ಕ್ಷಮೆ ಕೇಳುವುದಿಲ್ಲ, ಎಲ್ಲರನ್ನೂ ಕೋರ್ಟ್‌ನಲ್ಲೇ ಎದುರಿಸುತ್ತೇನೆ: ಕನಕದುರ್ಗಾ

7
ಶಬರಿಮಲೆ ದೇಗುಲ ಪ್ರವೇಶಿಸಿದ್ದ ಮಹಿಳೆ ಹೇಳಿಕೆ

ಕ್ಷಮೆ ಕೇಳುವುದಿಲ್ಲ, ಎಲ್ಲರನ್ನೂ ಕೋರ್ಟ್‌ನಲ್ಲೇ ಎದುರಿಸುತ್ತೇನೆ: ಕನಕದುರ್ಗಾ

Published:
Updated:

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದಕ್ಕೆ ಯಾರಲ್ಲೂ ಕ್ಷಮೆ ಕೇಳಲಾರೆ. ಎಲ್ಲರನ್ನೂ ನ್ಯಾಯಾಲಯದಲ್ಲೇ ಎದುರಿಸುತ್ತೇನೆ ಎಂದು ಮನೆಯವರಿಂದಲೇ ಬಹಿಷ್ಕಾರಕ್ಕೆ ಒಳಗಾಗಿರುವ ಮಹಿಳೆ ಕನಕದುರ್ಗಾ ಹೇಳಿದ್ದಾರೆ.

ಮಲಪ್ಪುರಂನವರಾದ ಕನಕದುರ್ಗಾ ಜನವರಿ 2ರಂದು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿ ದೇಶವ್ಯಾಪಿ ಸುದ್ದಿಯಾಗಿದ್ದರು. ಕನಕದುರ್ಗಾ ಮೇಲೆ ಇತ್ತೀಚೆಗೆ ಅವರ ಅತ್ತೆಯೇ ಹಲ್ಲೆ ನಡೆಸಿದ್ದರು. ಚಿಕಿತ್ಸೆ ಪಡೆದು ಪತಿಯ ಮನೆಗೆ ತೆರಳಿದ ಅವರನ್ನು ಒಳ ಪ್ರವೇಶಿಸದಂತೆ ಮನೆಯವರೇ ತಡೆದಿದ್ದರು. ಮನೆಗೆ ಬರಲು ಅನುಮತಿ ನೀಡಬೇಕಾದರೆ ಅಯ್ಯಪ್ಪನ ಭಕ್ತರ ಕ್ಷಮೆ ಕೇಳು ಎಂದು ಕನಕದುರ್ಗಾ ಸಹೋದರ ಭರತ್ ಭೂಷಣ್ ಒತ್ತಾಯಿಸಿದ್ದರು.

ಇದನ್ನೂ ಓದಿ: ಶಬರಿಮಲೆ ಏರಿಬಂದ ಮಹಿಳೆಗೆ ಸಿಗಲಿಲ್ಲ ಗಂಡನ ಮನೆಗೆ ಪ್ರವೇಶ!

ಇದರ ಬೆನ್ನಲ್ಲೇ ತಮ್ಮ ನಿಲುವನ್ನು ದೃಢಪಡಸಿರುವ ಕನಕದುರ್ಗಾ, ಮಾತಿನ ಅಥವಾ ನಡೆಯ ಮೂಲಕ ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳಲಾರೆ. ನಾನು ಮನೆಯೊಳಕ್ಕೆ ಪ್ರವೇಶಿಸುವುದನ್ನು ತಡೆಯುವ ಹಕ್ಕು ನನ್ನ ಸಹೋದರ, ಪತಿ ಸೇರಿದಂತೆ ಯಾರಿಗೂ ಇಲ್ಲ ಎಂಬುದನ್ನು ಪುನರುಚ್ಚರಿಸುತ್ತೇನೆ ಎಂದು ಹೇಳಿರುವುದಾಗಿ ಸ್ಕ್ರಾಲ್ ಡಾಟ್ ಇನ್ ಸುದ್ದಿತಾಣ ವರದಿ ಮಾಡಿದೆ.

