ಶುಕ್ರವಾರ, ಜೂನ್ 5, 2020
27 °C
ಕೊರೊನ ಭೀತಿ: ಬಜೆಟ್‌ ಅಧಿವೇಶನ ಮುಂದೂಡಿಕೆ

ಮಧ್ಯಪ್ರದೇಶ: ಇಂದು ವಿಶ್ವಾಸಮತ ಯಾಚನೆಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: ಮಾರ್ಚ್‌ 17ರಂದು ವಿಶ್ವಾಸಮತ ಸಾಬೀತುಪಡಿಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರಿಗೆ ರಾಜ್ಯಪಾಲ ಲಾಲ್‌ಜಿ ಟಂಡನ್‌ ಅವರು ಸೋಮವಾರ ಸೂಚಿಸಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಗಲುವ ಅಪಾಯವಿರುವ ಹಿನ್ನೆಲೆಯಲ್ಲಿ ಸೋಮವಾರ ಆರಂಭವಾದ ವಿಧಾನಸಭೆಯ ಬಜೆಟ್‌ ಅಧಿವೇಶನವನ್ನುಇದೇ 26ರ ವರೆಗೆ ಮುಂದೂಡಲಾಗಿದೆ. ಅಧಿವೇಶನ ಆರಂಭವಾಗುವ ದಿನದಂದೇ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಈ ಹಿಂದೆ ಕಮಲ್‌ನಾಥ್‌ ಅವರಿಗೆ ಸೂಚಿಸಿದ್ದರು.

ಸದನದಲ್ಲಿ ರಾಜ್ಯಪಾಲರ ಭಾಷಣ ಮುಗಿದ ಕೂಡಲೇ, ಬಹುಮತ ಸಾಬೀತು ಪಡಿಸುವಂತೆ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.  ಆಗ ಮಾತನಾಡಿದ ಸಚಿವ  ಗೋವಿಂದ ಸಿಂಗ್‌ ಅವರು, ಕೊರೊನಾ ಸೋಂಕಿನ ಅಪಾಯದ ಬಗ್ಗೆ ಹಾಗೂ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗನಿರ್ದೇಶನಗಳ ಬಗ್ಗೆ ಗಮನ ಸೆಳೆದರು.

ಇದಕ್ಕೆ ಸ್ಪಂದಿಸಿದ ಸ್ವೀಕರ್ ಎನ್‌.ಪಿ. ಪ್ರಜಾಪತಿ ಅವರು ಅಧಿವೇಶನವನ್ನು ಮುಂದೂಡಿದ್ದಾರೆ.

ಸುಪ್ರೀಂ ಮೊರೆ ಹೋದ ಬಿಜೆಪಿ: ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಕಾರಣ ಬಹುಮತ ಸಾಬೀತುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಮಾರ್ಚ್‌ 16ರಂದು ಬಹುಮತ ಸಾಬೀತುಪಡಿಸಬೇಕೆಂದು ರಾಜ್ಯಪಾಲರು ನೀಡಿದ್ದ ಸೂಚನೆಯನ್ನು ಕಮಲ್‌ನಾಥ್‌ ಅವರು ಪಾಲಿಸಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ರಾಜ್ಯಪಾಲರಿಗೆ ಪತ್ರ: ‘ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಯು ಕರ್ನಾಟಕ ಪೊಲೀಸರ ಸಹಾಯದಿಂದ  ಕೂಡಿ ಹಾಕಿರುವ ಕಾರಣ, ವಿಶ್ವಾಸಮತ ಯಾಚನೆ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ’ ಎಂದು ಕಮಲ್‌ನಾಥ್‌ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

‘ವಿಭಿನ್ನ ಹೇಳಿಕೆಗಳನ್ನು ನೀಡುವಂತೆ ಕೂಡಿಹಾಕಿರುವ ಶಾಸಕರನ್ನು ಒತ್ತಾಯಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು ಅರ್ಥಹೀನ’ ಎಂದು ಆರು ಪುಟಗಳ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ರಾಜ್ಯಪಾಲರ ಭೇಟಿಯಾದ ದಿಗ್ವಿಜಯಸಿಂಗ್‌: ರಾಜಕೀಯ ಬಿಕ್ಕಟ್ಟಿನ ನಡುವೆ ಸೋಮವಾರ ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ ಸಿಂಗ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

‘ಇದೊಂದು ಸೌಜನ್ಯದ ಭೇಟಿ. ರಾಜಕೀಯ ವಿಷಯದ ಬಗ್ಗೆ ಚರ್ಚಿಸಿಲ್ಲ’ ಎಂದು ಬಳಿಕ ದಿಗ್ವಿಜಯ ಸಿಂಗ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು