಗಳು ಶನಿವಾರ ಕಳುವಾಗಿವೆ.

ಸಂಜೆ ಪ್ರಸಾದ ವಿತರಿಸುವ ಸಮಯದಲ್ಲಿ ದೇವರಿಗೆ ಮುಡುಪಾಗಿರುವ ಮೂರು ಬಂಗಾರದ ಕಿರೀಟಗಳು ಕಳುವಾಗಿವೆ ಎಂದು ದೇವಾಲಯದ ಸೂಪರಿಂಡೆಂಟ್‌ ಶ್ರೀ ಗ್ಯಾನ ಪ್ರಕಾಶ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಮಲಯಪ್ಪ, ಶ್ರೀದೇವಿ ಹಾಗೂ ಭೂದೇವಿ ದೇವರ ವಿಗ್ರಹಗಳ ಕಿರೀಟಗಳು ಕಾಣೆಯಾಗಿವೆ. ಈ ಮೂರೂ ಕಿರೀಟಗಳ ತೂಕ 1,351 ಗ್ರಾಂ. ರತ್ನಗಳಿಂದ ಅಲಂಕೃತವಾಗಿರುವ ಮಲಯಪ್ಪ ದೇವರ ಚಿನ್ನದ ಕಿರೀಟ 528 ಗ್ರಾಂ, ಶ್ರೀದೇವಿ ಕಿರೀಟ 408 ಗ್ರಾಂ ಹಾಗೂ ಭೂದೇವಿಯ ಕಿರೀಟ 415 ಗ್ರಾಂ ತೂಕವಿದೆ. 

’ದೇವಾಲಯ ಹಾಗೂ ಸುತ್ತಲಿನ ಎಲ್ಲ ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಲಾಗುತ್ತಿದ್ದು, ಈ ಸ್ಥಳದಲ್ಲಿದ್ದ ಎಲ್ಲರನ್ನೂ ಸಂಶಯದ ಮೇರೆಗೆ ವಿಚಾರಣೆಗೆ ಒಳಪಡಿಸಲಾಗುತ್ತದೆ’ ಎಂದು ತನಿಖಾಧಿಕಾರಿ ಪ್ರತಿಕ್ರಿಯಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಶನಿವಾರ ಸಂಜೆ ಸುಮಾರು 5:45ರಲ್ಲಿ ಕಿರೀಟಗಳು ನಾಪತ್ತೆಯಾಗಿರುವುದನ್ನು ಅರ್ಚಕರು ಗಮನಿಸಿದ್ದಾರೆ. ಪೂಜಾಕಾರ್ಯಗಳಿಗಾಗಿ ಆಚರಣೆಯಂತೆ ಸಂಜೆ 5ಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಹಾಗೂ 45 ನಿಮಿಷಗಳ ನಂತರ ದೇವಾಲಯವನ್ನು ತೆರೆಯಲಾಗುತ್ತದೆ. ಈ 45 ನಿಮಿಷಗಳಲ್ಲಿ ಕಿರೀಟಗಳು ಕಳುವಾಗಿರುವುದನ್ನು ಗಮನಿಸಲಾಗಿದೆ. 

ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಪಕ್ಷದ ಕಾರ್ಯಕರ್ತರು ಕಳ್ಳತನವನ್ನು ವಿರೋಧಿಸಿ ದೇವಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ದೇವಾಲಯಗಳ ನಗರಿಯ ಕೇಂದ್ರ ಭಾಗದಲ್ಲಿ ಶ್ರೀ ಗೋವಿಂದರಾಜಸ್ವಾಮಿ ದೇವಾಲಯವಿದೆ. ಇದು ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದ್ದು, 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಐತಿಹ್ಯವಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 4

  Amused
 • 1

  Sad
 • 1

  Frustrated
 • 9

  Angry

Comments:

0 comments

Write the first review for this !