‘ನ್ಯಾಯಾಲಯದ ಆದೇಶದೊಂದಿಗೆ ಮನೆ ಪ್ರವೇಶಿಸುವೆ’

ಮನೆಗೆ ಪ್ರವೇಶಿಸದಂತೆ ತಡೆಯುವಲ್ಲಿ ಪತಿ ಕೃಷ್ಣನುಣ್ಣಿ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ನ್ಯಾಯಾಲಯದ ಆದೇಶದೊಂದಿಗೆ ಮನೆಯೊಳಕ್ಕೆ ಪ್ರವೇಶಿಸಲಿದ್ದೇನೆ. ಅಲ್ಲಿಯವರೆಗೂ ‘ಒನ್ ಸ್ಟಾಪ್ ಸೆಂಟರ್’ನಲ್ಲಿ ಉಳಿಯಲಿದ್ದೇನೆ ಎಂದು ಕೇರಳ ಸರ್ಕಾರದ ನಾಗರಿಕ ಸೇವಾ ಅಧಿಕಾರಿಯೂ ಆಗಿರುವ ಕನಕದುರ್ಗಾ ಹೇಳಿದ್ದಾರೆ. ದೈಹಿಕ, ಲೈಂಗಿಕ, ಮಾನಸಿಕ ಮತ್ತು ಆರ್ಥಿಕ ದೌರ್ಜನ್ಯಕ್ಕೊಳಗಾದವರಿಗೆ ನೆಲೆಯೊದಗಿಸಲು ಕೇರಳ ಸರ್ಕಾರ ಆರಂಭಿಸಿರುವ ಕೇಂದ್ರವಾಗಿದೆ ‘ಒನ್ ಸ್ಟಾಪ್ ಸೆಂಟರ್’. ಸದ್ಯ ಕನಕದುರ್ಗಾ ಅವರು ಮಲಪ್ಪುರಂನ ಪೆರಿಂತಲಮನ್ನಾದಲ್ಲಿರುವ ಕೇಂದ್ರದಲ್ಲಿ ವಾಸ್ತವ್ಯವಿದ್ದಾರೆ.

ಇದನ್ನೂ ಓದಿ: ಕನಕದುರ್ಗ ಮೇಲೆ ಸಂಬಂಧಿಕರಿಂದ ಹಲ್ಲೆ

ಶಬರಿಮಲೆ ದೇಗುಲ ಪ್ರವೇಶಿಸಿದ ಕನಕದುರ್ಗಾ ಮತ್ತು ಬಿಂದು ಅವರು ತಮಗೆ ದಿನದ 24 ಗಂಟೆಯೂ ರಕ್ಷಣೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಈಚೆಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಕೋರ್ಟ್, ಇಬ್ಬರಿಗೂ ದಿನದ 24 ತಾಸು ಭದ್ರತೆ ಒದಗಿಸುವಂತೆ ಕೇರಳ ಪೊಲೀಸರಿಗೆ ಸೂಚಿಸಿತ್ತು.

ಇನ್ನಷ್ಟು...

ರಕ್ಷಣೆ ಕೋರಿ ‘ಸುಪ್ರೀಂ’ಗೆ ಅರ್ಜಿ ಸಲ್ಲಿಸಿದ ಕನಕದುರ್ಗಾ, ಬಿಂದು

ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರಿಗೆ ದಿನದ 24 ತಾಸೂ ಭದ್ರತೆ

ಬರಹ ಇಷ್ಟವಾಯಿತೆ?

 • 35

  Happy
 • 2

  Amused
 • 1

  Sad
 • 3

  Frustrated
 • 13

  Angry

Comments:

0 comments

Write the first review for this !