ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೆಕ್ಯುಲರಿಸಂ’ ಕುರಿತ ‍ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೇ ನುಣುಚಿಕೊಂಡ ಉದ್ಧವ್‌

Last Updated 29 ನವೆಂಬರ್ 2019, 6:18 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಸೆಕ್ಯುಲರಿಸಂ ಬಗ್ಗೆ ಕೇಳಲಾದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೇ ಉದ್ಧವ್‌ ಠಾಕ್ರೆ ನುಣುಚಿ‌ಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಠಾಕ್ರೆ ಅವರಿಗೆ ಸೆಕ್ಯುಲರಿಸಂವಿಚಾರವಾಗಿ ಪ್ರಶ್ನೆಯೊಂದನ್ನು ಕೇಳಲಾಯಿತು. ಅದಕ್ಕೆ ಅವರು,‘ಸೆಕ್ಯುಲರ್‌ಎಂದರೇನು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದೆ,’ಎಂದಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ,‘ಸೆಕ್ಯುಲರ್‌ಸಿದ್ದಾಂತ ಪ್ರತಿಪಾದಿಸುವ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಆ ಮೂಲಕ ಶಿವಸೇನೆ ಸೆಕ್ಯುಲರ್‌ನಿಲುವನ್ನು ಒಪ್ಪಿಕೊಂಡಿದೆಯಾ,?’ ಎಂದು ಠಾಕ್ರೆ ಅವರಿಗೆ ಪ್ರಶ್ನಿಸಲಾಯಿತು. ಅದಕ್ಕೆ ಮುಜುಗರದಿಂದಲೇ ‍ಪ್ರತಿಕ್ರಿಯಿಸಿದ ಠಾಕ್ರೆ, ‘ಸೆಕ್ಯುಲರ್‌ಎಂದರೇನು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದೆ,’ ಎಂದಷ್ಟೇ ಹೇಳಿದರು.

ಉದ್ಧವ್‌ ಠಾಕ್ರೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ‘ಮಹಾ ವಿಕಾಸ್ ಅಘಾಡಿ’ ನಾಯಕರು ಸೆಕ್ಯುಲರಿಸಂ ಬಗೆಗಿನ ತಮ್ಮ ದೃಷ್ಟಿಕೋನ ವ್ಯಕ್ತಪಡಿಸಿದ್ದಾರೆ.

‘ಸೆಕ್ಯುಲರಿಸಂ ಎಂದರೆ ಹಿಂದುಗಳು ಹಿಂದುಗಳಾಗಿ ಉಳಿಯುವುದು. ಮುಸ್ಲಿಂರು ಮುಸ್ಲಿಂರಾಗಿರುವುದು. ಜಾತ್ಯತೀತತೆ ಬಗ್ಗೆ ಗೊತ್ತಿರವರಿಗೆ ಇದನ್ನು ಹೇಳುತ್ತಿದ್ದೇನೆ,’ ಎಂದು ಎನ್‌ಸಿಪಿ ಮುಖಂಡ ಜಯಂತ್‌ ಪಾಟೀಲ್‌ ಹೇಳಿದ್ದಾರೆ. ಆ ವೇಳೆ ಶಿವಸೇನಾ ನಾಯಕ ಏಕನಾಥ್‌ ಶಿಂದೆ ಹಾಜರಿದ್ದರು. ಅವರಿಬ್ಬರು ಗುರುವಾರ ಸಂಜೆ ಶಿವಾಜಿ ಪಾರ್ಕ್‌ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹಿಂದುತ್ವ ರಾಜಕಾರಣದ ಮೂಲಕ ಗುರುತಿಸಿಕೊಂಡಿದ್ದ ಶಿವಸೇನಾ ಪಕ್ಷವು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದ ನಂತರ ಹಲವು ಟೀಕೆಗಳು ಕೇಳಿಬಂದಿದ್ದವು.

ಆ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು, ‘ಶಿವಸೇನಾದ ಹಿಂದುತ್ವವು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮುಂದೆ ತಲೆ ಬಾಗಿದೆ. ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿ ಸರ್ಕಾರವು ಅಸ್ಥಿರವಾಗಿದೆ. ಕಾರಣ, ಅವರ ನಡುವೆ ಸೈದ್ದಾಂತಿಕವಾಗಿ ದೊಡ್ಡ ಪ್ರಮಾಣದ ವ್ಯತ್ಯಾಸಗಳಿವೆ.’ ಎಂದಿದ್ದರು.

ಶಿವಸೇನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್, ‘ಶಿವಸೇನಾ ಜನಾದೇಶಕ್ಕೆ ವಂಚಿಸಿದೆ. ರಾಮಮಂದಿರ ಕಟ್ಟಲು ವಿರೋಧಿಸಿದ್ದ ಎನ್‌ಸಿಪಿ–ಕಾಂಗ್ರೆಸ್‌ನೊಂದಿಗೆ ಸೇರುವ ಮೂಲಕ ಶಿವಸೇನಾ ದೊಡ್ಡ ತಪ್ಪು ಎಸಗಿದೆ.’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT