ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡಿ: ವಿರೋಧಪಕ್ಷಗಳ ಪ್ರತಿನಿಧಿಗಳ ಒತ್ತಾಯ

ಬುಧವಾರ, ಜೂನ್ 19, 2019
26 °C
ಒಂದುಕಡೆ ವ್ಯತ್ಯಾಸ ಕಂಡುಬಂದರೂ ಇಡೀ ಕ್ಷೇತ್ರದ ತಾಳೆ ಮಾಡಬೇಕು

ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡಿ: ವಿರೋಧಪಕ್ಷಗಳ ಪ್ರತಿನಿಧಿಗಳ ಒತ್ತಾಯ

Published:
Updated:
Prajavani

ನವದೆಹಲಿ: ‘ಎಣಿಕೆಯ ದಿನ, ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿದ ನಂತರವೇ ಮತಯಂತ್ರದಲ್ಲಿ ದಾಖಲಾಗಿರುವ ಮತಗಳನ್ನು ಬಹಿರಂಗಪಡಿಸಬೇಕು’ ಎಂದು ವಿರೋಧಪಕ್ಷಗಳ ಪ್ರತಿನಿಧಿಗಳು ಚುನಾವಣಾ ಆಯೋಗವನ್ನು ಮಂಗಳವಾರ ಒತ್ತಾಯಿಸಿದ್ದಾರೆ.

22 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಂಗಳವಾರ ಚುನಾವಣಾ ಆಯೋಗವನ್ನು ಭೇಟಿಮಾಡಿ ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಈ ಬಾರಿ ‘ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ಮತಗಟ್ಟೆಗಳನ್ನು ಆಯ್ಕೆ ಮಾಡಿ, ಅಲ್ಲಿಯ ವಿವಿಪ್ಯಾಟ್‌ ಮತಗಳನ್ನು ಇವಿಎಂಗಳಿಗೆ ತಾಳೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು ಅದಕ್ಕೆ ಆಯೋಗ ಸಿದ್ಧತೆ ಮಾಡಿಕೊಂಡಿದೆ.

ಮಂಗಳವಾರ ಆಯೋಗವನ್ನು ಭೇಟಿಮಾಡಿರುವ ವಿರೋಧಪಕ್ಷಗಳ ಪ್ರತಿನಿಧಿಗಳು, ‘ಮೊದಲು ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿ ಆನಂತರ ಅದನ್ನು ಇವಿಎಂಗಳಿಗೆ ತಾಳೆ ಮಾಡಬೇಕು. ಒಂದುಕಡೆ ವ್ಯತ್ಯಾಸ ಕಂಡುಬಂದರೂ ಆ ವಿಧಾನಸಭಾ ಕ್ಷೇತ್ರದ ಎಲ್ಲ ವಿವಿಪ್ಯಾಟ್‌ಗಳನ್ನೂ ತಾಳೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಮತದಾನದ ಸಂದರ್ಭದಲ್ಲಿ ಅನೇಕ ಮತಯಂತ್ರಗಳು ಸರಿಯಾಗಿ ಕೆಲಸ ಮಾಡಿರಲಿಲ್ಲ. ಕೆಲವೆಡೆ ಮತದಾರರು ಚಲಾಯಿಸಿದ ಮತ ಅವರು ಉದ್ದೇಶಿಸಿದ ಪಕ್ಷದ ಬದಲು ಬೇರೆ ಪಕ್ಷಕ್ಕೆ, ವಿಶೇಷವಾಗಿ ಬಿಜೆಪಿಗೆ ಹೋಗಿರುವ ಬಗ್ಗೆ ದೂರುಗಳು ಬಂದಿವೆ. ಈ ಎಲ್ಲ ವಿಚಾರಗಳನ್ನು ನಾವು ಆಯೋಗದ ಗಮನಕ್ಕೆ ತಂದಿದ್ದೇವೆ. ಕಳೆದ ಮೂರು– ನಾಲ್ಕು ವರ್ಷಗಳಿಂದ ನಾವು ಇವಿಎಂಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡ ಗುಲಾಂನಬಿ ಆಜಾದ್‌ ಹೇಳಿದ್ದಾರೆ.

