ಗುರುವಾರ , ಅಕ್ಟೋಬರ್ 17, 2019
22 °C
ಮಧ್ಯಪ್ರದೇಶದ ಸಚಿವ ಲಖನ್‌ಗೆ ಹೈಕೋರ್ಟ್ ಸೂಚನೆ

‘ಕ್ಷಮೆಯಾಚನೆ ವಿಡಿಯೊ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿ’

Published:
Updated:

ಜಬಲ್‌ಪುರ್, ಮಧ್ಯಪ್ರದೇಶ,: ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಈ ದೃಶ್ಯದ ವಿಡಿಯೊ ತುಣುಕುಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಬೇಕು ಎಂದು ಮಧ್ಯಪ್ರದೇಶದ ಸಾಮಾಜಿಕ ನ್ಯಾಯ, ಅಂಗವಿಕಲ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ ಸಚಿವ ಲಖನ್ ಘಂಘೋರಿಯಾ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. 

ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿ ಆರ್.ಎಸ್. ಝಾ ಮತ್ತು ನ್ಯಾಯಮೂರ್ತಿ ವಿ.ಕೆ. ಶುಕ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದ್ದು, ಸಾರ್ವಜನಿಕ ರ‍್ಯಾಲಿಗಳಲ್ಲಿ ಕ್ಷಮೆ ಯಾಚಿಸುವಂತೆ ಸಚಿವ ಲಖನ್‌ಗೆ ಸೂಚಿಸಿದೆ. 

ಜಬಲ್‌ಪುರ ಬೆಟ್ಟ ಪ್ರದೇಶದಲ್ಲಿ ಅತಿಕ್ರಮಣ ಮಾಡಿದ್ದ ಜಾಗವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಲಖನ್ ಘಂಘೋರಿಯಾ ನೀಡಿದ್ದ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ್ದ ಅರ್ಜಿದಾರರೊಬ್ಬರು, ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಲಖನ್ ಅವರ ಹೇಳಿಕೆವುಳ್ಳ ದೃಶ್ಯಗಳ ವಿಡಿಯೊ ಸಮೇತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

‘ಈ ಹಂತದಲ್ಲಿ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸೂಚಿಸುವುದಿಲ್ಲ. ಆದರೆ, ಭವಿಷ್ಯದಲ್ಲಿ ಸಚಿವರಿಂದ ಇಂಥ ವರ್ತನೆ ಮರುಕಳಿಸಿದಲ್ಲಿ ಈ ಅರ್ಜಿಯನ್ನು ಸೂಕ್ತವಾದ ಕ್ರಮಕೈಗೊಳ್ಳಲು ಪರಿಗಣಿಸಲಾಗುವುದು’ ಎಂದು ಎಚ್ಚರಿಸಿದ ಹೈಕೋರ್ಟ್, ವಿಚಾರಣೆ ನವೆಂಬರ್ 9ಕ್ಕೆ ಮುಂದೂಡಿದೆ.

Post Comments (+)