ಗುರುವಾರ , ನವೆಂಬರ್ 14, 2019
26 °C
ಆಧಾರ್‌ ಮಾಹಿತಿ ಕದಿಯಲು ಸಾಧ್ಯವಿಲ್ಲ ಎಂದ ಯುಐಡಿಎಐ

ಟ್ರಾಯ್ ಅಧ್ಯಕ್ಷರ ‘ಅವಾಂತರ’

Published:
Updated:

ನವದೆಹಲಿ: ‘ಆಧಾರ್‌ ಸಂಖ್ಯೆಯನ್ನು ಬಳಸಿಕೊಂಡು ಮಾಹಿತಿಗೆ ಕನ್ನ ಹಾಕಲು ಸಾಧ್ಯವಿಲ್ಲ’ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ.

ಟ್ವಿಟರ್‌ ಬಳಕೆದಾರರೊಬ್ಬರು ಹಾಕಿದ ಸವಾಲನ್ನು ಸ್ವೀಕರಿಸಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಟ್ವಿಟರ್‌ನಲ್ಲಿ ತಮ್ಮ ಆಧಾರ್‌ ಸಂಖ್ಯೆಯನ್ನು ಪ್ರಕಟಿಸಿದ್ದರು. ‘ಆಧಾರ್‌ ಸಂಖ್ಯೆಯನ್ನು ಬಳಸಿಕೊಂಡು ನನಗೆ ಹಾನಿ ಮಾಡಬಹುದು ಎಂಬುದಕ್ಕೆ ಒಂದಾದರೂ ಉದಾಹರಣೆಯನ್ನು ತೋರಿಸಿ’ ಎಂದು ಶರ್ಮಾ ಸವಾಲು ಎಸೆದಿದ್ದರು.

ಶರ್ಮಾ ಅವರ ಸವಾಲನ್ನು ಎಲಿಯಟ್ ಆಲ್ಡರ್‌ಸನ್ ಎಂಬ ಮತ್ತೊಬ್ಬ ಟ್ವೀಟಿಗ ಸ್ವೀಕರಿಸಿದ್ದರು. ನಂತರ ಶರ್ಮಾ ಅವರ ಮೊಬೈಲ್‌ ಸಂಖ್ಯೆ, ಅವರ ಖಾಸಗಿ ಮೊಬೈಲ್ ಸಂಖ್ಯೆ, ಅವರು ಬಳಸುತ್ತಿರುವ ಮೊಬೈಲ್‌ನ ಮಾದರಿ, ಪ್ಯಾನ್‌ ಸಂಖ್ಯೆ, ವಾಟ್ಸ್‌ಆ್ಯಪ್‌ನ ಡಿಸ್‌ಪ್ಲೇ ಚಿತ್ರಗಳನ್ನು ಎಲಿಯಟ್‌ ತಮ್ಮ ಟ್ವೀಟ್‌ಗಳಲ್ಲಿ ಪ್ರಕಟಿಸಿದ್ದರು. ‘ಶರ್ಮಾ ಅವರು ತಮ್ಮ ಆಧಾರ್ ಸಂಖ್ಯೆಯನ್ನು ಯಾವುದೇ ಬ್ಯಾಂಕ್ ಖಾತೆಗೂ ಜೋಡಿಸಿಲ್ಲ’ ಎಂದೂ ಎಲಿಯಟ್ ಟ್ವೀಟ್ ಮಾಡಿದ್ದರು.

‘ನನ್ನ ಎಲ್ಲಾ ಬ್ಯಾಂಕ್‌ ಖಾತೆಗಳಿಗೂ ಆಧಾರ್‌ ಸಂಖ್ಯೆ ಜೋಡಿಸಿದ್ದೇನೆ’ ಎಂದು ಶರ್ಮಾ ಮತ್ತೊಂದು ಟ್ವೀಟ್ ಮಾಡಿದ್ದರು. 

‘ಮಾನ್ಯ ಪ್ರಧಾನಿಗಳೇ, ನಿಮ್ಮ ಬಳಿ ಆಧಾರ್‌ ಸಂಖ್ಯೆ ಇದ್ದರೆ ಅದನ್ನು ಟ್ವೀಟ್‌ನಲ್ಲಿ ಪ್ರಕಟಿಸಿ’ ಎಂದು ಮತ್ತೊಬ್ಬ ಟ್ವೀಟಿಗ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಎಸೆದಿದ್ದರು.

ಆದರೆ ಈ ಸವಾಲು ಮತ್ತು ಈ ಸವಾಲಿನಲ್ಲಿ ಭಾಗವಹಿಸಿದ ಎಲ್ಲರ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ವ್ಯಕ್ತವಾದವು. ಶರ್ಮಾ ಅವರು ತಮ್ಮ ಆಧಾರ್ ಸಂಖ್ಯೆಯನ್ನು ಬಹಿರಂಗಪಡಿಸಬಾರದಿತ್ತು ಎಂದು ಬಹುತೇಕರು
ಅಭಿಪ್ರಾಯಪಟ್ಟರು.

ಅಷ್ಟರಲ್ಲೇ ಯುಐಡಿಎಐ, ‘ಆಧಾರ್‌ ದತ್ತಾಂಶಗಳು ಸುರಕ್ಷಿತವಾಗಿವೆ. ಅವಕ್ಕೆ ಕನ್ನ ಹಾಕಲು ಸಾಧ್ಯವಿಲ್ಲ’ ಎಂದು ಹೇಳಿದೆ.

***

ಟ್ವಿಟರ್‌ನಲ್ಲಿ ಬಹಿರಂಗವಾದ, ಶರ್ಮಾ ಅವರ ಯಾವ ಮಾಹಿತಿಯನ್ನೂ ಆಧಾರ್‌ ಹ್ಯಾಕ್‌ ಮಾಡಿ ಸಂಗ್ರಹಿಸಿದ್ದಲ್ಲ. ಅವೆಲ್ಲವೂ ಅಂತರ್ಜಾಲದಲ್ಲೇ ಲಭ್ಯವಿವೆ
- ಯುಐಡಿಎಐ

***

 ಟ್ವಿಟರ್‌ನಲ್ಲಿ ಸವಾಲು ಸ್ವೀಕರಿಸಿ ಆಧಾರ್ ಸಂಖ್ಯೆ ಪ್ರಕಟಿಸಿದ್ದ ಆರ್‌.ಎಸ್‌.ಶರ್ಮಾ

ಶರ್ಮಾರ ವೈಯಕ್ತಿಕ ವಿವರ, ಪ್ಯಾನ್ ವಿವರ ಪ್ರಕಟಿಸಿದ್ದ ಮತ್ತೊಬ್ಬ ಟ್ವೀಟಿಗ

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹುಟ್ಟುಹಾಕಿದ ‘ಆಧಾರ್ ಸವಾಲು’

 

 

ಪ್ರತಿಕ್ರಿಯಿಸಿ (+)