ಸೋಮವಾರ, ನವೆಂಬರ್ 18, 2019
23 °C

ವಿಮಾನ ನಿಲ್ದಾಣದಲ್ಲಿ ಸಿಕ್ಕ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಸ್ಫೋಟಕ ಇರುವ ಶಂಕೆ

Published:
Updated:

ನವದೆಹಲಿ: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಪತ್ತೆಯಾದ ಬ್ಯಾಗ್‌ನಲ್ಲಿ ಸುಧಾರಿತ ಸ್ಫೋಟಕದ (ಆರ್‌ಡಿಕ್ಸ್‌) ಚಹರೆಗಳು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಬ್ಯಾಗ್ ಕೊಂಡೊಯ್ದಿದ್ದಾರೆ.

ಭದ್ರತೆಗೆ ನಿಯೋಜಿಸಲಾಗಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ವಿ.ಕೆ.ಸಿಂಗ್‌ ಅವರಿಗೆ ‘ಅರೈವಲ್’ (ಆಗಮನ) ವಿಭಾಗದಲ್ಲಿ ಮಧ್ಯರಾತ್ರಿ 12.56ಕ್ಕೆ ಕಪ್ಪುಬಣ್ಣದ ಬ್ಯಾಗ್‌ ಕಣ್ಣಿಗೆ ಬಿತ್ತು. ಪರಿಶೀಲಿಸಿದಾಗ ಅದರಲ್ಲಿ ಆರ್‌ಡಿಎಕ್ಸ್‌ ಸ್ಫೋಟಕದ ಚಹರೆಗಳು ಪತ್ತೆಯಾದವು. 

‘ಸ್ಫೋಟಕ ತಪಾಸಣಾ ಉಪಕರಣ’ದ (Explosive Vapour Detector- EVD) ಮೂಲಕ ಬ್ಯಾಗ್‌ ಪರಿಶೀಲಿಸಿದಾಗ ಅದರ ಮೇಲೆ ಸುಧಾರಿತ ಸ್ಫೋಟಕದ ಚಹರೆಗಳು ಪತ್ತೆಯಾದವು. ಬ್ಯಾಗ್ ಮೂಸಿ ನೋಡಿದ ನಾಯಿಯೂ ಅದರಲ್ಲಿ ಸ್ಫೋಟಕ ಇರುವುದನ್ನು ದೃಢಪಡಿಸಿತು.

ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಬ್ಯಾಗ್ ಕೊಂಡೊಯ್ದರು. ವಿಮಾನ ನಿಲ್ದಾಣದಲ್ಲಿ ಜನ ಮತ್ತು ವಾಹನ ಸಂಚಾರ ನಿರ್ಬಂಧಿಸಲಾಯಿತು.

‘ಬ್ಯಾಗ್‌ನ ಎಕ್ಸ್‌ರೇ ಚಿತ್ರಗಳನ್ನು ಬಾಂಬ್ ನಿಷ್ಕ್ರಿಯ ದಳದ ತಂಡ ಪರಿಶೀಲಿಸುತ್ತಿದೆ. ಅದರಲ್ಲಿ ಅಪಾಯಕಾರಿ ವಸ್ತುಗಳು ಇರುವ ಬಗ್ಗೆ ಈವರೆಗೂ ಯಾವುದೇ ಮಾಹಿತಿಯನ್ನು ಬಾಂಬ್ ನಿಷ್ಕ್ರಿಯ ದಳ ನೀಡಿಲ್ಲ. ನಸುಕಿನ 2.55ಕ್ಕೆ ವಿಶೇಷ ವಾಹನದಲ್ಲಿ ಜನಸಂಚಾರವಿಲ್ಲದ ಸುರಕ್ಷಿತ ಸ್ಥಳಕ್ಕೆ ಬ್ಯಾಗ್ ಕೊಂಡೊಯ್ಯಲಾಯಿತು’ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸಿಐಎಸ್‌ಎಫ್ ತಂಡವು ಅರೈವಲ್ ಪ್ರದೇಶದ ಸಂಪೂರ್ಣ ತಪಾಸಣೆ ನಡೆಸಿತು. ನಸುಕಿನ 3.30ರ ನಂತರ ಪ್ರಯಾಣಿಕರು ಮತ್ತು ವಾಹನ ಸಂಚಾರ ಮತ್ತೆ ಆರಂಭವಾಯಿತು. 24 ಗಂಟೆಗಳ ನಿಗಾವಣೆಯ ನಂತರ ಬ್ಯಾಗ್‌ನಲ್ಲಿ ಏನಿದೆ ಎಂಬ ಬಗ್ಗೆ ಏನಾದರೂ ಹೇಳಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.

ವಿಮಾನ ನಿಲ್ದಾಣಕ್ಕೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಭಾಟಿಯಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಯಾವುದೇ ಬ್ಯಾಗ್‌ನಲ್ಲಿ ಸ್ಫೋಟಕದ ಚಹರೆ ಪತ್ತೆಯಾದ ಮಾತ್ರಕ್ಕೆ ಅದರಲ್ಲಿ ಸ್ಫೋಟಕವಿದೆ ಎಂದು ಹೇಳಲು ಆಗುವುದಿಲ್ಲ. ಕೆಲ ರಾಸಾಯನಿಕಗಳಲ್ಲಿಯೂ ಆರ್‌ಡಿಎಕ್ಸ್‌ ಚಹರೆ ಕಾಣಿಸಬಹುದು. ಸ್ಫೋಟಕ ಪತ್ತೆ ಉಪಕರಣಗಳು ತುಂಬಾ ಸೂಕ್ಷ್ಮವಾಗಿ ಕೆಲಸ ಮಾಡುತ್ತವೆ. ಸಣ್ಣಪುಟ್ಟ ಉಳಿಕೆಗಳಿದ್ದರೂ ತೋರಿಸುತ್ತವೆ. ಈ ಹಿಂದೆ ಒಮ್ಮೆ ಉಪ್ಪಿನಕಾಯಿಯಿದ್ದ ಬ್ಯಾಗ್‌ನಲ್ಲಿ ಮಾದಕ ಪದಾರ್ಥಗಳಿಗೆ ಎಂದು ಉಪಕರಣ ಅಲರ್ಟ್ ಮಾಡಿತ್ತು ಎಂದು ನಿಲ್ದಾಣದ ಮತ್ತೋರ್ವ ಅಧಿಕಾರಿ ನೆನಪಿಸಿಕೊಂಡರು.

ಪ್ರತಿಕ್ರಿಯಿಸಿ (+)