‘ನಾವು ಈ ವಿಚಾರಗಳನ್ನು ಹಿಂದೆಯೇ ಆಯೋಗದ ಗಮನಕ್ಕೆ ತಂದಿದ್ದರೂ ಅವರು ‘ಬುಧವಾರ ಸಭೆ ಆಯೋಜಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ’ ಎಂದು ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಘ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜನರ ತೀರ್ಪನ್ನು ಗೌರವಿಸಿ ಎಂದು ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತಿದ್ದೇವೆ. ದೇಹದಲ್ಲಿ ಯಾವುದೋ ತೊಂದರೆ ಇದೆ ಎಂಬುದು ರಕ್ತ ಪರೀಕ್ಷೆಯಿಂದ ತಿಳಿದುಬಂದರೆ, ಇಡೀ ಶರೀರವನ್ನು ತಪಾಸಣೆಗೆ ಒಳಪಡಿಸುತ್ತೇವೆ. ಅದರಂತೆ ಒಂದು ಕಡೆ ವ್ಯತ್ಯಾಸವಾದರೂ ಎಲ್ಲಾ ಕಡೆಗಳಲ್ಲಿ ಮತಗಳ ತಾಳೆ ಮಾಡುವ ಕೆಲಸ ಮಾಡಬೇಕು ಎಂದು ನಾವು ಒತ್ತಾಯಿಸಿದ್ದೇವೆ’ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಸಂಪರ್ಕದಲ್ಲಿರಲು ನಿರ್ಧಾರ

ಚುನಾವಣಾ ಆಯೋಗವನ್ನು ಭೇಟಿ ಮಾಡುವುದಕ್ಕೂ ಮುನ್ನ ಈ 22 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆ ನಡೆಸಿ, ಮತ ಎಣಿಕೆಯ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಮತ ಎಣಿಕೆಯ ದಿನ ಪರಸ್ಪರರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರಬೇಕು ಎಂದು ಎಲ್ಲ ಪಕ್ಷಗಳು ತೀರ್ಮಾನಿಸಿವೆ.

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯ ಸಾಧ್ಯತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದು ಯೋಜನೆ ರೂಪಿಸಲಾಗಿದೆ.

‘ಸೋಲು ಒಪ್ಪಿಕೊಳ್ಳಿ’

ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ವಿರೋಧ ಪಕ್ಷಗಳವರ ಕ್ರಮವನ್ನು ಟೀಕಿಸಿರುವ ಬಿಜೆಪಿ ‘ಸೋಲನ್ನು ಒಪ್ಪಿಕೊಳ್ಳಿ’ ಎಂದು ವಿರೋಧಪಕ್ಷಗಳಿಗೆ ಸಲಹೆ ನೀಡಿದೆ.

ವಿರೋಧಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿರುವ ಕೇಂದ್ರದ ಕಾನೂನು ಸಚಿವ ರವಿಶಂಕರ್ ಪ್ರಸಾದ್‌, ‘ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಅಮರಿಂದರ್‌ ಸಿಂಗ್‌ ಹಾಗೂ ಅರವಿಂದ ಕೇಜ್ರಿವಾಲ್‌ ಅವರು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವಾಗ ಮತಯಂತ್ರಗಳು ಸರಿಯಾಗಿರುತ್ತವೆ. ಮೋದಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದಾಗ ಅವುಗಳು ವಿಶ್ವಾಸಕ್ಕೆ ಅರ್ಹವಲ್ಲದ ಯಂತ್ರಗಳಾಗುತ್ತವೆ’ ಎಂದು ವ್ಯಂಗ್ಯವಾಡಿದ್ದಾರೆ.

ಎಲ್ಲಾ ಮತಯಂತ್ರ ತಾಳೆಗೆ ನಿರಾಕರಣೆ

ನವದೆಹಲಿ: ‘ಮತಯಂತ್ರಗಳ ವಿನ್ಯಾಸದಲ್ಲೇ ಕೆಲವು ಸಮಸ್ಯೆಗಳಿರುವುದರಿಂದ ಚುನಾವಣೆಯಲ್ಲಿ ಬಳಸಿದ್ದ ಪ್ರತಿಯೊಂದು ವಿವಿಪ್ಯಾಟ್‌ ಯಂತ್ರವನ್ನೂ ಮತಯಂತ್ರದ ಜೊತೆ ತಾಳೆ ಮಾಡುವಂತೆ ಆಯೋಗಕ್ಕೆ ಸೂಚನೆ ನೀಡಬೇಕು’ ಎಂದು ಚೆನ್ನೈ ಮೂಲದ ‘ಟೆಕ್‌4ಆಲ್‌’ ಸಂಸ್ಥೆಯವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

‘ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ಈ ಕುರಿತು ಈಗಾಗಲೇ ಆದೇಶವನ್ನು ನೀಡಿದೆ. ಅದನ್ನು ಮೀರಿ ಆದೇಶ ನೀಡಲು ನಮ್ಮಿಂದ ಸಾಧ್ಯವಿಲ್ಲ. ಈ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ನಿಮ್ಮ ವಾದ ಅಸಂಬದ್ಧವಾದುದು. ನೀವು ಸುಮ್ಮನೆ ತೊಂದರೆ ಉಂಟು ಮಾಡುತ್ತಿದ್ದೀರಿ’ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಹಾಗೂ ಎಂ.ಆರ್‌. ಶಾ ಅವರನ್ನೊಳಗೊಂಡ ಪೀಠ ಹೇಳಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !