ಸೋಮವಾರ, ಆಗಸ್ಟ್ 15, 2022
26 °C
ಅರ್ಜಿ ವಿಚಾರಣೆ ವೇಳೆ ಸಂತ್ರಸ್ತೆ, ದೂರುದಾರರಿಗೂ ನೋಟಿಸ್ ನೀಡಲು ಆದೇಶ

ದೌರ್ಜನ್ಯ ಪ್ರಕರಣ| ಆರೋಪಿಗಳ ಜಾಮೀನು ವಿಚಾರಣೆ ವೇಳೆ ಸಂತ್ರಸ್ತೆಗೂ ಮಾಹಿತಿ ಕಡ್ಡಾಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

delhi high court

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯ ವೇಳೆ ಸಂತ್ರಸ್ತೆಗೂ ಮಾಹಿತಿ ನೀಡಬೇಕು. ಬಹಳಷ್ಟು ಪ್ರಕರಣಗಳಲ್ಲಿ ಸಂತ್ರಸ್ತೆಗೆ ಇದರ ಮಾಹಿತಿಯೇ ಇರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಅಪ್ರಾಪ್ತೆಯ ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ ವಿಷಯಕ್ಕೆ ಸಂಬಂಧಿಸಿ ಕೋರ್ಟ್‌ ಈ ಅಭಿಪ್ರಾಯಪಟ್ಟಿತು. ಪ್ರಸಕ್ತ ಲಾಕ್‌ಡೌನ್‌ನಂಥ ತುರ್ತು ಸನ್ನಿವೇಶಗಳಲ್ಲಿ ಪೋಕ್ಸೊ ನ್ಯಾಯಾಲಯಗಳಲ್ಲಿ ನಿಯಮಿತವಾಗಿ ಕಾರ್ಯನಿರ್ವಹಿಸದ ಸೆಷನ್ಸ್‌ ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುತ್ತಾರೆ. ಅವರಿಗೆ ಇಂಥ ಕಡ್ಡಾಯ ನಿಬಂಧನೆಗಳ ಬಗ್ಗೆ ಸಂವೇದನೆ ಮೂಡಿಸುವುದು ಅಗತ್ಯ ಎಂದೂ ನ್ಯಾಯಾಲಯ ತಿಳಿಸಿದೆ.

ಈ ಪ್ರಕರಣದಲ್ಲಿ ಆರೋಪಿಗೆ ಮಧ್ಯಂತರ ಜಾಮೀನು ನೀಡಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಕೋರ್ಟ್‌ ರದ್ದುಪಡಿಸಿತು. ವಾರದ ಒಳಗೆ, ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಸಂವೇದನಾಶೀಲ ನಿಯಮಗಳ ಬಗ್ಗೆ ವಿಡಿಯೊಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮ ನಡೆಸಬೇಕು. ಜಾಮೀನು ನೀಡುವಾಗ ಕಡ್ಡಾಯವಾಗಿ ಪಾಲಿಸಬೇಕಾದ ಷರತ್ತುಗಳ ಮಹತ್ವ ತಿಳಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್‌ ನಿರ್ದೇಶನ ನೀಡಿತು.

ಸಂತ್ರಸ್ತೆಗೆ ವಿಚಾರಣೆಯ ಮುನ್ಸೂಚನೆ ನೀಡದೇ, ಆರೋಪಿಗೆ ಜಾಮೀನು ನೀಡಿರುವುದು ದೀರ್ಘಕಾಲಿಕ ಮತ್ತು ಗಂಭೀರ ಸಮಸ್ಯೆಯೊಂದನ್ನು ಎತ್ತಿತೋರಿಸಿದೆ. ಐಪಿಸಿ ಅಥವಾ ಪೋಕ್ಸೊ ಕಾಯ್ಡೆಯಡಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಜಾಮೀನು ವಿಚಾರಣೆ ವೇಳೆ ಸಂತ್ರಸ್ತೆ ಹೇಳಿಕೆಗೆ ಅವಕಾಶ ನೀಡದಿರುವುದು ಕಂಡುಬರುತ್ತಿದೆ ಎಂದು ನ್ಯಾಯಮೂರ್ತಿಯಾದ ಪ್ರತಿಭಾ ಎಂ.ಸಿಂಗ್‌ ತಿಳಿಸಿದರು.

ಹೈಕೋರ್ಟ್‌ನ ಸೂಚನೆಯಂತೆ ರಿಜಿಸ್ಟ್ರಾರ್ ಜನರಲ್ ಅವರು ಕೆಳಹಂತದ ನ್ಯಾಯಾಲಯಗಳಿಂದ ಏಪ್ರಿಲ್ 22ರಿಂದ ಮೇ 23ರವರೆಗಿನ (ಲಾಕ್ ಡೌನ್ ಅವಧಿ) ಮಾಹಿತಿ ಸಂಗ್ರಹಿಸಿದ್ದರು. ಇದರ  ಪ್ರಕಾರ, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿತ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ 294 ಪ್ರಕರಣಗಳಲ್ಲಿ 79ರಲ್ಲಿ ಮಾತ್ರ ಅರ್ಜಿದಾರರಿಗೆ ವಿಚಾರಣೆ ಬಗ್ಗೆ ನೋಟಿಸ್‌ ನೀಡಲಾಗಿತ್ತು.

ಆರೋಪಿಗೆ ಮಧ್ಯಂತರ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಬಾಲಕಿ ತಾಯಿಯ ಪರವಾಗಿ ವಕೀಲರಾದ ತಾರಾ ನರುಲಾ ಅರ್ಜಿ ಸಲ್ಲಿಸಿದ್ದರು. ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿದ್ದರು. ಜಾಮೀನು ನೀಡುವಾಗ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದಿರುವುದು  ಸೆಷನ್ಸ್ ಕೋರ್ಟ್ ಕಡೆಯಿಂದ ಆಗಿರುವ ಲೋಪ ಎಂದು ವಾದಿಸಿದ್ದರು.

2018ರ ಏಪ್ರಿಲ್ 21ರಂದು ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಇದರ ಪ್ರಕಾರ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಂತ್ರಸ್ತೆಯ ಪರವಾಗಿ ಯಾರಾದರೂ ಒಬ್ಬರು ಹಾಜರಿರುವುದು ಅಗತ್ಯ ಎಂಬ ಅಂಶವನ್ನು ಅವರು ಉಲ್ಲೇಖಿಸಿದ್ದರು.

ಈ ಪ್ರಕರಣಲ್ಲಿ ಆರೋಪಿಗೆ ನೀಡಿರರುವ ಜಾಮೀನು ಅವಧಿಯು ಜೂನ್ 5ರಂದು ಕೊನೆಗೊಂಡಿದೆ. ಅದೇ ದಿನ ನೋಟಿಸ್ ಕುರಿತಂತೆ ಹೈಕೋರ್ಟ್ ಆದೇಶ ನೀಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು