ಇರಾಕ್–ಅಫ್ಘಾನಿಸ್ತಾನ ನಂತರ ಹೆಚ್ಚು ಉಗ್ರರ ದಾಳಿಗೊಳಗಾದ ರಾಷ್ಟ್ರ ಭಾರತ: ವರದಿ

7

ಇರಾಕ್–ಅಫ್ಘಾನಿಸ್ತಾನ ನಂತರ ಹೆಚ್ಚು ಉಗ್ರರ ದಾಳಿಗೊಳಗಾದ ರಾಷ್ಟ್ರ ಭಾರತ: ವರದಿ

Published:
Updated:

ನವದೆಹಲಿ: ವಿಶ್ವದಾದ್ಯಂತ 2017ರಲ್ಲಿ ಅತಿಹೆಚ್ಚು ಬಾರಿ ಉಗ್ರರ ದಾಳಿಗೊಳಗಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಅಮೆರಿಕ ರಾಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ದೇಶವು ಸತತ ಎರಡನೇ ವರ್ಷವೂ ಮೂರನೇ ಸ್ಥಾನದಲ್ಲಿ ಮುಂದುವರಿದಂತಾಗಿದೆ.

ಭಯೋತ್ಪಾದನೆ ಹಾಗೂ ಅದರ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ರಾಷ್ಟ್ರೀಯ ಒಕ್ಕೂಟವೊಂದನ್ನು ಅಮೆರಿಕ ರಾಜ್ಯ ಸಚಿವಾಲಯ ರಚಿಸಿತ್ತು. ಅದು ವರದಿ ತಯಾರಿಸಿದ್ದು, ಅದರ ಪ್ರಕಾರ ಮೊದಲೆರಡು ಸ್ಥಾನಗಳಲ್ಲಿ ಇರಾಕ್‌ ಹಾಗೂ ಅಫ್ಘಾನಿಸ್ತಾನ ರಾಷ್ಟ್ರಗಳಿವೆ. 2015ರ ವರೆಗೂ ಪಾಕಿಸ್ತಾನ ಮೂರನೇ ಸ್ಥಾನದಲ್ಲಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ಭಾರತ ಹಾಗೂ ಪಾಕಿಸ್ತಾನದಲ್ಲಿ ಜರುಗುವ ಭಯೋತ್ಪಾದನೆ ಚಟುವಟಿಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದಿದ್ದಾರೆ. ‘ದೇಶದಲ್ಲಿನ ಉಗ್ರ ಚಟುವಟಿಕೆಗಳನ್ನು ಪಾಕಿಸ್ತಾನ ಪ್ರಾಯೋಜಿಸುತ್ತಿದೆ. ಅದರ ಸಂಸ್ಥೆಗಳು ಹಾಗೂ ಸೇನೆ ಉಗ್ರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿವೆ. ಮತ್ತೊಂದೆಡೆ ದಶಕಗಳಿಂದ ಆಶ್ರಯ ನೀಡಿ ಬೆಳೆಸಿದ್ದ ಭಯೋತ್ಪಾದಕ ಸಂಘಟನೆಗಳಿಂದಲೇ ಅದು(ಪಾಕಿಸ್ತಾನ) ದಾಳಿಯನ್ನು ಎದುರಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಭಾರತದಲ್ಲಿ 2017ರಲ್ಲಿ ಒಟ್ಟು 860 ಉಗ್ರ ದಾಳಿ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಪ್ರಕರಣಗಳು ಜಮ್ಮು ಕಾಶ್ಮೀರ(25%), ಛತ್ತೀಸ್‌ಗಡ(15%) ಹಾಗೂ ಪಶ್ಚಿಮ ಬಂಗಾಳ(10%) ರಾಜ್ಯಗಳಲ್ಲಿ ವರದಿಯಾಗಿವೆ ಎಂದು ತಿಳಿಯಲಾಗಿದೆ.

2016ರಲ್ಲಿ ಭಾರತದಲ್ಲಿ ಒಟ್ಟು 931 ಪ್ರಕರಣಗಳು ವರದಿಯಾಗಿದ್ದವು. 2016ಕ್ಕೆ ಹೋಲಿಸಿದರೆ 2017ರಲ್ಲಿ ದಾಖಲಾದ ಭಯೋತ್ಪಾದನೆ ಪ್ರಕರಣಗಳಲ್ಲಿ ಶೇ. 8 ರಷ್ಟು ಇಳಿಕೆಯಾಗಿವೆ. ಆದರೆ ಸಾವಿನ ಪ್ರಮಾಣ ಏರಿಕೆಯಾಗಿದೆ. 2016ರಲ್ಲಿ 344 ಸಾವು ಸಂಭವಿಸಿದ್ದರೆ, 2017ರಲ್ಲಿ 380 ಜೀವಗಳು ಬಲಿಯಾಗಿವೆ.

ಭಾರತದಲ್ಲಿ ವರದಿಯಾಗುವ ಶೇ. 53 ರಷ್ಟು ಪ್ರಕರಣಗಳು ಮಾವೋವಾದಿಗಳು ಸಂಘಟಿಸುವ ದಾಳಿಗಳಾಗಿವೆ. 2016ರಲ್ಲಿ ಮಾವೋವಾದಿಗಳು ಸಂಘಟಿಸಿದ್ದ 338 ಪ್ರಕರಣಗಳು ವರದಿಯಾಗಿದ್ದವು. ಮಾವೋವಾದಿಗಳನ್ನು ಇಸ್ಲಾಮಿಕ್‌ ಸ್ಟೇಟ್ಸ್‌, ತಾಲಿಬಾನ್‌ ಹಾಗೂ ಅಲ್‌ ಶಬಾದ್‌ ಸಂಘಟನೆಗಳ ನಂತರ ವಿಶ್ವದ ಅತ್ಯಂತ ಕ್ರೂರ ಸಂಘಟನೆ ಎಂದು ವರದಿಯಲ್ಲಿ ಹೇಳಲಾಗಿದೆ. 2017ರಲ್ಲಿ ಈ ನಾಲ್ಕು ಸಂಘಟನೆಗಳು ಕ್ರಮವಾಗಿ 857, 703, 353 ಮತ್ತು 295 ದಾಳಿ ಪ್ರಕರಣಗಳಿಗೆ ಕಾರಣವಾಗಿವೆ.

ವಿಶ್ವದಾದ್ಯಂತ 2017ರಲ್ಲಿ ಒಟ್ಟು 8,584 ಪ್ರಕರಣಗಳು ವರದಿಯಾಗಿವೆ. ಈ ವೇಳೆ 18,753 ಮೃತಪಟ್ಟು, 19,641 ಜನರು ಗಾಯಗೊಂಡಿದ್ದಾರೆ. ಇರಾಕ್‌ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ಕ್ರಮವಾಗಿ 1951, 1171 ಪ್ರಕರಣಗಳು ವರದಿಯಾಗಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !