ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿ: ಮುಂದಿನ ತಿಂಗಳು ಟ್ರಾಯ್‌ ತೀರ್ಮಾನ

ಒಟಿಟಿ ನಿಯಂತ್ರಣ ಕಾಯ್ದೆ
Last Updated 28 ಜನವರಿ 2019, 20:22 IST
ಅಕ್ಷರ ಗಾತ್ರ

ನವದೆಹಲಿ: ಓವರ್–ದ–ಟಾಪ್‌ (ಒಟಿಟಿ) ಸೇವೆ ಒದಗಿಸುವ ಆ್ಯಪ್‌ಗಳನ್ನು ದೂರಸಂಪರ್ಕ ನಿಯಂತ್ರಣ ಕಾಯ್ದೆ ವ್ಯಾಪ್ತಿಗೆ ತರುವ ಶಿಫಾರಸು ಕುರಿತು ಫೆಬ್ರುವರಿ ಅಂತ್ಯದ ವೇಳೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿ (ಟ್ರಾಯ್‌) ಹೇಳಿದೆ.

ಫೇಸ್‌ಬುಕ್, ವಾಟ್ಸ್‌ ಆ್ಯಪ್‌, ಸ್ಕೈಪ್, ವಿ–ಚಾಟ್ ಮತ್ತು ಗೂಗಲ್ ಟಾಕ್, ಗೂಗಲ್‌ ಡಿಯೊ ಮುಂತಾದ ಆ್ಯಪ್‌‌ಗಳು ಓವರ್–ದ–ಟಾಪ್‌ ಸೇವೆ (ಅಂತರ್ಜಾಲ ಆಧರಿತ ಸೇವೆ) ಒದಗಿಸುತ್ತಿವೆ. ಆದರೆ, ಇವುಗಳ ನಿಯಂತ್ರಣಕ್ಕೆ ಯಾವುದೇ ನಿಯಮಾವಳಿ, ಕಾಯ್ದೆ ಇಲ್ಲ.

ದೂರಸಂಪರ್ಕ ಸಂಸ್ಥೆಗಳ ನಿಯಂತ್ರಣಕ್ಕೆ ರೂಪಿಸಿರುವ ಕಾಯ್ದೆ ರೀತಿಯಲ್ಲಿ ಓವರ್-ದ-ಟಾಪ್ ಸೇವೆ ನೀಡುತ್ತಿರುವ ಆ್ಯಪ್‌ಗಳಿಗೂ ನಿಯಮಾವಳಿ ರೂಪಿಸಲು ಟ್ರಾಯ್‌ ಕಳೆದ ನವೆಂಬರ್‌ನಲ್ಲಿ ತಜ್ಞರ ಜತೆ ಸಮಾಲೋಚನೆ ನಡೆಸಿದ್ದು, ಸಾರ್ವಜನಿಕರು ಮತ್ತು ಸಂಸ್ಥೆಗಳ ಅಹವಾಲು ಆಲಿಸಿದೆ.

ಸುಳ್ಳು ಸುದ್ದಿ ಮತ್ತು ದತ್ತಾಂಶ ದುರ್ಬಳಕೆಯಿಂದ ಸುದ್ದಿಯಾಗಿದ್ದ ಫೇಸ್‌ಬುಕ್‌ ಮತ್ತು ವಾಟ್ಸ್‌ ಆ್ಯಪ್‌ ಚಟುವಟಿಕೆಗಳಿಗೆ ಕಡಿವಾಣ ತೊಡಿಸುವ ಬಗ್ಗೆ ಸರ್ಕಾರ ಕೂಡ ಚಿಂತನೆ ನಡೆಸಿತ್ತು.

ಸರ್ಕಾರಕ್ಕೆ ಅತ್ಯಂತ ಹೆಚ್ಚು ತೆರಿಗೆ ಪಾವತಿಸುತ್ತಿರುವ ದೂರಸಂಪರ್ಕ ಉದ್ಯಮವು ಪರವಾನಗಿ ಶುಲ್ಕ, ತರಂಗಾಂತರ, ಟೆಲಿಕಾಂ ಯಂತ್ರೋಪಕರಣ ಮತ್ತು ಸುರಕ್ಷತಾ ಸಾಧನಗಳ ಮೇಲೆ ಭಾರಿ ಪ್ರಮಾಣದ ಬಂಡವಾಳ ತೊಡಗಿಸಿದೆ.

ಆದರೆ, ಯಾವುದೇ ನಿಯಂತ್ರಣಕ್ಕೆ ಒಳಪಡದ ಆ್ಯಪ್‌ ಆಧರಿತ ಒಟಿಟಿ ಸೇವೆಗಳು ದೂರಸಂಪರ್ಕ ಜಾಲ (ನೆಟ್‌ವರ್ಕ್‌) ಬಳಸಿಕೊಂಡು ಗ್ರಾಹಕರಿಗೆ ಮೆಸೇಜ್ ಮತ್ತು ಫೋನ್‌ ಸೌಲಭ್ಯ ನೀಡುತ್ತಿವೆ. ಹೀಗಾಗಿ ಸಾಮಾಜಿಕ ನೆಟ್‍ವರ್ಕ್ ಸೇವೆಗಳ ಮೇಲೆ ನಿರ್ಬಂಧ ವಿಧಿಸುವಂತೆ ದೂರಸಂಪರ್ಕ ಸಂಸ್ಥೆಗಳು ಬೇಡಿಕೆ ಮುಂದಿಟ್ಟಿವೆ.

ಟೆಲಿಕಾಂ ಸೇವೆಗಳ ರೀತಿಯಲ್ಲಿಯೇ ಒಟಿಟಿ ಸೇವೆಗಳಿಗೂ ಪರವಾನಗಿ ಕಡ್ಡಾಯಗೊಳಿಸಬೇಕು ಎಂದು 'ಸೆಲ್ಯುಲರ್‌ ಆಪರೇಟರ್ಸ್‌ ಅಸೋಸಿಯೇಷನ್ ಆಫ್‌ ಇಂಡಿಯಾ' (ಸಿಒಎಐ) ಒತ್ತಡ ಹೇರಿದೆ.

ಈ ಬೇಡಿಕೆಗೆ ಭಾರತೀಯ ಅಂತರ್ಜಾಲ ಮತ್ತು ಮೊಬೈಲ್‌ ಸೇವಾದಾತರ ಸಂಘ ಮತ್ತು ಬ್ರಾಡ್‌ ಬ್ಯಾಂಡ್‌ ಇಂಡಿಯಾ ಫೋರಂ ತೀವ್ರ ವಿರೋಧ ವ್ಯಕ್ತಪಡಿಸಿದೆ.

* ಓವರ್–ದ–ಟಾಪ್‌ (ಒಟಿಟಿ) ನೆಟ್‌ಫ್ಲಿಕ್ಸ್‌, ಬಿಗ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಕಾರ್ಯಕ್ರಮ ಪ್ರಸಾರ ಸೇವೆ ನೀಡುತ್ತಿವೆ.

* ಒಟಿಟಿ ಆದಾಯ ಸದ್ಯ ಅಂದಾಜು ₹3,500 ಕೋಟಿಯಷ್ಟಿದ್ದು, ಮುಂದಿನ ಐದು ವರ್ಷಗಳಲ್ಲಿ ₹35,000 ಕೋಟಿ ತಲುಪುವ ನಿರೀಕ್ಷೆ ಇದೆ.

* ಭವಿಷ್ಯದ ಮಾರುಕಟ್ಟೆಯಾಗಿರುವ ಒಟಿಟಿ ಶೇ 16ರಷ್ಟು ವೀಕ್ಷಕರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT