ಸೋಮವಾರ, ಜೂನ್ 14, 2021
26 °C

ಗಲಭೆ ಹಾನಿಗೆ ಆರೋಪಿಗಳ ಆಸ್ತಿ ಮುಟ್ಟುಗೋಲು, ನಷ್ಟ ವಸೂಲಿ: ಉ.ಪ್ರ. ಸುಗ್ರೀವಾಜ್ಞೆ

ಪಿಟಿಐ Updated:

ಅಕ್ಷರ ಗಾತ್ರ : | |

Yogi Adityanath

ಲಖನೌ: ರಾಜಕೀಯ ಮೆರವಣಿಗೆ, ಹಿಂಸಾತ್ಮಕ ಪ್ರತಿಭಟನೆ ಅಥವಾ ದೊಂಬಿಗಳ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯುಂಟಾದರೆ, ಆರೋಪಿಗಳಿಂದಲೇ ನಷ್ಟ ವಸೂಲಿ ಮಾಡುವ ಮತ್ತು ಅವರ ಆಸ್ತಿಪಾಸ್ತಿಯನ್ನೇ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿರುವ ಸುಗ್ರೀವಾಜ್ಞೆಯನ್ನು ಉತ್ತರ ಪ್ರದೇಶದಲ್ಲಿ ಹೊರಡಿಸಲಾಗಿದೆ.

ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಭಾನುವಾರ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಿದ್ದಾರೆ.ಲಖನೌದಲ್ಲಿ ಸಿಎಎ-ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ದಾಂಧಲೆಯಲ್ಲಿ ತೊಡಗಿದ ಆರೋಪಿಗಳ ವಿವರಗಳುಳ್ಳ ಪೋಸ್ಟರ್‌ಗಳನ್ನು ರಸ್ತೆ ಬದಿಯಿಂದ ತೆಗೆಯುವಂತೆ ಮಾ.9ರಂದು ಅಲಹಾಬಾದ್ ಹೈಕೋರ್ಟ್ ಆದೇಶದ ಬೆನ್ನಿಗೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟವು ಶುಕ್ರವಾರ ಸಭೆ ಸೇರಿ, ನಷ್ಟ ವಸೂಲಿ ಕುರಿತ ಸುಗ್ರೀವಾಜ್ಞೆಯನ್ನು ತರಲು ನಿರ್ಧರಿಸಿ, ಅಂಗೀಕಾರಕ್ಕೆ ರಾಜ್ಯಪಾಲರಿಗೆ ಕಳುಹಿಸಿತ್ತು.

ಈ ಸುಗ್ರೀವಾಜ್ಞೆಯ ಪ್ರಕಾರ, ಪ್ರತಿಭಟನೆ, ರಾಜಕೀಯ ಸಮಾವೇಶ, ಮುಷ್ಕರ ಅಥವಾ ಬಂದ್ ಮುಂತಾದವುಗಳಲ್ಲಿ ಭಾಗವಹಿಸುವವರು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟು ಮಾಡಿದರೆ ಪಾಲ್ಗೊಳ್ಳುವ ವ್ಯಕ್ತಿಯೇ ಇದರ ನಷ್ಟವನ್ನು ತುಂಬಿಸಿಕೊಡಬೇಕಾಗುತ್ತದೆ. ದಂಗೆ, ಗಲಭೆಗಳ ಸಂದರ್ಭಕ್ಕೂ ಈ ಸುಗ್ರೀವಾಜ್ಞೆಯು ಅನ್ವಯವಾಗುತ್ತದೆ.

ಅಲ್ಲದೆ, ನಷ್ಟ ವಸೂಲಾತಿ ಮಂಡಳಿಯೊಂದನ್ನು ರಚಿಸಲಾಗುತ್ತದೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವು ಈ ಮಂಡಳಿಗಿರುತ್ತದೆ.

ಪೋಸ್ಟರ್‌ಗಳನ್ನು ಹಾಕಿರುವ ಕುರಿತಾಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತಾದರೂ, ಪೋಸ್ಟರ್‌ಗಳನ್ನು ಪ್ರಕಟಿಸುವ ಕುರಿತು "ಯಾವುದೇ ಕಾನೂನು ಇಲ್ಲ" ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.

ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ, ರಾಜಕೀಯ ಮೆರವಣಿಗೆಗಳು, ಅಕ್ರಮ ಪ್ರತಿಭಟನೆಗಳ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಸ್ವತ್ತುಗಳಿಗೆ ಆಗಬಹುದಾದ ನಷ್ಟವನ್ನು ಆರೋಪಿಗಳೇ ತುಂಬಿಸಿಕೊಡುವಂತೆ ಮಾಡುವ "ಉ.ಪ್ರ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪರಿಹಾರ ಸುಗ್ರೀವಾಜ್ಞೆ 2020"ಗೆ ಸಂಪುಟವು ಅನುಮೋದನೆ ನೀಡಿದೆ ಎಂದು ಸಚಿವ ಸುರೇಶ್ ಕುಮಾರ್ ಖನ್ನಾ ಹೇಳಿದ್ದಾರೆ.

ರಾಜಕೀಯ ಮತ್ತು ಅಕ್ರಮ ಪ್ರತಿಭಟನೆಗಳ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಸ್ವತ್ತುಗಳ ನಷ್ಟ ವಸೂಲಿ ಮಾಡುವ ನಿಟ್ಟಿನಲ್ಲಿ ನಷ್ಟ ವಸೂಲಿ ಮಂಡಳಿಯನ್ನು ರಚಿಸುವ ಸುಪ್ರೀಂ ಕೋರ್ಟ್ ನಿರ್ಧಾರದ ಪ್ರಕಾರವೇ ಈ ಕುರಿತು ಸುಗ್ರೀವಾಜ್ಞೆ ತರುವ ನಿರ್ಣಯಕ್ಕೆ ಸಂಪುಟವು ಅಂಗೀಕಾರ ನೀಡಿದೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದಲ್ಲಿ ಕಳೆದ ಡಿಸೆಂಬರ್‌ನಿಂದೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಹೋರಾಟದಲ್ಲಿ 15 ಮಂದಿ ಸಾವನ್ನಪ್ಪಿದ್ದು, ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟನಾಗಿತ್ತು. ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದವರಿಂದಲೇ ನಷ್ಟ ವಸೂಲಿ ಮಾಡಲಾಗುತ್ತದೆ ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಹಿಂದೆಯೇ ಎಚ್ಚರಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು