ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪರೀಕ್ಷಾ ಸಾಮರ್ಥ್ಯ ದಿನಕ್ಕೆ 95 ಸಾವಿರಕ್ಕೆ ಹೆಚ್ಚಿಸಲಾಗಿದೆ: ಹರ್ಷವರ್ಧನ್

Last Updated 9 ಮೇ 2020, 14:06 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ 95 ಸಾವಿರದ ವರೆಗೆ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಶನಿವಾರ ತಿಳಿಸಿದ್ದಾರೆ.

ಈವರೆಗೆ 332 ಸರ್ಕಾರಿ ಮತ್ತು 121 ಖಾಸಗಿ ಪ್ರಯೋಗಾಲಯಗಳಲ್ಲಿ 15,25,631 ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಅವರು ಹೇಳಿರುವುದಾಗಿ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿ ಮತ್ತು ಸೋಂಕು ನಿಯಂತ್ರಣಕ್ಕೆ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಅವರು ಪರಾಮರ್ಶೆ ನಡೆಸಿದರು. ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ತಂಬಾಕು ಸೇವನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂ ರಾಜ್ಯಗಳ ಪ್ರತಿನಿಧಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಕೋವಿಡ್–19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳ ಬದ್ಧತೆಯನ್ನು ಹರ್ಷವರ್ಧನ್ ಶ್ಲಾಘಿಸಿದ್ದಾರೆ.

‘ಈಶಾನ್ಯ ರಾಜ್ಯಗಳ ಹಸಿರು ವಲಯಗಳನ್ನು ನೋಡಿದಾಗ ದೊಡ್ಡ ಸಮಾಧಾನವಾಗುತ್ತಿದೆ. ಆ ಪ್ರದೇಶಗಳು ಸ್ಫೂರ್ತಿದಾಯಕವಾಗಿವೆ. ಸದ್ಯದ ಮಾಹಿತಿ ಪ್ರಕಾರ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಮಾತ್ರ ಕೊರೊನಾ ಪ್ರಕರಣಗಳು ಅಸ್ತಿತ್ವದಲ್ಲಿವೆ. ಉಳಿದೆಲ್ಲ ರಾಜ್ಯಗಳು ಹಸಿರುವಲಯ ಆಗಿವೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಳಿಗ್ಗಿನ ಮಾಹಿತಿ ಪ್ರಕಾರ ತ್ರಿಪುರಾದಲ್ಲಿ ಈವರೆಗೆ ಒಟ್ಟು 118, ಅಸ್ಸಾಂನಲ್ಲಿ 59, ಮೇಘಾಲಯದಲ್ಲಿ 12, ಮಣಿಪುರದಲ್ಲಿ 2, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಒಂದು ಕೊರೊನಾ ಪ್ರಕರಣ ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT